ಜನರು ಅಲೆದಾಡುವುದನ್ನು ತಪ್ಪಿಸಲು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲೇ ಶುಲ್ಕ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಾಧಿಕಾರದಲ್ಲೇ ಅರ್ಜಿ ಪಡೆದ ನಂತರ, ಅಗತ್ಯ ದಾಖಲೆಗಳೊಂದಿಗೆ ಸ್ಥಳದಲ್ಲೇ ನೋಂದಣಿ ಶುಲ್ಕ ಪಾವತಿಸಬಹುದು.
ಬಿ.ಟಿ. ಕುಮಾರಸ್ವಾಮಿ, ಪ್ರಾಧಿಕಾರದ ಆಯುಕ್ತ
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಎರಡು ಕೌಂಟರ್‌ಗಳನ್ನು ತೆರೆಯಲಾಗುವುದು. ಅರ್ಜಿ ಶುಲ್ಕ ಕಟ್ಟಲು ಒಂದು ಹಾಗೂ ನೋಂದಣಿ ಶುಲ್ಕ ಕಟ್ಟಲು ಇನ್ನೊಂದು ಕೌಂಟರ್ ಕಾರ್ಯ ನಿರ್ವಹಿಸಲಿದೆ.
ಪ್ರಶಾಂತ ಕುಮಾರ್ ಕದಾಳೆ, ಶಾಖಾ ಪ್ರಬಂಧಕರು
ದಾವಣಗೆರೆ, ಆ. 11 – ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ವಸತಿ ಬಡಾವಣೆ ಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಕರೆಯಲಾಗಿರುವ ಬೇಡಿಕೆ ಸಮೀಕ್ಷೆಗಾಗಿ ಅರ್ಜಿಗಳನ್ನು ಸಲ್ಲಿಸುವಲ್ಲಿ ಬುಧವಾರ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗುರು ವಾರದಿಂದ ಪ್ರಾಧಿಕಾರದ ಆವರಣ ದಲ್ಲಿ ಶುಲ್ಕ ಪಾವತಿ ಹಾಗೂ ಅರ್ಜಿ ಸ್ವೀಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಗರದ ಪಿ.ಬಿ. ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕ ಸಲ್ಲಿಸಬೇಕೆಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಸ್ಪಷ್ಟ ಸೂಚನೆ ಬಂದಿಲ್ಲ ಎಂದು ತಿಳಿಸಿದ್ದ ಬ್ಯಾಂಕ್ ಸಿಬ್ಬಂದಿ, ಕೇವಲ ಅರ್ಜಿ ಶುಲ್ಕ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದರು. ಅಲ್ಲದೇ, ಅರ್ಜಿ ಶುಲ್ಕ ಕಟ್ಟಿದ ನಂತರ ಅರ್ಜಿಗಳನ್ನು ಪಡೆಯಲು ಮತ್ತೆ ಪ್ರಾಧಿಕಾರದ ಬಳಿ ತೆರಳಬೇಕು ಎಂದು ತಿಳಿಸಲಾಗಿತ್ತು. ಶುಲ್ಕ ಒಂದೆಡೆ, ಅರ್ಜಿ ಮತ್ತೊಂದೆಡೆ ಎಂಬುದು ತೊಡಕಾಗಿತ್ತು. ಇದರ ಜೊತೆಗೆ ಶುಲ್ಕ ಕಟ್ಟುವ ಫಾರಂಗಳೂ ಸಹ ಮಧ್ಯಾಹ್ನದ ವೇಳೆ ಖಾಲಿಯಾಗಿದ್ದವು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬ್ಯಾಂಕ್‌ನ ಶಾಖಾ ಪ್ರಬಂಧಕ ಪ್ರಶಾಂತ್ ಕುಮಾರ್ ಬಿ. ಕದಾಳೆ, ಪ್ರಾಧಿಕಾರದಿಂದ ಬಂದಿರುವ ಮಾಹಿತಿ ಅಸ್ಪಷ್ಟವಾಗಿದೆ. ಹೀಗಾಗಿ ಪ್ರಸಕ್ತ ಅರ್ಜಿ ಶುಲ್ಕವನ್ನು ಮಾತ್ರ ಪಾವತಿಸಿಕೊಳ್ಳಲಾಗುತ್ತಿದೆ. ನೋಂದಣಿ ಶುಲ್ಕವನ್ನು ಒಂದೆರಡು ದಿನಗಳ ನಂತರ ಪಾವತಿಸುವಂತೆ ತಿಳಿಸಲಾಗುತ್ತಿದೆ ಎಂದರು.
ಜನರ ಸಮಸ್ಯೆ ಕುರಿತು ದೂರುಗಳು ಬಂದ ನಂತರ ಆ ಬಗ್ಗೆ ಕ್ರಮ ತೆಗೆದುಕೊಂಡಿರುವ ಪ್ರಾಧಿಕಾರದ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಪ್ರಾಧಿಕಾರದಲ್ಲೇ ಶುಲ್ಕ ಪಾವತಿಗೆ ವ್ಯವಸ್ಥೆ ಮಾಡಿದ್ದಾರೆ.
ನಾಳೆ ಗುರುವಾರದಿಂದ ಪ್ರಾಧಿ ಕಾರದಲ್ಲೇ ಅರ್ಜಿ ಶುಲ್ಕ ಹಾಗೂ ನೋಂದಣಿ ಶುಲ್ಕ ಪಾವತಿಸಿ ಕೊಳ್ಳಲಾಗುವುದು. ಪ್ರಾಧಿಕಾರದಲ್ಲೇ ಶುಲ್ಕ ಕಟ್ಟಿಸಿಕೊಳ್ಳಲು ಕೌಂಟರ್ ತೆಗೆ ಯುವುದಾಗಿ ಬ್ಯಾಂಕ್ ಆಫ್ ಬ ರೋಡ ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದವರು ಪತ್ರಿಕೆಗೆ ತಿಳಿಸಿದ್ದಾರೆ.
ಜನರು ಅಲೆದಾಡುವುದನ್ನು ತಪ್ಪಿ ಸಲು ಈ ವ್ಯವಸ್ಥೆ ಮಾಡಲಾಗಿದೆ. ಪ್ರಾಧಿಕಾರದಲ್ಲಿ ಶುಲ್ಕ ಪಾವತಿಸಿ ಅರ್ಜಿ ಪಡೆದ ನಂತರ, ಅಗತ್ಯ ದಾಖ ಲೆಗಳೊಂದಿಗೆ ಸ್ಥಳದಲ್ಲೇ ನೋಂದಣಿ ಶುಲ್ಕ ಪಾವತಿಸಬಹುದು ಎಂದವರು ಹೇಳಿದ್ದಾರೆ. ಪ್ರಥಮ ದಿನವೇ ಎರಡೂವರೆ ಸಾವಿರ ಅರ್ಜಿಗಳನ್ನು ವಿತರಿಸಲಾಗಿದೆ.