ದಾವಣಗೆರೆ, ಮಾ.28- ಮಹಿಳೆಯರು ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಜೊತೆಗೆ ಪ್ರಗತಿಯತ್ತ ಹೆಜ್ಜೆ ಹಾಕಬೇಕಾಗಿದೆ ಎಂದು ಗದಗ ಜಿಲ್ಲೆ ಮುಂಡರಗಿ ಈಶ್ವರಿ ಮಹಿಳಾ ಫೌಂಡೇಶನ್ ಸಂಸ್ಥಾಪಕಿ ಪ್ರಭಾವತಿ ವಿಶ್ವನಾಥ ಬೆಳವಣಿಕೆಮಠ ಹಿತ ನುಡಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಲಾಕುಂಚ ಸಂಸ್ಥೆ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ದಾವಣಗೆರೆ ಗೃಹಿಣಿ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಹಿಳೆ ಕೂಡ ಸಾಧಕಳೇ. ಅವರಲ್ಲಿನ ಕಲೆಗೆ ಪ್ರೋತ್ಸಾಹ ಹಾಗೂ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಾಗ ಪ್ರತಿಭಾನ್ವಿತ ಮಹಿಳೆಯಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಮಹಿಳೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೇ ಸಮಾಜಕ್ಕಾಗಿ ದುಡಿದು, ದುಡಿದ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿದಾಗ ಜೀವನ ಸಾರ್ಥಕಗೊಳ್ಳುತ್ತದೆ ಎಂದರು.
ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸಿದ್ದು, ಸಬಲೀಕರಣದ ಹೆಜ್ಜೆ ಹಾಕುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು
ಖ್ಯಾತ ಸ್ತ್ರೀರೋಗ ತಜ್ಞೆ, ಪರಿಸರವಾದಿ ಡಾ. ಶಾಂತಾ ಭಟ್ ಮಾತನಾಡಿ, ಕಲೆ ಇಲ್ಲದ ಜೀವನ ಜೀವನವೇ ಅಲ್ಲ. ಕಲೆ ಎಂಬ ಲೇಪನವನ್ನು ಲೇಪಿಸಿದಾಗ ಜೀವನಕ್ಕೆ ರಂಗು ಬರುತ್ತದೆ ಎಂದರು. ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಶೋಭಾ ಪಂಚಾಕ್ಷರಯ್ಯ, ಜ್ಯೋತಿ ಗಣೇಶ್ ಶೆಣೈ, ಶ್ರೀಮತಿ ಚಂದ್ರಶೇಖರ ಅಡಿಗ, ವಸಂತಿ ಮಂಜುನಾಥ್, ಶಾರದಮ್ಮ ಶಿವನಪ್ಪ, ಸುಜಾತ ಬಸವರಾಜ್, ಗಿರಿಜಮ್ಮ ನಾಗರಾಜ್, ಶೈಲಾ ವಿಜಯಕುಮಾರ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಸಂತೋಷ್‌ಕುಮಾರ್ ಶೆಟ್ಟಿ ಮತ್ತಿತರರಿದ್ದರು.
ರೇಖಾ ಓಂಕಾರಪ್ಪ ಪ್ರಾರ್ಥಿಸಿದರು. ಕುಸುಮಾ ಲೋಕೇಶ್ ಸ್ವಾಗತಿಸಿದರು. ಡಾ. ಶೋಭಾ ಚಪ್ಪರದಳ್ಳಿಮಠ ಕಾರ್ಯಕ್ರಮ ನಿರೂಪಿಸಿದರು.