ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಉದ್ಯಮಿಗಳಿಗೆ ಡಿಸಿ ಬೀಳಗಿ ಕರೆ
ದಾವಣಗೆರೆಯನ್ನು ವಲಯ 1 ರಲ್ಲಿ ಸೇರಿಸಲು ಪ್ರಸ್ತಾವನೆ
ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರ ಕೈಗಾರಿಕಾ ನೀತಿ 2020-25 ಅನ್ನು ರೂಪಿಸಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಆಯಾ ತಾಲ್ಲೂಕುಗಳ ಹಿಂದುಳಿದಿರುವಿಕೆಗೆ ಅನುಗುಣ ವಾಗಿ ವಲಯ-1, 2 ಮತ್ತು 3 ಅನ್ನು ಸಿದ್ಧಪಡಿಸಿದೆ. ಇದರನ್ವಯ ದಾವಣಗೆರೆ ತಾಲ್ಲೂಕನ್ನೂ ವಲಯ-1 ಕ್ಕೆ ಸೇರ್ಪಡೆಗೊಳಿಸಿ, ಆದೇಶ ಪರಿಷ್ಕರಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಉದ್ಯಮಿಗಳ ಸಂಘದ ಅಧ್ಯಕ್ಷ ಶಂಭುಲಿಂಗಪ್ಪ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿ ಕಾರಿಗಳು, ಏಕಗವಾಕ್ಷಿ ಸಭೆಯಲ್ಲಿ ಕೈಗೊಂಡ ಚರ್ಚೆಯನ್ನು ಉಲ್ಲೇಖಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ, ಆ. 10- ಜಿಲ್ಲೆಯಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಇರುವ ಸದಾವಕಾಶವನ್ನು ಬಳಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ನೊಂದಿಗೆ ಕಳೆದ ಜನವರಿ 28 ರಂದು ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕುಶಲಕರ್ಮಿಗಳ ಉತ್ಪನ್ನಗಳನ್ನು ಇ-ಕಾಮರ್ಸ್ ನಡಿ ರಫ್ತು ಮಾಡಲು ವಿಪುಲ ಅವಕಾಶಗಳಿವೆ ಎಂದರು.
ಸಿದ್ದ ಉಡುಪುಗಳು, ಸ್ಥಳೀಯ ಆಟಿಕೆಗಳು, ವೈದ್ಯಕೀಯ ಉಪಕರಣಗಳು, ಆಹಾರ ಸಂಸ್ಕರಣಾ ಉತ್ಪನ್ನಗಳು, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಉಪಕರಣಗಳು ಅಲ್ಲದೆ ಇತರೆ ಉತ್ಪನ್ನಗಳನ್ನು ಅಮೆಜಾನ್ ಪ್ಲಾಟ್‍ಫಾರಂನಲ್ಲಿ ರಫ್ತು ಮಾಡಲು ಅವಕಾಶಗಳಿವೆ. ಇಂತಹ ಸದಾವಕಾಶವನ್ನು ಜಿಲ್ಲೆಯ ಎಲ್ಲ ಕೈಗಾರಿಕೋದ್ಯಮಿಗಳು, ಕುಶಲ ಕರ್ಮಿಗಳು ಬಳಸಿಕೊಂಡು, ತಮ್ಮ ಉದ್ಯಮವನ್ನು ಬೆಳೆಸಿಕೊಳ್ಳಬಹುದು ಎಂದರು.
ಹರಿಹರ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಮಳೆಗಾಲದಲ್ಲಿ ನೀರು ಕೈಗಾರಿಕಾ ಘಟಕದೊಳಗೆ ನುಗ್ಗಿ, ಉತ್ಪಾದನೆ ಹಾಗೂ ಕಚ್ಚಾ ಸಾಮಗ್ರಿಗಳು ಹಾನಿಗೀಡಾಗುತ್ತಿವೆ. ಮೂಲಭೂತ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಸಭೆಯಲ್ಲಿಯೂ ಈ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಅಧಿಕಾರಿಗಳು ಟೆಂಡರ್ ಕರೆಯಲಾಗಿದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ, ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂದು ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಆದರೆ ಸಭೆಗೆ ಹರಿಹರ ನಗರಸಭೆ ಪೌರಾಯುಕ್ತರು ಗೈರಾಗಿದ್ದರಿಂದ, ದೂರವಾಣಿ ಮೂಲಕವೇ ಅವರಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ಒಂದು ವಾರದ ಒಳಗಾಗಿ ಹರಿಹರ ಕೈಗಾರಿಕಾ ಪ್ರದೇಶಕ್ಕೆ ಚರಂಡಿ, ರಸ್ತೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಗೆ ಕಳೆದ ವರ್ಷ 87 ಉದ್ಯಮಕ್ಕೆ ಕೈಗಾರಿಕಾ ಇಲಾಖೆ ಮಂಜೂರಾತಿ ನೀಡಿದ್ದು, ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಕೈಗಾರಿಕೋದ್ಯಮಿಗಳ ಸಂಘದ ಪ್ರತಿನಿಧಿಗಳು, ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಬ್ಯಾಂಕ್‍ಗಳು ಠೇವಣಿ ಇಡುವಂತೆ ಒತ್ತಾಯಿಸುತ್ತಾರೆ. ವಿನಾಕಾರಣ ವಿಳಂಬ ಮಾಡುತ್ತಾರೆ, ಸಾಲ ಪಡೆಯುವುದು ದುಸ್ತರವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಯೋಜನೆಯಡಿ ಸಾಲ ಸೌಲಭ್ಯ ಮಂಜೂರು ಮಾಡಲು ಬ್ಯಾಂಕ್‍ಗಳು ಠೇವಣಿ ಇಡುವಂತೆ ಒತ್ತಾಯಿಸುವಂತಿಲ್ಲ, ಈ ಕುರಿತು ನಿರ್ದಿಷ್ಟ ದೂರು ಬಂದಲ್ಲಿ, ಅಂತಹ ಬ್ಯಾಂಕ್‍ನವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಬ್ಯಾಂಕ್‍ಗಳಿಗೆ ಸೂಚನೆ ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕ ಹೆಚ್.ಎಸ್. ಜಯಪ್ರಕಾಶ್ ನಾರಾಯಣ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್, ಕೆಐಎಡಿಬಿ ಅಧಿಕಾರಿ ಶ್ರೀಧರ್ ಸೇರಿದಂತೆ ವಿವಿಧ ಕೈಗಾರಿಕೋದ್ಯಮಿಗಳು, ಚೇಂಬರ್ ಆಫ್ ಕಾಮರ್ಸ್‍ನ ಸದಸ್ಯರು ಪಾಲ್ಗೊಂಡಿದ್ದರು.