ಕಾಂಗ್ರೆಸ್ ಕುರಿತು ಸಿಎಂ ಹೇಳಿಕೆ ಖಂಡನೀಯ

ಕಾಂಗ್ರೆಸ್ ಕುರಿತು ಸಿಎಂ ಹೇಳಿಕೆ ಖಂಡನೀಯ - Janathavaniದಾವಣಗೆರೆ, ಸೆ.28- ಎಸ್.ಆರ್. ಬೊಮ್ಮಾಯಿ ಅವರಂತಹ ಸೆಕ್ಯುಲರ್ ವ್ಯಕ್ತಿಯ ಮಗನಾಗಿ  ಬಸವರಾಜ ಬೊಮ್ಮಾಯಿ ಅವರು ಆರ್.ಎಸ್.ಎಸ್ ಕೈಗೊಂಬೆಯಾಗಿ ಕಾಂಗ್ರೆಸ್ ಗುಲಾಮಗಿರಿಯ ಪಕ್ಷ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ.ಬಸವರಾಜ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದಾಗಿನಿಂದ ಪಕ್ಷದ ವರಿಷ್ಠರು ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಬಿಡುತ್ತಿಲ್ಲ. ಇದರಿಂದ ಅವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಗುಲಾಮಗಿರಿಯ ಪಕ್ಷ ಯಾರದ್ದು ಎಂದು ಬೊಮ್ಮಾಯಿ ಅವರು ಇತಿಹಾಸ ನೋಡಿ ತಿಳಿದುಕೊಳ್ಳಲಿ. ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಅಂಗಲಾಚಿದ್ದನ್ನು ಬೊಮ್ಮಾಯಿ ನೆನಪಿಸಿಕೊಳ್ಳಲಿ ಎಂದು ಕುಟುಕಿದರು.

ಸಿದ್ಧರಾಮಯ್ಯನವರ ಬಗ್ಗೆಯೂ ಬೊಮ್ಮಾಯಿ ಟೀಕಿಸಿದ್ದಾರೆ. ಬಿಜೆಪಿ ವ್ಯಾಪಾರಿಗಳ ಪಕ್ಷವಾದರೆ ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಸಿದ್ಧರಾಮಯ್ಯನವರನ್ನು ಬಿಜೆಪಿ ಎಷ್ಟೇ ಟೀಕಿಸಿದರೂ ಅನ್ನ ತಿನ್ನುವ ಜನರು ಕಾಂಗ್ರೆಸ್ ಹಾಗೂ ಸಿದ್ಧರಾಮಯ್ಯನವರನ್ನು ಮರೆಯುವುದಿಲ್ಲ ಎಂದರು.

ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರ ಕೆಲಸಗಳನ್ನು ನೋಡಿ ಬಿಜೆಪಿಯವರಿಗೆ ನಡುಕ ಹುಟ್ಟಿಸಿದೆ. ಇದರಿಂದಾಗಿ ಅವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮತ್ತೋರ್ವ ಸದಸ್ಯ ಚಮನ್ ಸಾಬ್, ದೇಶದೆಲ್ಲೆಡೆ ಸುಳ್ಳು ವಿಜೃಂಭಿಸುತ್ತಿದೆ. ಆದರೆ ಸತ್ಯಕ್ಕೆ ಸಾವಿಲ್ಲ ಎಂದು ಬಿಜೆಪಿ ಮುಖಂಡರಿಗೆ ಕುಟುಕಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಮಂಜುನಾಥ್, ಮೊಹಮ್ಮದ್ ಜಿಕ್ರಿಯಾ, ಆರ್.ಬಿ.ಝಡ್ ಭಾಷಾ, ರಹಮ್ಮತ್‌ವುಲ್ಲಾ, ಡಿ.ಶಿವಕುಮಾರ್ ಉಪಸ್ಥಿತರಿದ್ದರು.

error: Content is protected !!