ಕಾಯಕ ಸಿದ್ಧಾಂತ ಪಾಲಿಸುವ ಪ್ಲಂಬರ್‌ಗಳು: ವಚನಾನಂದ ಶ್ರೀ

ದಾವಣಗೆರೆ, ಮಾ. 28 – ಯೋಗ ಎಂದರೆ ಕೂಡಿಸುವುದು ಹಾಗೂ ಜೋಡಿಸುವುದು ಎಂಬ ಅರ್ಥ ಬರುತ್ತದೆ. ಅದೇ ರೀತಿ ಪ್ಲಂಬರ್‌ಗಳೂ ಸಹ ನೀರು ಪೂರೈಕೆಗಾಗಿ ಪೈಪ್ ಜೋಡಿಸುವ – ಕೂಡಿಸುವ ಕೆಲಸ ಮಾಡುತ್ತಾ ಕಾಯಕ ಮಾಡುತ್ತಿದ್ದಾರೆ ಎಂದು ಹರಿಹರದ ವೀರಶೈವ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಸರ್ ಎಂ. ವಿಶ್ವೇಶ್ವರಾಯ ಕಟ್ಟಡ, ನಲ್ಲಿ ಮತ್ತು ಸ್ಯಾನಿಟರಿ ಕಾರ್ಮಿಕರ ಸಂಘದ ಒಂಭತ್ತನೇ ವರ್ಷದ ವಾರ್ಷಿಕೋತ್ಸವ, ವಿಶ್ವಜಲ ದಿನಾಚರಣೆ, ವಿಶ್ವ ಪ್ಲಂಬರ್‌ಗಳ ದಿನಾಚರಣೆ, ಹಿರಿಯ ಪ್ಲಂಬರ್ ಮೇಸ್ತ್ರಿಗಳಿಗೆ, ಯೋಧರಿಗೆ ಸನ್ಮಾನ, ವಿದ್ಯಾರ್ಥಿ ಗಳಿಗೆ ಪುರಸ್ಕಾರ, ಯುವ ಮತ್ತು ಹಿರಿಯ ರೈತರಿಗೆ ಗೌರವ ಪುರಸ್ಕಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡುತ್ತಿದ್ದರು.

ಪ್ಲಂಬರ್‌ಗಳು ತನು, ಮನ, ಭಾವ ಶುದ್ಧವಾಗಿ ದುಡಿಯುತ್ತಿದ್ದಾರೆ ಹಾಗೂ ಬಸವಣ್ಣನವರ ಕಾಯಕ ಸಿದ್ಧಾಂತದ ಮೇಲೆ ನಂಬಿಕೆ ಇರಿಸಿದವರಾಗಿದ್ದಾರೆ ಎಂದ ಶ್ರೀಗಳು, ಕಾಯಕ ಮಾಡುವವರು ಸೈನಿಕರು, ರೈತರು ಹಾಗೂ ಕೊರೊನಾ ವಾರಿಯರ್‌ಗಳ ರೀತಿಯಲ್ಲಿ ಯೋಧರು ಎಂದು ಬಣ್ಣಿಸಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಸಂಘಟನೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ದಾವಣಗೆರೆ ಕಾರ್ಮಿಕ ಸಂಘಟನೆಗಾಗಿ ಹೆಸರಾಗಿದ್ದು, ಪ್ಲಂಬರ್‌ಗಳೂ ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿಯಾದರೆ ಕಟ್ಟಡ ನಿರ್ಮಾಣ ಕಾರ್ಮಿಕರಾದ ಪ್ಲಂಬರ್‌ಗಳಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತವೆ. ಆದರೆ, ಸಾಕಷ್ಟು ಕಾರ್ಮಿಕರು ಅವುಗಳನ್ನು ಬಳಸಿಕೊಳ್ಳುತ್ತಿಲ್ಲ. ಕಾರ್ಮಿಕರೆಲ್ಲರೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಡಿ. ಶೆಟ್ಟರ್, ಸರ್ಕಾರದಿಂದ ಪ್ಲಂಬರ್‌ಗಳಿಗೆ 75ರಿಂದ 80ರಷ್ಟು ಸೌಲಭ್ಯಗಳು ಸಿಗುತ್ತವೆ. 18 ವರ್ಷ ಮೀರಿದ ಎಲ್ಲ ಪ್ಲಂಬರ್‌ಗಳು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಮಿಕರ ಸಂಘದ ಅಧ್ಯಕ್ಷ ಎನ್. ವೀರಣ್ಣ ಮಾತನಾಡಿ, ಪಾಲಿಕೆಯಿಂದ ಕಡಿಮೆ ಬಾಡಿಗೆಯಲ್ಲಿ ಸಂಘದ ಕಚೇರಿಗೆ ಮಳಿಗೆಯೊಂದನ್ನು ನೀಡಬೇಕು ಹಾಗೂ ದೂಡಾದಿಂದ ಕಚೇರಿ ಕಟ್ಟಡಕ್ಕಾಗಿ ನಿವೇಶನ ನೀಡಬೇಕು ಎಂದು ಮನವಿ ಮಾಡಿಕೊಂಡರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಸಪ್ತಗಿರಿ ಏಜೆನ್ಸೀಸ್‌ನ ಎಸ್.ಎಸ್ ರಮೇಶ್, ಅಂದನೂರು ಸೆರಾಮಿಕ್ಸ್‌ನ ಅಂದನೂರು ಬಾಬಣ್ಣ, ಎಸ್.ಕೆ. ವೀರಭದ್ರಪ್ಪ ಅಂಡ್ ಕೋ ನ ಎಸ್.ಎಸ್‌. ಗಿರೀಶ್, ಘಾಟ್ಕೆ ಎಂಟರ್‌ಪ್ರೈಸಸ್‌ನ ಸಿದ್ದಿವಿನಾಯಕ, ಎಸ್.ವಿ. ಮಾರ್ಕೆಟಿಂಗ್‌ನ ಎಸ್.ವಿ. ವೇಣುಗೋಪಾಲ್, ಅಭಿಯಂತರರಾದ ಪ್ರಕಾಶ್ ಮೂಳೆ, ಎ.ಬಿ. ರವಿ, ಅಸ್ಟ್ರಲ್ ಕಂಪನಿಯ ಸತೀಶ್, ಸಂತೋಷ್ ಮಾಯಗಿರಿ ಆಶೀರ್ವಾದ್ ಕಂಪನಿಯ ಎ.ಆರ್. ಶರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಜಯಶ್ರೀ ಶೆಟ್ಟರ್ ಪ್ರಾರ್ಥಿಸಿದರೆ, ಎಸ್. ಹೊಳೆಯಪ್ಪ ಸ್ವಾಗತಿಸಿದರು.

error: Content is protected !!