ಬೇಸಿಗೆಯಲ್ಲಿ ಕೆರೆ ಹೂಳು ತೆಗೆಸಲು ಪ್ರಯತ್ನ: ಶಾಸಕ ರಾಮಪ್ಪ
ಹರಿಹರ, ಆ.10- ಮಳೆ ದೇವ ಕೃಪೆ ತೋರಿದ್ದರಿಂದ ಬಹುತೇಕ ಕೆರೆ-ಕಟ್ಟೆಗಳು, ಜಲಾಯಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ಭರ್ತಿಯಾಗಿರುವ ಕೊಂಡಜ್ಜಿ ಕೆರೆಗೆ ಇಂದು ಬಾಗಿನ ಅರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಮಳೆಯಾಗಿರುವುದರಿಂದ ರೈತರು ಒಳ್ಳೆ ಬೆಳೆಯನ್ನು ಬೆಳೆಯಬಹುದೆಂಬ ಖುಷಿಯಲ್ಲಿದ್ದಾರೆ. ಆದರೆ, ಭತ್ತಕ್ಕೆ ಕನಿಷ್ಠ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಎಲ್ಲಾ ವೆಚ್ಚಗಳು ಹೆಚ್ಚಾಗಿವೆ. ಸರ್ಕಾರ ಕೂಡಲೇ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡದಿದ್ದರೆ ರೈತರಿಗೆ ಬಹಳ ಕಷ್ಟವಾಗಲಿದೆ ಎಂದು ರಾಮಪ್ಪ ಮನವಿ ಮಾಡಿದರು.
ಕೊಂಡಜ್ಜಿ ಕೆರೆಗೆ ಸೇರಿದ ಸುಮಾರು 20 ಎಕರೆ ಜಾಗ ಅರಣ್ಯ ಪ್ರದೇಶವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆ ಜಾಗವನ್ನು ಕೆರೆಗೆ ಸೇರಿಸಲು ಅರಣ್ಯ ಇಲಾಖೆ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದ ರಾಮಪ್ಪ, ಬೇಸಿಗೆ ಸಮಯದಲ್ಲಿ ಕೆರೆಯ ಹೂಳು ತೆಗೆಸಲು ಎಲ್ಲರೂ ಸೇರಿ ಪ್ರಯತ್ನಿಸೋಣ ಎಂದರು.
ಈ ಕೆರೆ ಭರ್ತಿಯಾಗಿರುವುದರಿಂದ ಸುತ್ತಮುತ್ತ ಲಿನ ರೈತರು 2 ಬೆಳೆ ಬೆಳೆಯಲು ಅನುಕೂಲವಾಗಿದ್ದು, ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಜಾರಿಗೆ ಬದ್ಧವಾಗಿದ್ದೇನೆ ಎಂದರು.
ಗ್ರಾ.ಪಂ. ಅಧ್ಯಕ್ಷ ಹೆಚ್. ಗಂಗಾಧರ್, ಉಪಾಧ್ಯಕ್ಷರಾದ ಕಾವೇರಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಪಿಎಲ್‌ಜಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕುರುಬರಹಳ್ಳಿ ಭರಮಣ್ಣ, ಗ್ರಾಮದ ಗೌಡ್ರ ಸಂಗಣ್ಣ, ವೀರಭದ್ರಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
ಇದೇ ವೇಳೆ ಅಲ್ಪಸಂಖ್ಯಾತರ ಇಲಾಖೆಯ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಶಾಸಕ ರಾಮಪ್ಪ ಗುದ್ದಲಿ ಪೂಜೆ ನೆರವೇರಿಸಿದರು.