ಚನ್ನಗಿರಿ ಕುಟುಂಬಕ್ಕೆ ನುಡಿ ನಮನ

ಚನ್ನಗಿರಿ ವಿರೂಪಾಕ್ಷಪ್ಪ ಉಚಿತ ಹಾಸ್ಟೆಲ್‌ನ ಹಿರಿಯ ವಿದ್ಯಾರ್ಥಿಗಳಿಂದ ಋಣ-ಸ್ಮರಣ ಹೊತ್ತಿಗೆ ಲೋಕಾರ್ಪಣೆ

ದಾವಣಗೆರೆ, ನ.14- ನಾಲ್ಕೈದು ದಶಕಗಳ ಹಿಂದಿನ ಘಟನೆಗಳ ಮೆಲುಕು, ಭಾವುಕತೆ, ಶೈಕ್ಷಣಿಕ ಮುನ್ನಡೆ ಸಾಧ್ಯವೇ ಇಲ್ಲವೆನ್ನುವ ಸಮಯದಲ್ಲಿ ಊಟ, ವಸತಿ ನೀಡಿ ಮುನ್ನಡೆಸಿದ ದಾನಿಗಳಿಗೊಂದು ನಮನ, ಋಣ ಸ್ಮರಣೆ ಕೃತಿ ಲೋಕಾರ್ಪಣೆ. 

ಚನ್ನಗಿರಿ ವಿರೂಪಾಕ್ಷಪ್ಪ ಉಚಿತ ವಿದ್ಯಾರ್ಥಿ ನಿಲಯದ ಸೌಲಭ್ಯ ಪಡೆದು ಸಮಾಜದಲ್ಲಿ ನೆಲೆ ಕಂಡು ಕೊಂಡ ಹಿರಿಯ ವಿದ್ಯಾರ್ಥಿಗಳು ಸೇರಿ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ರಂಗ ಮಹಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ ನೆರೆದಿದ್ದವರನ್ನು ಮೂಕ ವಿಸ್ಮತರನ್ನಾಗಿಸಿತು. ಅಷ್ಟೇ ಅಲ್ಲ ಬಡತನದಲ್ಲಿ ಬದುಕಿಗೆ ಬೆಳಕಾದವರನ್ನು ನೆನೆಯಬೇಕಾದ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಗತ್ಯ ಎನ್ನುವುದನ್ನು ಸಾರಿ ಹೇಳಿದಂತಿತ್ತು.

ನೆರೆದಿದ್ದವರೆಲ್ಲರೂ ಇಂದು ಪ್ರತಿಷ್ಠಿತ ಹುದ್ದೆಯಲ್ಲಿದ್ದವರು ಅಥವಾ ಹುದ್ದೆಯಿಂದ ನಿವೃತ್ತರಾಗಿ ಮಕ್ಕಳು, ಮೊಮ್ಮಕ್ಕಳೊಡನೆ ಸುಖಿ ಜೀವನ ಸಾಗಿಸುತ್ತಿರುವವರು. ದಾವಣಗೆರೆ ಹಾಗೂ ಬೇರೆ ನಗರಗಳಿಂದ ಬಂದು ಸಮಾಗಮಗೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿದ್ದ ಕಷ್ಟಗಳನ್ನು ಮೆಲುಕು ಹಾಕಿದರು. ಅಂದು ಊಟ, ವಸತಿ ನೀಡಿದ ಚನ್ನಗಿರಿ ಮನೆತನವನ್ನು ಮನಸಾರೆ ಸ್ಮರಿಸಿ,  ನುಡಿ ನಮನ ಸಲ್ಲಿಸಿದರು. ಸನ್ಮಾನಿಸಿದರು. ಮುಂದಿನ ತಲೆ ಮಾರು ಸಹ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಚನ್ನಗಿರಿ ವಿರೂಪಾಕ್ಷಪ್ಪ ಉಚಿತ ವಿದ್ಯಾರ್ಥಿ ನಿಲಯದ ಹಿರಿಯ ವಿದ್ಯಾರ್ಥಿಗಳ ಸವಿನೆನಪಿನ ಋಣ-ಹೊತ್ತಿಗೆ ಯನ್ನು ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷರಾಗಿರುವ, ಕಾರ್ಯಕ್ರಮದ ಅಧ್ಯಕ್ಷತೆಯನ್ನೂ ವಹಿಸಿದ್ದ ಸಿ.ಆರ್. ವಿರೂಪಾಕ್ಷಪ್ಪನವರು ಲೋಕಾರ್ಪಣೆಗೊಳಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿ.ಚನ್ನಗಿರಿ ವಿರೂಪಾಕ್ಷಪ್ಪನವರು 1900ರ ನವೆಂಬರ್ 5 ರಂದು ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್ ಆರಂಭಿಸಿದರು. ಆಗ ಅದು ಊರಿನ ಹೊರಭಾಗದಲ್ಲಿತ್ತು. ಆದರೆ ಈಗ ಮಧ್ಯಭಾಗದಲ್ಲಿದೆ. ಆರಂಭದಲ್ಲಿ ನಗರಕ್ಕೆ ಬಂದು ಹೋಗುವವರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಧರ್ಮಕಾರ್ಯ ಆರಂಭವಾಯಿತು ಎಂದು ನೆನಪಿಸಿಕೊಂಡರು.

ನಂತರ ಧರ್ಮಶಾಲೆ ಆರಂಭಿಸುವ ಕನಸನ್ನು ದಿ.ಚನ್ನಗಿರಿ ವಿರೂಪಾಕ್ಷಪ್ಪನವರು ಕಂಡಿದ್ದರಾದರೂ, ನನಸು ಮಾಡಿದ್ದು ಅವರ ಪುತ್ರ ಚನ್ನಗಿರಿ ರಂಗಪ್ಪ ಅವರು. 1926ರಲ್ಲಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿ, ಬಡತನದಲ್ಲಿದ್ದ ವಿದ್ಯಾರ್ಥಿಗಳಿಗೆ ನೆರವಾದರು. ಆರಂಭದಲ್ಲಿ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ನಂತರ ಇಂದಿನ  ಸ್ಥಿತಿಗೆ ತಕ್ಕಂತೆ ವಿದ್ಯಾರ್ಥಿ ನಿಲಯ ನವೀಕರಣಗೊಂಡಿತು ಎಂದು ಹೇಳಿದರು.

ಸಿ.ವಿ. ಹಾಸ್ಟೆಲ್‌ ಹಿರಿಯ ವಿದ್ಯಾರ್ಥಿಗಳೂ, ಋಣ-ಸ್ಮರಣೆ ಹೊತ್ತಿಗೆ ಪ್ರಧಾನ ಸಂಪಾದಕರೂ ಆದ ಡಾ.ಗಜಾನನ ಶರ್ಮ ಮಾತನಾಡುತ್ತಾ, ದೇವರು ನಮಗೆ ಬಡತನ ನೀಡಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಇಂತಹ ದಾನಿಗಳ ಸಹಾಯ ಪಡೆದು, ಅವರನ್ನು ಸ್ಮರಿಸುವಂತಹ ಪುಣ್ಯದ ಕೆಲಸಕ್ಕೆ ನಾವು ಪಾತ್ರರಾಗುತ್ತಿರಲಿಲ್ಲ ಎಂದು ಹೇಳಿದರು.

ಅಂದಿನ ದಿನಗಳಲ್ಲಿ ಓದು ಸುಲಭವಾಗಿರಲಿಲ್ಲ. ಎಂಜಿನಿಯರಿಂಗ್ ಮಾಡುವ ಕನಸನ್ನು ಕಾಣಲೂ ಸಹ ಯೋಗ್ಯರಲ್ಲ ಎಂಬ ದಿನದಲ್ಲಿ ಓದುವ ಸೌಭಾಗ್ಯ ಕಲ್ಪಿಸಿದ್ದು ಚನ್ನಗಿರಿ ವಿರೂಪಾಕ್ಷಪ್ಪ ಹಾಸ್ಟೆಲ್ ಎಂದು ಭಾವುಕರಾಗಿ ನುಡಿದರು.

ತಾಯಿಯ ಋಣ ಹಾಗೂ ಭೂಮಿಯ ಋಣ ತೀರಿಸಲಾಗದು. ಆದರೆ ನಮ್ಮ ಬದುಕಿಗೆ ಬೆಳಕಾದವರ ಋಣ ತೀರಿಸುವ ಉದ್ದೇಶದಿಂದ, ಅವರ ಕುಟುಂಬವನ್ನು ಖುದ್ದು ಭೇಟಿ ಮಾಡಿ ಋಣ ಸ್ಮರಣೆ ಹೊತ್ತಿಗೆ ಲೋಕಾರ್ಪಣೆ ಮಾಡಲು ನಿರ್ಧರಿಸಿದ್ದಾಗಿ ಹೇಳಿದರು. ಪ್ರಸ್ತುತ ಟ್ರಸ್ಟ್ ಅಧ್ಯಕ್ಷರಾಗಿರುವ ಸಿ.ಆರ್. ವಿರೂಪಾಕ್ಷಪ್ಪನವರು ನೂರು ಕಾಲ ಬಾಳಲಿ ಎಂದು ಆಶಿದರು.

ಮತ್ತೋರ್ವ ಹಿರಿಯ ವಿದ್ಯಾರ್ಥಿ, ಋಣ ಸ್ಮರಣ ಹೊತ್ತಿಗೆ ಆಯೋಜಕರೂ ಆದ ಡಾ.ಕೆ.ಎನ್. ವೆಂಕಟಕೃಷ್ಣರಾವ್,  ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚನ್ನಗಿರಿ ಭರತ್, ಟ್ರಸ್ಟಿಗಳಾದ ಆರ್.ಆರ್. ರಮೇಶ್ ಬಾಬು, ಸಿ.ಆರ್. ಸತ್ಯನಾರಾಯಣ, ಸಿ.ಆರ್. ಕೃಷ್ಣಮೂರ್ತಿ, ಬಿ.ವಿ.ಗಂಗಪ್ಪ ಶೆಟ್ಟಿ, ಚನ್ನಗಿರಿ ಶರತ್ ಉಪಸ್ಥಿತರಿದ್ದರು.

ಕುಮಾರಿ ನೇಹಾ ಭರತ್ ಚನ್ನಗಿರಿ ಪ್ರಾರ್ಥಿಸಿದರು. ಶ್ರೀಮತಿ ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಡಾ.ಕೆ.ಎನ್.ವಿ. ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಾಲಿಗ್ರಾಮ ಗಣೇಶ್ ಶೆಣೈ ನಿರೂಪಿಸಿದರು. ವಿ.ಆರ್. ಶ್ರೀನಿವಾಸ ಮೂರ್ತಿ ವಂದಿಸಿದರು.

error: Content is protected !!