ಸಂಸದ ಜಿ.ಎಂ. ಸಿದ್ದೇಶ್ವರ
ಹರಿಹರ, ಆ.16- ಹರಿಹರ ತಾಲ್ಲೂಕು ಅಭಿವೃದ್ಧಿಗೆ ಸ್ಥಳೀಯ ಶಾಸಕರು ಶ್ರಮ ಹಾಕಬೇಕು. ಸಂಸದನಾಗಿ ನಾನು ಮಾಡುವ ಕೆಲಸವಲ್ಲ. ಆದಾಗ್ಯೂ ಸಹ ನಾನು ಹೆಚ್ಚಿನ ಮುತುವರ್ಜಿಯಿಂದ ನೆನೆಗುದಿಗೆ ಬಿದ್ದಿರುವ ತಾಲ್ಲೂಕಿನ ಕೆಲಸಗಳನ್ನು ಪೂರ್ಣಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಲೇಬರ್ ಕಾಲೋನಿಯಲ್ಲಿ 50 ಲಕ್ಷ ರೂ. ವೆಚ್ಚದ ಉದ್ಯಾನವನದ ಕಾಮಗಾರಿ ಮತ್ತು 35 ಲಕ್ಷ ರೂ.ಗಳ ವೆಚ್ಚದಲ್ಲಿ ಕೈಲಾಸ ನಗರದ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಿ ಅವರು ಮಾತನಾಡಿದರು.
ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದಾಗ ಅದನ್ನು ಸದುಪಯೋಗ ಪಡಿಸಿಕೊಳ್ಳದೇ ಹೋದರೆ, ಸರ್ಕಾರ ಮುಂದಿನ ಕೆಲಸಗಳಿಗೆ ಹೇಗೆ ಹಣವನ್ನು ಬಿಡುಗಡೆ ಮಾಡುತ್ತದೆ? ನಗರದ ಜಿಜಾಮಾತಾ ಕಾಲೋನಿಯಲ್ಲಿ ಗುತ್ತಿಗೆದಾರ ಬಾಷಾ ಎಂಬುವವರು 2018 ರಲ್ಲಿ ಚಾಲನೆ ನೀಡಿರುವ ಕಾಮಗಾರಿ ಮೂರು ವರ್ಷಳಾದರೂ ಮಾಡಿಲ್ಲ ಮತ್ತು ವಿದ್ಯಾನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿ ಮಾಡದೇ ಇರುವ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್‌ನಲ್ಲಿಡಬೇಕು. ನಗರಸಭೆಗೆ ಹೆಚ್ಚು ಹಣವನ್ನು ಬಿಡುಗಡೆ ಮಾಡಿಸಲು ಸ್ಥಳೀಯ ಶಾಸಕರು ಓಡಾಡಿ ಹಣವನ್ನು ಬಿಡುಗಡೆ ಮಾಡಿಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕಾಗಿದ್ದು, ಸಂಸದನಾಗಿ ನಾನು ಮಾಡುವ ಕೆಲಸವಲ್ಲ. ಚುನಾವಣೆ ಹತ್ತಿರ ಬರುತ್ತಿದ್ದು, ರಾಮಪ್ಪನವರು ಉಳಿದಿರುವ ಕೆಲಸಗಳನ್ನು ಮಾಡಿಸಲು ಮುಂದಾಗಬೇಕಿದೆ ಎಂದರು.
ನಾನು ಸ್ವತಃ ಮುತುವರ್ಜಿಯಿಂದ ಹರಿಹರ ತಾಲ್ಲೂಕು ನಂದಿಗುಡಿ ರಸ್ತೆಗೆ 13 ಕೋಟಿ ರೂ., ಮಲೇಬೆನ್ನೂರು-ಯಲವಟ್ಟಿ ರಸ್ತೆಗೆ 12.5 ಕೋಟಿ, ಕಡರನಾಯಕನಹಳ್ಳಿ ರಸ್ತೆ, ಸಿರಿಗೆರೆ, ಧೂಳೆಹೊಳೆ ರಸ್ತೆ 3 ಕೋಟಿ, ಸಾರಥಿ ಸೇತುವೆ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಸಂಪೂರ್ಣ ಕೆಲಸ ಮಾಡುವುದಾಗಿ ಹೇಳಿದರು. ನಗರಸಭೆ ಈಗ ಬಿಡುಗಡೆ ಆಗಿರುವ 3 ಕೋಟಿ 50 ಲಕ್ಷ ರೂಪಾಯಿಯಲ್ಲಿ ನಗರದ ಎಲ್ಲಾ ವಾರ್ಡ್‌ಗೆ 5 ಲಕ್ಷ ರೂಪಾಯಿ ಹಾಕಿ ಕಾಮಗಾರಿ ಮಾಡಿಸುವ ಬದಲಿಗೆ ಪ್ರಥಮ ಹಂತದಲ್ಲಿ 5 ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಿ ನಂತರದ ದಿನಗಳಲ್ಲಿ ಬಿಡುಗಡೆ ಆದ ಹಣದಿಂದ ಮತ್ತೆ 5 ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕಾಗಿದೆ ಎಂದರು.
ನಗರದ ತುಂಗಭದ್ರಾ ನದಿ ಸೇತುವೆ ಹತ್ತಿರ ಇರುವ ರಸ್ತೆ ಕಾಮಗಾರಿ ವಿಳಂಬವಾಗಲು ಮಾಜಿ ಶಾಸಕ ಹರೀಶ್ ಕಾರಣ ಎಂದು ರಾಮಪ್ಪ ಹೇಳುತ್ತಿದ್ದಾರೆ. ಈ ಕುರಿತು ನಾನು ಜಿಲ್ಲಾಧಿಕಾರಿ ಬಳಿ ಮಾತನಾಡುವೆ. ಸ್ಥಳೀಯ ಜನಪ್ರತಿನಿಧಿಗಳು ಎಲ್ಲರೂ ಸೇರಿಕೊಂಡು ಒಂದು ಸಭೆಯನ್ನು ಮಾಡಿ, ಒಂದು ಒಮ್ಮತದ ತೀರ್ಮಾನಕ್ಕೆ ಬಂದು ರಸ್ತೆ ಕಾಮಗಾರಿಯನ್ನು ಮಾಡುವುದಕ್ಕೆ ಮುಂದಾಗಿ ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ದೂರವಾಣಿ ಕರೆ ಮಾಡಿ ಹರಿಹರ ನಗರದ ತುಂಗಭದ್ರಾ ನದಿ ಸೇತುವೆ ಮುಂದೆ ಇರುವ ರಸ್ತೆ ಕಾಮಗಾರಿಯನ್ನು ಮಾಡಿ ಎಂದು ಹೇಳಿದಾಗ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ನಾನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ಕಾಮಗಾರಿ ಮಾಡುವುದಕ್ಕೆ ಸಿದ್ಧ. ಆದರೆ ಸ್ಥಳೀಯ ಶಾಸಕ ಎಸ್. ರಾಮಪ್ಪ ಅವರು ಅಲ್ಲಿ ದರ್ಗಾ ತೆರವು ಮಾಡುವುದಕ್ಕೆ ಬಿಡದೆ ಅಡ್ಡಿಯಾಗಿದ್ದಾರೆ ಎಂದು ತಿಳಿಸಿದಾಗ, ನಿಮ್ಮ ಕಾನೂನು ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡಿ ಎಂದು ಹೇಳುತ್ತಿದ್ದಂತೆ ಶಾಸಕ ಎಸ್. ರಾಮಪ್ಪ ಸಂಸದರ ಬಳಿ ಪೋನ್ ಪಡೆದುಕೊಂಡು ನೀವು ಪ್ರತಿಬಾರಿ ದರ್ಗಾ ಕೆಡವುದಕ್ಕೆ ಮುಂದಾಗುತ್ತಿರ. ನಾನು ಅದನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಹೇಳಲು ಮುಂದಾದರು. ಸಂಸದರು ಮತ್ತೆ ಪೋನ್ ಪಡೆದು ಜಿಲ್ಲಾಧಿಕಾರಿಗಳಿಗೆ ಬೇಗನೆ ರಸ್ತೆ ಕಾಮಗಾರಿ ಮಾಡಿ ಎಂದು ಹೇಳಿದರು.
ಶಾಸಕ ರಾಮಪ್ಪನವರು ನನಗೆ ನಿಮ್ಮ ಸರ್ಕಾರ ಇದೆ ನೀವು ಮಾಡಿಸಿ ಎಂದು ಹೇಳುತ್ತಾರೆ. ನಾನು ಬರುವೆ ಎಂದು ಹಲವು ಬಾರಿ ಹೇಳಿದ್ದರೂ ಸಹ ಇದುವರೆಗೂ ನನಗೆ ಬನ್ನಿ ಎಂದು ಕರೆದಿರುವುದಿಲ್ಲ. ಅವರು ಬಂದು ಕರೆದುಕೊಂಡು ಹೋದರೆ ನಾನು ಈಗಲೇ ಬರುವುದಕ್ಕೆ ಸಿದ್ಧ ಎಂದು ಸಿದ್ದೇಶ್ವರ ಹೇಳಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ನಗರಸಭೆ ಅಭಿವೃದ್ಧಿಗೆ ಈ ಹಿಂದೆ ಸರ್ಕಾರ 18 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಆದರೆ ಬಿಜೆಪಿ ಸರ್ಕಾರ ಬಂದ ನಂತರ 3 ಕೋಟಿ 50 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ. ಇಷ್ಟು ಹಣದಿಂದ ಅಭಿವೃದ್ಧಿ ಪಡಿಸಲು ಹೇಗೆ ಸಾಧ್ಯ? ಎಲ್ಲಾ ವಾರ್ಡ್‌ಗಳಲ್ಲಿ ಕೆಲಸ ಬಹಳ ಇದ್ದರೂ 31ನೇ ವಾರ್ಡ್‌ಗೆ 5 ಲಕ್ಷ ರೂ. ಹಣವನ್ನು ಹಾಕಲಾಗಿದೆ. ನೀವು ಈ ಕ್ಷೇತ್ರದ ಮತಗಳನ್ನು ಪಡೆದು ಸಂಸದರು ಆಗಿದ್ದರಿಂದ ಹರಿಹರ ತಾಲ್ಲೂಕಿನ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸಕ್ಕೆ ಮುಂದಾಗಬೇಕಾಗಿದ್ದು, ನಗರಸಭೆಯ 8 ಕೋಟಿ ರೂ. ಹಣ ಕ್ರಿಯಾ ಯೋಜನೆ ಸಿದ್ಧತೆ ಆಗಿದ್ದನ್ನು ಬಿಡುಗಡೆ ಮಾಡದೆ ತಡೆಗಟ್ಟುವ ಕೆಲಸವನ್ನು ಮಾಡಿದ್ದಾರೆ.
ಮಾಜಿ ಶಾಸಕ ಬಿ.ಪಿ. ಹರೀಶ್ ಜಿಲ್ಲಾಧಿಕಾರಿ ಬಳಿ ಮಾತನಾಡಿ, ನಗರದ ತುಂಗಭದ್ರಾ ನದಿಯ ಸೇತುವೆ ಮುಂಭಾಗದ ದರ್ಗಾ ಬಳಿ ರಸ್ತೆ ಕಾಮಗಾರಿಯನ್ನು ನಿಲ್ಲಿಸಿದರು. ನಾನು ರಸ್ತೆಯ ಮಧ್ಯದಿಂದ 60 ಅಡಿಗೆ ರಸ್ತೆಯನ್ನು ಮಾಡಿ ಎಂದು ಹೇಳಿದ್ದೇನೆ. ಅದನ್ನು ಬಿಟ್ಟು ದರ್ಗಾ ತೆರವುಗೊಳಿಸಲು ಮುಂದಾದರೆ ಅದಕ್ಕೆ ನಮ್ಮ ವಿರೋಧ ಇದೆ. ನಾನು ಸಂಸದರನ್ನು ಈ ಬಾರಿ ಬೆಂಗಳೂರಿಗೆ ಹೋಗುವಾಗ ಕರೆದುಕೊಂಡು ಹೋಗುತ್ತೇನೆ. ಜಿಜಾಮಾತಾ ಕಾಲೋನಿಯಲ್ಲಿ ಕಾಮಗಾರಿ ವಿಳಂಬವನ್ನು ಮಾಡಿರುವ ಗುತ್ತಿಗೆದಾರರಿಗೆ ಬ್ಲಾಕ್ ಲೀಸ್ಟ್‌ಗೆ ಹಾಕುವುದಕ್ಕೆ ಸೂಚನೆ ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಸದಸ್ಯ ರಾಜು ರೋಖಡೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ನಗರಸಭೆ ಸದಸ್ಯರಾದ ಅಶ್ವಿನಿ ಕೆ.ಜಿ. ಕೃಷ್ಣ, ರಜನಿಕಾಂತ್, ಹನುಮಂತಪ್ಪ, ಬಿಜೆಪಿ ಪಕ್ಷದ ಮುಖಂಡರಾದ ಮಾರುತಿ ಶೆಟ್ಟಿ, ಸುನಿಲ್, ಭರತ್ ಶೆಟ್ಟಿ, ಶ್ರೀನಿವಾಸ್ ಹಂಸಾಗರ್, ಅದ್ವೈತ ಶಾಸ್ತ್ರಿ, ರಾಘವೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಹಾಲಸ್ವಾಮಿ ಗುತ್ತೂರು, ಗುತ್ತಿಗೆದಾರ ಮುರುಳಿ ಇತರರು ಹಾಜರಿದ್ದರು.