ಕಾರ್ಮಿಕ-ರೈತ-ಕೃಷಿ ಕೂಲಿಕಾರರ ಪ್ರತಿಭಟನೆ
ದಾವಣಗೆರೆ, ಆ.9- ಸ್ವಾತಂತ್ರ್ಯ ಚಳುವಳಿಯ ಆಶಯಗಳನ್ನು ಸ್ವಾತಂತ್ರ ಬಂದು ಸುಮಾರು 74 ವರ್ಷಗಳಾದರೂ ದೇಶದಲ್ಲಿರುವ ಕಾರ್ಮಿಕ-ರೈತ-ಕೃಷಿ ಕೂಲಿಕಾರರಿಗೆ ಜಾರಿಗೊಳಿಸದಿರುವು ದನ್ನು ಖಂಡಿಸಿ, ನಗರದಲ್ಲಿ ಇಂದು ಕಾರ್ಮಿಕರು, ರೈತರು, ಕೃಷಿ ಕೂಲಿಕಾರರು ಒಂದಾಗಿ ಪ್ರತಿಭಟನೆ ನಡೆಸಿದರು.
ಐತಿಹಾಸಿಕ `ಕ್ವಿಟ್ ಇಂಡಿಯಾ’ ಚಳುವಳಿ ನೆನಪಿನಲ್ಲಿ ನಗರದ ತಾಲ್ಲೂಕು ಕಚೇರಿ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಈ ಸಂಘಟನೆಗಳ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆಗಳುಳ್ಳ ಮನವಿಯನ್ನು ತಹಸೀಲ್ದಾರ್ ಮೂಲಕ ಪ್ರಧಾನಿಗೆ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಸಂಹಿತೆಗಳು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು. ರೈತರ ಎಲ್ಲಾ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇ. 50ರಷ್ಟು ಪ್ರಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಯಾಗಿ ದೊರೆಯುವಂತೆ ಕಾಯ್ದೆ ಮಾಡಬೇಕು ಮತ್ತು ಋಣಮುಕ್ತ ಕಾಯ್ದೆಯನ್ನು ಅಂಗೀಕರಿಸಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಬಡ್ಜೆಟ್ ಅನುದಾನವನ್ನು ಹೆಚ್ಚಿಸಿ, ದಿನಕ್ಕೆ 600 ರೂ. ನಂತೆ ಕನಿಷ್ಠ 200 ದಿನಗಳ ಕೆಲಸ ಖಾತರಿಪಡಿಸಬೇಕು. ನಗರ ಉದ್ಯೋಗ ಖಾತರಿ ಕಾಯ್ದೆಯನ್ನು ಅಂಗೀಕರಿಸಬೇಕು. ನರೇಗಾದಲ್ಲಿ ಜಾತಿ ಆಧಾರಿತ ಕೆಲಸ ಹಾಗೂ ಕೂಲಿ ಪಾವತಿಯ ತಾರತಮ್ಯದ ಸಲಹಾ ಪ್ರಸ್ತಾಪವನ್ನು ವಾಪಸ್ಸು ಪಡೆಯಬೇಕು. ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸಿ ಎಲ್.ಕೆ.ಜಿ ಮತ್ತು ಯುಕೆಜಿ ಶಾಲೆಗಳನ್ನು ಅಂಗನವಾಡಿಯಲ್ಲೇ ಪ್ರಾರಂಭಿಸುವುದು ಸೇರಿದಂತೆ, ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಇ. ಶ್ರೀನಿವಾಸ್, ಕಟ್ಟಡ ಕಾರ್ಮಿಕರ ಸಂಘದ ಹೊನ್ನೂರು ತಿಮ್ಮಣ್ಣ, ಗ್ರಾಮ ಪಂಚಾಯತಿ ನೌಕರರ ಸಂಘದ ಉಮೇಶ್, ದೇವದಾಸಿ ವಿಮೋಚನಾ ಸಂಘದ ನೇರ್ಲಿಗಿ ಭಾಗ್ಯ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಹಾಲೇಶನಾಯ್ಕ, ಹುಲಿಕಟ್ಟೆ ಹಾಲೇಶ್ ನಾಯ್ಕ ಸೇರಿದಂತೆ, ಇತರರು ಭಾಗವಹಿಸಿದ್ದರು.