ಶಾಸಕ ಎಂಪಿಆರ್‌ಗೆ `ವಿಶೇಷ ಕೊರೊನಾ ವಾರಿಯರ್’ ಪ್ರಶಸ್ತಿ

ಕೆಲವರು ನಾನು ಮದವೇರಿದ ಆನೆ ಎನ್ನುತ್ತಾರೆ. ನಾನು ಮದವೇರಿದ ಆನೆಯಲ್ಲ, ಬದಲಿಗೆ ಪಳಗಿದ ಆನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕು, ಏನು ಮಾತನಾಡಬೇಕು? ಎಂಬುದನ್ನು ಕಲಿತಿದ್ದೇನೆ ಎಂದು ಹೇಳಿದ ಅವರು, ಕ್ಷೇತ್ರದ ಮತದಾರರು ಉಪಯೋಗ ಪಡೆಯಬಹುದು

– ಎಂ.ಪಿ.ರೇಣುಕಾಚಾರ್ಯ, ಶಾಸಕರು

ಹೊನ್ನಾಳಿ, ಆ.16- ಶಾಸಕನಾಗಿ, ಮಂತ್ರಿಯಾಗಿ ನಾವು ಬೆಳೆಯಲು ಪತ್ರಿಕೆಗಳ ಪಾತ್ರ ದೊಡ್ಡದಿದೆ. ಸ್ಥಳೀಯ ಪತ್ರಕರ್ತರು ಆರಂಭದಲ್ಲಿ ನನ್ನ ಕೆಲಸ ಕಾರ್ಯಗಳನ್ನು ಟೀಕಿಸಿ, ತಪ್ಪುಗಳನ್ನು ತಿದ್ದಿ ತೀಡಿದ ಪರಿಣಾಮ ನಾನು ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಯಿತು ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿನ್ನೆ ಇಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ, ಸಂಘ ನೀಡಿದ `ವಿಶೇಷ ಕೊರೊನಾ ವಾರಿಯರ್‌ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ಹೆಚ್ಚು ಓದಿರದ ತಾವು ರಾಜಕೀಯ ಕ್ಷೇತ್ರದಲ್ಲಿ ಆರಂಭದಲ್ಲಿ ಯಾವ ಅನುಭವವೂ ಇಲ್ಲದೇ ಧೈರ್ಯದಿಂದ ತಾಲ್ಲೂಕಿನಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿ, ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಶಾಸಕನಾದೆ ಎಂದು ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪತ್ರಿಕೆಗಳಲ್ಲಿ ಆರೋಗ್ಯಕರ ಸ್ಪರ್ಧೆಬೇಕು. ಸುದ್ದಿ ಮಾಡುವ ಧಾವಂತದಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸಬಾರದು. ಕೆಲವೊಂದು ಪತ್ರಿಕೆಗಳು ಈ ಕೆಲಸ ಮಾಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಿ, ಓದುಗರ ನಂಬಿಕೆಯನ್ನು  ಪತ್ರಿಕೆಗಳು ಕಳೆದುಕೊಳ್ಳದಂತೆ ಪತ್ರಕರ್ತರರಲ್ಲಿ ಜಾಗೃತಿ ಇರಬೇಕು. ಪತ್ರಿಕೆಗಳಿಲ್ಲದ ದಿನಗಳನ್ನು ನಾವು ನೀವೆಲ್ಲ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಕೊರೊನಾ ಸಂದರ್ಭದಲ್ಲಿ ಪತ್ರಕರ್ತರು ನನ್ನ  ಜೊತೆಗೆ ಹೆಜ್ಜೆ ಹಾಕಿ ಜನರಲ್ಲಿ ಜಾಗೃತಿ ಮೂಡಿಸಿದ್ದು. ನನಗೆ ಸಲ್ಲಬೇಕಾದ ಗೌರವ ಅವರಿಗೂ ಸಲ್ಲಬೇಕು ಎಂದರು. 

ತಹಶೀಲ್ದಾರ್ ಬಸವನಗೌಡ ಕೋಟೂರ ಮಾತನಾಡಿ, ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾ ನಂತರದಲ್ಲಿ ತಮ್ಮದೇಯಾದ ಕೊಡುಗೆ ನೀಡಿ ಕರ್ನಾಟಕ ಏಕೀಕರಣ ಸಂದರ್ಭದಲ್ಲೂ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸಿವೆ ಎಂದರು.

ಪಿಎಸ್‍ಐ ಬಸವನಗೌಡ ಬಿರಾದಾರ್ ಮಾತನಾಡಿ, ಪತ್ರಿಕೆಗಳಿಂದ ಎಷ್ಟೋ ಸಮಸ್ಯೆಗಳು ಬಗೆಹರಿದಿವೆ. ಇದು ನಮ್ಮ ಗಮನಕ್ಕೆ ಸಾಕಷ್ಟು ಬಾರಿ ಬಂದಿದೆ. ಎಷ್ಟೋ ವಿಷಯಗಳನ್ನು ಪತ್ರಕರ್ತರು ನಮಗೆ ಮುಂಚಿತವಾಗಿಯೇ ಮಾಹಿತಿ ನೀಡಿ, ನಮ್ಮ ಅನೇಕ ಕೆಲಸಗಳನ್ನು ಸುಲಭವಾಗಿಸುತ್ತಾರೆ ಎಂದರು.

ಪುರಸಭಾ ಅಧ್ಯಕ್ಷ ಕೆ.ವಿ. ಶ್ರೀಧರ್ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ. ನಾಗರಾಜ್ ಪತ್ರಿಕೆ ಬೆಳೆದು ಬಂದ ಬಗ್ಗೆ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಮೃತ್ಯುಂಜಯ ಪಾಟೀಲ್ ಅಧ್ಯಕ್ಷೀಯ ಮಾತುಗಳನ್ನಾಡಿದರು.  

ಟಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್. ಯೋಗಿಶ್ ಸ್ವಾಗತಿಸಿ, ಚಿನ್ಮಯ್ ಪಾಟೀಲ್ ಪ್ರಾರ್ಥಿಸಿ ಎನ್.ಕೆ. ಆಂಜನೇಯ ನಿರೂಪಿಸಿ ಚನ್ನೇಶ್ ಇದಿರಮನಿ ವಂದಿಸಿದರು.

error: Content is protected !!