ದಾವಣಗೆರೆ, ಆ.9- ಎಸ್ಸೆಸ್ಸೆಲ್ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಪಾಲಿಸಿದ ನಿಯಮಗಳನ್ನೇ ಮೊದಲೆರಡು ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಪಾಲಿಸಬೇಕು, ಡಿಪ್ಲೋಮಾ ವಿದ್ಯಾರ್ಥಿಗಳೊಂದಿಗೆ ತಾರತಮ್ಯ ಮಾಡದಂತೆ ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಿಪ್ಲೋಮಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪದವಿ, ಸ್ನಾತಕೋತ್ತರ ತರಗತಿಗಳಲ್ಲಿ ಅಂತಿಮ ವರ್ಷ ಹೊರತುಪಡಿಸಿ ಮತ್ತಾರಿಗೂ ಬೆಸ ಸೆಮಿಸ್ಟರ್ನ ಪರೀಕ್ಷೆ ನಡೆಸಬಾರದೆಂದು ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದರೂ, ಇನ್ನು ಹಲವು ವಿಶ್ವವಿದ್ಯಾನಿಲಯಗಳು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿಲ್ಲ. ಬದಲಾಗಿ ಕೆಲವು ವಿ.ವಿ.ಗಳು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಪರೀಕ್ಷೆ ನಡೆಸಲು ಮುಂದಾಗುತ್ತಿವೆ. ಈಗಾಗಲೇ ಮಾನಸಿಕವಾಗಿ ತೀವ್ರ ಒತ್ತಡದಲ್ಲಿರುವ ವಿದ್ಯಾರ್ಥಿ ಸಮುದಾಯದ ಮೇಲೆ ಇದು ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಇತ್ತೀಚಿಗಷ್ಟೆ ಮುಖ್ಯಮಂತ್ರಿಗಳು ಮೂರನೇ ಅಲೆ ಆತಂಕ ಹಾಗೂ ಮತ್ತಿತರೆ ಮುಖ್ಯ ಕಾರಣಗಳನ್ನು ನೀಡಿ ಹತ್ತನೇ ತರಗತಿ ಮತ್ತು ಪಿಯು ತರಗತಿಗಳ ಪುನರಾರಂಭವನ್ನು ಸದ್ಯದಲ್ಲಿ ಮಾಡುವುದಿಲ್ಲ ಎಂದು ತಿಳಿಸಿದರು.
ಆದರೆ, ಇದೇ ವಯೋಮಿತಿಗೆ ಸೇರಿರುವ ಮೊದಲೆರಡು ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಆರಂಭವಾಗಿವೆ, ಅವರ ಪರೀಕ್ಷೆಗಳೂ ನಡೆಯುತ್ತಿವೆ. ಇದು ವಿದ್ಯಾರ್ಥಿಗಳ ನಡುವಣ ತಾರತಮ್ಯವನ್ನು ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪದವಿ ಕಾಲೇಜು ಪ್ರವೇಶ ಪ್ರಕ್ರಿಯೆಯಲ್ಲಿ ತಾರತಮ್ಯ ಸಲ್ಲದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದೇ ಸೆಮಿಸ್ಟರ್ ಪರೀಕ್ಷೆ ನಡೆಸಬೇಕು. 2ನೇ, 4ನೇ ಸೆಮಿಸ್ಟರ್
ಪದವಿ, 2ನೇ ಸೆಮಿಸ್ಟರ್ ಸ್ನಾತಕೋತ್ತರ ಪರೀಕ್ಷೆಗಳನ್ನು ರದ್ದುಗೊಳಿಸಿರುವ ಸುತ್ತೋಲೆಯನ್ನು ಎಲ್ಲಾ ವಿಶ್ವವಿದ್ಯಾಲಯಗಳು ಈ ಕೂಡಲೇ ಹೊರಡಿಸಬೇಕು, ರದ್ದುಗೊಳಿಸಿರುವ ಪರೀಕ್ಷೆಗಳ ಪರೀಕ್ಷಾ ಶುಲ್ಕ ಪಡೆಯಬೇಡಿ. ವಿದ್ಯಾರ್ಥಿಗಳು/ಪೋಷಕರ ಮೇಲೆ ಶುಲ್ಕದ ಒತ್ತಡ ಹೇರಬೇಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎನ್. ಪೂಜಾ ಸೇರಿದಂತೆ, ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.