ಮೂರನೇ ಅಲೆಯಿಂದ ಮುಗ್ಧ ಮಕ್ಕಳನ್ನು ರಕ್ಷಿಸಲು ಅಗತ್ಯ ಕ್ರಮ

ಜಗಳೂರಿನ ಜಾಗೃತಿ ಸಭೆಯಲ್ಲಿ ಶಾಸಕ ಎಸ್.ವಿ.ರಾಮಚಂದ್ರ

ಜಗಳೂರು, ಆ.10- ಭವಿಷ್ಯದ ಕನಸಿನ ಪೀಳಿಗೆಯ ಮಕ್ಕಳಿಗೆ ಕೊರೊನಾ ಮೂರನೇ ಅಲೆ ಬರದಂತೆ ಸಮರ್ಥವಾಗಿ ನಿಯಂತ್ರಿಸಲು  ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಶಾಸಕ ಎಸ್.ವಿ. ರಾಮಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಮೂರನೇ ಅಲೆ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಕೋವಿಡ್-19  ಮೊದಲನೇ ಹಾಗೂ ಎರಡನೇ ಅಲೆಯಿಂದ ತಾಲ್ಲೂಕಿನ ಜನತೆಯನ್ನು ರಕ್ಷಿಸಲು ವಾರಿಯರ್‌ಗಳ ಮೂಲಕ ಟಾಸ್ಕ್‌ಫೋರ್ಸ್ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲ್ಯಾಘಿಸಿದರು.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದ ಪರಿಣಾಮ ಜಗಳೂರು ತಾಲ್ಲೂಕಿನಲ್ಲಿ  ಅತೀ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಮುಂದಿನ 3ನೇ ಅಲೆಯ ಬಗ್ಗೆ ಜಾಗೃತಿ ಮೂಡಿಸಿ ಸಭೆ, ಸಮಾರಂಭ, ಜಾತ್ರೆಗಳಲ್ಲಿ ಸಾಮೂಹಿಕವಾಗಿ ಜನರು ಸೇರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿ ಮುಗ್ಧ ಮಕ್ಕಳ  ಜೀವ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ಪಟ್ಟಣದಲ್ಲಿ ಜನಸಂಖ್ಯೆ ಹಾಗೂ ವಿಸ್ತಾರದಲ್ಲಿ ಹೆಚ್ಚಾಗುತ್ತಿದೆ. ಪಟ್ಟಣದ ಸುತ್ತ 15 ಕಿ.ಮೀ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಿ ವಸತಿ ರಹಿತ ಬಡಜನರಿಗೆ ನಿವೇಶನಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು.

ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ಸ್ಥಳ ನಿಗದಿಯಾಗಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾಲೇಜು ಆರಂಭವಾಗುವ ಮುನ್ನ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗಲು ಕೆಲ ಮಾರ್ಗಗಳಲ್ಲಿ 20 ಬಸ್‌ಗಳನ್ನು ಬಿಡಬೇಕು ಎಂದು ಕೆಎಸ್‌ಆರ್‌ಟಿಸಿ ಡಿಸಿ ಅವರಿಗೆ  ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ಶಂಕುಸ್ಥಾಪನೆ ಇತಿಹಾಸದ ಮೈಲಿಗಲ್ಲು : ಬಿಜೆಪಿ ಆಡಳಿತ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಸಚಿವರಾಗಿದ್ದ ವೇಳೆ 16,850 ಎಕರೆ ನೀರಾವರಿ ಪ್ರದೇಶವಾಗಲು ಹಂಚಿಕೆಯಾಗಿದ್ದು ಪುನಃ ಯಡಿಯೂರಪ್ಪನವರ ಮುಖ್ಯಮಂತ್ರಿ ಅವಧಿಯಲ್ಲಿ ಸಂಸದ ಸಿದ್ದೇಶ್ವರ್ ಅವರ ಜೊತೆಗೂಡಿ  46 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ವಿಸ್ತರಿಸಿ ಕೇಂದ್ರ ಸರ್ಕಾರದಲ್ಲಿ ರಾಷ್ಟ್ರೀಯ ಯೋಜನೆಯನ್ನಾಗಿಸಿ 1,200‌ ಕೋಟಿ ಬಿಡುಗಡೆ ಮಾಡಲು ಹರಸಾಹಸ ಪಟ್ಟಿದ್ದೇವೆ. ನಾನೇ ಶಂಕುಸ್ಥಾಪನೆ ಮಾಡುತ್ತೇನೆ. ಜನಾಶೀರ್ವಾದ ದಿಂದ ಮತ್ತೆ ಶಾಸಕನಾಗಿ ಆಯ್ಕೆಯಾಗಿ  ಭದ್ರೆ ಹರಿಸುವೆ.ಎಂದು ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.

174 ಹಳ್ಳಿಗಳಲ್ಲಿ ಜಲಜೀವನ್‌ ಮಿಷನ್‌ ಯೋಜನಯಡಿ ನಳ ಸಂಪರ್ಕ ಕಲ್ಪಿಸಲಾಗುವುದು.ಪಿಡಿಓಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾದರೆ ತಾವುಗಳೇ ನೇರ ಹೊಣೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19  ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಕ್ಕಳಿಗೆ ವೆಂಟಿಲೇಟರ್ ಸಹಿತ ವಿಶೇಷ ವಾರ್ಡ್‌ಗಳನ್ನು ಸಿದ್ದಪಡಿಸಲಾಗಿದೆ ಎಂದರು.

ಜನಪ್ರತಿನಿಧಿಗಳು ನೀಡಿರುವ ಸ್ವಾತಂತ್ರ್ಯ , ಸಹಕಾರ  ನಮಗೆ ಸ್ಪೂರ್ತಿಯಾಗಿದೆ. ಕೋವಿಡ್ ಕೇರ್‌ಗಾಗಿ  66 ವಿಶೇಷ ವಾರ್ಡ್ ಗಳನ್ನೊಳಗೊಂಡಂತೆ ಮಾನವ ಸಂಪ ನ್ಮೂಲ, ಔಷಧ, ಸಲಕರಣೆಗಳನ್ನು ವ್ಯವಸ್ಥೆ ಮಾಡಿಕೊಳ್ಳ ಲಾಗಿದೆ. ಆಕ್ಸಿಜನ್ ಪ್ಲಾಂಟ್‌ಗಳ ಬಳಕೆಗೆ ರೋಗಿಗಳ ಕೊರತೆಯಿದೆ ಹಾಗೂ ಜನರೇಟರ್ ಅಳವಡಿಸಿ, ಆಗಸ್ಟ್ 15 ರಿಂದಲೇ ಆರಂಭಿಸಲಾಗುವುದು ಎಂದರು.

ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ ಆಸ್ತಿ ವಿವಾದ ಪ್ರಕರಣದ ವ್ಯಾಜ್ಯಗಳು ಹೆಚ್ಚಾಗಿದ್ದು. 15‌ ದಿನಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಸಿಇಓ ವಿಜಯ್ ಮಹಾಂತೇಶ್ ದಾನಮ್ಮನವರ್, ತಹಶೀಲ್ದಾರ್ ಡಾ. ನಾಗವೇಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ಕೆಎಸ್‌ಆರ್‌ಟಿಸಿ ಡಿಸಿ ಸಿದ್ದೇಶ್, ಉಪನಿರ್ದೇಶಕ ಪರಮೇಶ್ವರಪ್ಪ, ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ, ತಾ.ಪಂ ಇಓ ಲಕ್ಷ್ಮೀಪತಿ ಮತ್ತಿತರರು ಭಾಗವಹಿಸಿದ್ದರು.

error: Content is protected !!