ಧರ್ಮದಲ್ಲಿ ರಾಜಕಾರಣ ಸಲ್ಲದು
ಕಾಯಕ-ದಾಸೋಹ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾದ, ಜನರ ನೋವು, ಸಂಕಟಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದ್ದ ಮಠಗಳು ರಾಜಕಾರಣದತ್ತ ಮುಖ ಮಾಡಿವೆ. ಆರ್ಎಸ್ಎಸ್ ಜನಿವಾರಕ್ಕೆ ಲಿಂಗ ಕಟ್ಟುವ ಮೂರ್ಖ ಮಠಗಳಾಗಿವೆ. ಧರ್ಮದ ಹೆಸರಿನಲ್ಲಿ ರಾಜಕಾರಣಕ್ಕೆ ಮುಂದಾಗಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಜನಾಂದೋಲನ ಜಾಗೃತಿ ಸಭೆಯಲ್ಲಿ ಡಾ. ಸಿದ್ಧನಗೌಡ ಪಾಟೀಲ್
ದಾವಣಗೆರೆ, ಆ.9- ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಶಾಲಾ-ಕಾಲೇಜು, ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದರಿಂದ, ಪ್ರಾಯೋಗಿಕ ಶಿಕ್ಷಣ ನೀತಿ ರೂಪಿಸದೇ ಇರುವುದರಿಂದ ವಿದ್ಯಾರ್ಥಿಗಳ 2 ವರ್ಷದ ಶೈಕ್ಷಣಿಕ ಬದುಕು ನಾಶವಾಗಿದೆ. ಈ ಸ್ಥಿತಿಗೆ ಸರ್ಕಾರಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರೂ, ಹೊಸತು ಮಾಸ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ್ ವಾಗ್ದಾಳಿ ನಡೆಸಿದರು.
ಭಾರತ್ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ವತಿಯಿಂದ ನಗರದ ಕಾಂ. ಪಂಪಾಪತಿ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಬಡತನ, ಹಸಿವು, ನಿರುದ್ಯೋಗ, ಅಸಮಾನತೆ, ಅನ್ಯಾಯಗಳಿಗೆ ಕಾರಣವಾದ ಜೀವ ವಿರೋಧಿ, ಜನ ವಿರೋಧಿ ಸರ್ಕಾರಗಳನ್ನು `ಅಧಿಕಾರದಿಂದ ತೊಲಗಿಸಿ’ ಜನಾಂದೋಲನ ಜಾಗೃತಿ ಸಭೆಯನ್ನು ಜನಾಂದೋಲನ ಕುರಿತ ಕಿರು ಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತೋರಿಕೆಗಾಗಿ ಪ್ರಯೋಗಿಸಲಾದ ಆನ್ಲೈನ್ ಮತ್ತು ದೂರಶಿಕ್ಷಣ ವ್ಯವಸ್ಥೆ ಬಡವರು, ರೈತರು, ಮಧ್ಯಮ ವರ್ಗದವರು ಹಾಗೂ ಗ್ರಾಮೀಣ ಜನರಿಗೆ ನಿಲುಕಲಿಲ್ಲ. ಬಡವರಿಗೆ ದುಬಾರಿ ಪೋನ್ ಕೊಡಿಸಿ ಆ ಮೂಲಕ ಶಿಕ್ಷಣ ಕೊಡಿಸಲು ಸಾಧ್ಯವಾಗಲಿಲ್ಲ. ಪೋನ್ ಸೌಲಭ್ಯ ಕಲ್ಪಿಸಿದ್ದರೂ, ನೆಟ್ವರ್ಕ್ ಸಮಸ್ಯೆ ಕಾಡುತ್ತಿತ್ತು. ಇದರ ಪರಿಣಾಮ ಮಕ್ಕಳು ಶಿಕ್ಷಣ ವಂಚಿತರಾದರು. ಮತ್ತೊಂದೆಡೆ ಬಾಲಕಾರ್ಮಿಕ ಪದ್ಧತಿ ಹಾಗೂ ಬಾಲ್ಯವಿವಾಹಕ್ಕೆ ಬಲಿಯಾದರು.ಇನ್ನೊಂದೆಡೆ ಸರ್ಕಾರ ಮಧ್ಯಾಹ್ನ ಬಿಸಿಯೂಟ ಸೌಲಭ್ಯಕ್ಕೆ ಕತ್ತರಿ ಹಾಕಿದ್ದರಿಂದ ಮಕ್ಕಳು ಆಹಾರ ಕೊರತೆ ಮತ್ತು ಅಪೌಷ್ಠಿಕತೆಯಿಂದ ಬಳಲುವಂತಾಯಿತು. ಇದಕ್ಕೆ ಸರ್ಕಾರದ ನೀತಿಗಳೇ ಕಾರಣ ಎಂದು ಆರೋಪಿದರು.
ಕೊರೊನಾ ಪಿಡುಗಿನ ಹೆಸರಿನಲ್ಲಿ ಜನ ಮುಕ್ತವಾಗಿ ಬೀದಿಗೆ ಬರದೇ ಇರುವ ಸಂದರ್ಭದಲ್ಲಿ ಪಾರ್ಲಿಮೆಂಟಿನ ಸದನಗಳಲ್ಲೂ ಚರ್ಚಿಸದೇ ಜನ ವಿರೋಧಿಯಾದ, ಕಾರ್ಪೊರೇಟ್ ಕಂಪನಿಗಳ ಪರವಾದ ಕಾನೂನು ನೀತಿಗಳನ್ನು ಜಾರಿಗೊಳಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಅವರು `ಶ್ವೇತ ಪತ್ರ’ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಮಾಡಿ, ಜನರನ್ನು ಸಂಕಷ್ಟಕ್ಕೀಡು ಮಾಡಲಾಗಿದೆ. ಕೃಷಿ, ಶಿಕ್ಷಣ, ವಿದ್ಯುತ್ ಸೇರಿಂದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಪೋರೇಟ್ ಕಂಪನಿಗಳೇ ಒಕ್ಕಲುತನ ಮಾಡುತ್ತಿವೆ. ದೇಶದ ಸಂಪತ್ತಿನ ಸಾಮಾಜೀಕರಣ ಕ್ರಿಯೆ ನಡೆಯುತ್ತಿದೆ ಎಂದರು.
ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ಜೊತೆಗೆ ಭಾರತದ ಬಹುಸಂಸ್ಕೃತಿಯನ್ನು ನಾಶ ಮಾಡುವ ಪಿತೂರಿ ಕೂಡ ನಡೆಯುತ್ತಿದೆ. ತ್ಯಾಗ, ಬಲಿದಾನಗಳಿಂದ ಪಡೆದ 1947 ರ ಸ್ವಾತಂತ್ರ್ಯ ಅಪಾಯದಲ್ಲಿದೆ. ಪ್ರಭುತ್ವಗಳ, ಕಾರ್ಪೊರೇಟ್ ಕಂಪನಿಗಳ, ಸಿರಿವಂತರ ಪರವಾದ ನೀತಿಗಳಿಂದ ದೇಶದ ಧನಿಕರು ಬಹುಕೋಟ್ಯಾಧಿಪತಿಗಳಾಗು ತ್ತಿದ್ದಾರೆ. ಬಡವರು ಕಡು ಬಡವರಾಗುತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟರ, ದುಷ್ಟರ ಅಟ್ಟಹಾಸಕ್ಕಿಂತ, ಸಭ್ಯರ, ಪ್ರಾಮಾಣಿಕರ ಮೌನ ಅಪಾಯಕಾರಿ. ಭಾರತದ ಇಂದಿನ ಜನವಿರೋಧಿ, ಜೀವ ವಿರೋಧಿ ಪ್ರಭುತ್ವಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.
ಮೋದಿ ಅವರು ಚುನಾವಣೆ ಸಂದರ್ಭದಲ್ಲಿ ಕೊಟ್ಟ 2 ಕೋಟಿ ಉದ್ಯೋಗ ಸೃಷ್ಠಿಯ ಭರವಸೆ ಹುಸಿಯಾಗಿ ನಿರುದ್ಯೋಗ ಸೃಷ್ಠಿಯಾಗಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಬದಲಿಗೆ `ಸಬ್ ಕಾ ಸಾಥ್, ಸಬ್ ಕಾ ವಿನಾಶ್’ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ದೇಶದಲ್ಲಿ ಬ್ಯಾಂಕಿಂಗ್, ರೈಲ್ವೆ, ವಿಮೆ ಸೇರಿದಂತೆ ಹಲವಾರು ಸೇವಾ ವಲಯಗಳನ್ನು ಖಾಸಗೀರಣ ಮಾಡಲಾಗುತ್ತಿದೆ. ಬಂಡವಾಳ ಶಾಹಿಗಳ ಹಿಡಿತದಲ್ಲಿ ಆಡಳಿತವಿದೆ. ಜನರನ್ನು ಜಾಗೃತಿಗೊಳಿಸಲು ಸಿಪಿಐ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿದರು. ಖಜಾಂಚಿ ಆನಂದರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಮುಖಂಡರಾದ ಆವರಗೆರೆ ವಾಸು, ಎಂ.ಬಿ. ಶಾರದಮ್ಮ, ಟಿ.ಎಸ್. ನಾಗರಾಜ್, ಮಹಮದ್ ಬಾಷಾ ಜಗಳೂರು, ಮಹಮದ್ ರಫೀಕ್ ಚನ್ನಗಿರಿ, ಹೆಚ್.ಕೆ. ಕೊಟ್ರಪ್ಪ, ಪಾಲವ್ವನಹಳ್ಳಿ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಪಿ. ಷಣ್ಮುಖಸ್ವಾಮಿ, ವಸಂತಕುಮಾರ್ ಜಾಗೃತಿ ಗೀತೆಗಳನ್ನಾಡಿದರು.