ಸಂಸದ ಜಿ.ಎಂ.ಸಿದ್ದೇಶ್ವರ ಅವರಿಂದಲೇ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪುತ್ತಿದೆ.
– ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ದಾವಣಗೆರೆ, ಆ.10 – ಸ್ವಾತಂತ್ರ್ಯ ಹೋರಾಟದ ಸುವರ್ಣ ಅಧ್ಯಾಯಗಳಲ್ಲಿ ಒಂದಾದ ಕ್ವಿಟ್ ಇಂಡಿಯಾ ದಿನವನ್ನು ಪ್ರತಿವರ್ಷ ಆಗಸ್ಟ್ 9ರಂದು ಆಚರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾ ನಾಯಕರುಗಳನ್ನು ಸ್ಮರಿಸುತ್ತಾ ಬಂದಿರುವ ಕಾಂಗ್ರೆಸ್ ಪಕ್ಷವು ಇಂದು ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು.
ಕಾಂಗ್ರೆಸ್ ರಾಜ್ಯ ವಕ್ತಾರ ಡಿ.ಬಸವರಾಜ್ ಮಾತನಾಡಿ, ಬ್ರಿಟಿಷರನ್ನು ಭಾರತ ದೇಶವನ್ನು ಬಿಡಿಸಲು 1942ರ ಆಗಸ್ಟ್ 9ರಂದು ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಲಾಯಿತು. ಅದೇ ರೀತಿ ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಹೋಗಲಾಡಿಸಲು ಸಿದ್ದರಾಮಯ್ಯ ಅವರು ಆಗಸ್ಟ್ 9ರಂದೇ ಬಳ್ಳಾರಿಗೆ ಪಾದಯಾತ್ರೆ ನಡೆಸಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆದರು.
ಇಂದು ಮತ್ತೆ ನಾವು ಅಂತಹ ಹೋರಾಟದ ಮೂಲಕ ದೇಶದಲ್ಲಿ ಮಾನವ ಸಂಬಂಧಗಳ ನಡುವೆ ವಿಷ ಬೀಜ ಬಿತ್ತುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ದಾವಣಗೆರೆ ಸಂಸದರು ಪೆಟ್ರೋಲ್-ಡೀಸೆಲ್ ಬೆಲೆಯೇರಿಕೆ ಕುರಿತು ಕೇಳಿದರೆ ನಾವೇ ಸ್ವಂತ ಪೆಟ್ರೋಲ್ ಹಾಕಿಸುತ್ತೇವೆ ಎಂಬ ಉಢಾಪೆಯ ಉತ್ತರ ನೀಡುತ್ತಿದ್ದು, ಉಚಿತ ಪೆಟ್ರೋಲ್ ಬಂಕ್‍ಗಳನ್ನು ತೆರೆದು ಜನತೆಗೆ ಉಚಿತವಾಗಿ ಪೆಟ್ರೋಲ್- ಡೀಸೆಲ್ ವಿತರಿಸಲಿ ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ದೇಶದಲ್ಲಿ ಕೇವಲ ಮೋದಿ ಸ್ಮರಣೆ ನಡೆಯುತ್ತಿದ್ದು, ಮೋದಿ ಸ್ಮರಿಸುವವರು ಪಕ್ಷ ಬಿಟ್ಟರೂ ಚಿಂತೆ ಇಲ್ಲ ಪಕ್ಷವನ್ನು ದೇಶವನ್ನು ಕಟ್ಟೋಣ ಎಂದು ರಾಹುಲ್‍ಗಾಂಧಿಯವರು ಹೇಳಿಕೆ ನೀಡಿದ್ದು, ಅದರಂತೆ ಪಕ್ಷದ ಕಾರ್ಯ ಕರ್ತರು ಕಂಕಣ ಬದ್ಧರಾಗಿ ಕಾರ್ಯನಿರ್ವ ಹಿಸೋಣ ಎಂದು ಕರೆ ನೀಡಿದರು.
ದಾವಣಗೆರೆ ಸಂಸದರು ತಮ್ಮ ಟ್ರಸ್ಟ್ ನಿಂದ 3 ಕಡೆ ಆಕ್ಸಿಜನ್ ಘಟಕಗಳನ್ನು ಆರಂಭಿಸಿದ್ದು, ಈ ಟ್ರಸ್ಟ್ ಗೆ ಬರುವ ಆದಾಯದ ಮೂಲಗಳ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದರು. ಜಿ.ಎಂ.ಸಿದ್ದೇಶ್ವರ ಅವರಿಂದಲೇ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಕೈ ತಪ್ಪುತ್ತಿದೆ ಎಂದು ದೂರಿದರು.
ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ, 70 ವರ್ಷಗಳ ಸಾಧನೆ ಏನು ಎಂಬುದನ್ನು ಕೇಳುತ್ತಾರೆ. ಸಾಧನೆ ಮಾಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿ ಅಲ್ಲ. ಬ್ರಿಟಿಷರನ್ನು ದೇಶದಿಂದ ಓಡಿಸಲು ಕ್ವಿಟ್ ಇಂಡಿಯಾ ಚಳುವಳಿ ನಡೆಸಿದಂತೆ ಭ್ರಷ್ಟ ಬಿಜೆಪಿ ಸರ್ಕಾರವನ್ನು ತೊಲಗಿಸಲು ಮತ್ತೆ ಬೀದಿಗಿಳಿದು ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಸೋಮ್ಲಾಪುರದ ಹನುಮಂತಪ್ಪ, ಯುವ ಕಾಂಗ್ರೆಸ್‍ನ ಮೈನುದ್ದೀನ್, ಮಹಿಳಾ ಕಾಂಗ್ರೆಸ್‍ನ ನಾಗರತ್ನಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ.ಚಮನ್ ಸಾಬ್, ಜಿ.ಎಸ್.ಮಂಜುನಾಥ್, ನಲ್ಕುಂದ ಹಾಲೇಶ್, ಕೆಪಿಸಿಸಿ ಸಾಮಾಜಿಕ ಜಾಲತಾಣದ ಹರೀಶ್ ಕೆ.ಎಲ್. ಬಸಾಪುರ, ಗೋವಿಂದ ಹಾಲೇಕಲ್ಲು, ಶ್ರೀಕಾಂತ್ ಬಗರೆ, ಯುವ ಕಾಂಗ್ರೆಸ್‍ನ ಸಾಗರ್ ಎಲ್‍ಎಂಹೆಚ್, ರಾಕೇಶ್ ಜಿ., ಅಲಿ ರೆಹಮತ್, ಕೊಡಪಾನ ದಾದಾಪೀರ್, ಹಾಲೇಶ್ ಬಸವನಾಳ್, ಅಲೆಕ್ಸಾಂಡರ್(ಜಾನ್) ಯುವರಾಜ್, ಸೇವಾದಳದ ಡೋಲಿ ಚಂದ್ರು, ಅಬ್ದುಲ್ ಜಬ್ಬಾರ್, ಮಹಿಳಾ ಘಟಕದ ದ್ರಾಕ್ಷಾಯಣಮ್ಮ, ರಹಜಾನ್ ದಾದಾಪೀರ್, ರಾಜೇಶ್ವರಿ ಉಮೇಶ್, ಕವಿತಾ ಚಂದ್ರಶೇಖರ್, ರಾಜೇಶ್ವರಿ, ಗೀತಾ ಚಂದ್ರಶೇಖರ್, ರಹಜಾನ್ ದಾದಾಪೀರ್, ಸಂಗೀತಾ, ರತ್ನ, ಸುವರ್ಣಮ್ಮ, ಅಂಬಿಕಾ, ಸುಭಾನ್ ಸಾಬ್, ನಾಗರಾಜ್ ಜಮ್ನಳ್ಳಿ ಮತ್ತಿತರರಿದ್ದರು.