ದಾವಣಗೆರೆ, ಮಾ. 26 – ವಿದ್ಯಾನಗರ ದಲ್ಲಿರುವ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಗತಿಗೆ ಶ್ರಮಿಸುವುದಾಗಿ ಇಂದು ದೃಶ್ಯ ಕಲಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.
ಪ್ರಪಂಚದಾದ್ಯಂತ ಕಲಾತ್ಮಕ ಚಿತ್ರ ಕಲೆಗಳಿಗೆ ಹೆಚ್ಚು ಬೇಡಿಕೆಯಿದ್ದು, ಇರುವ ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ಆಸಕ್ತಿ ಇರುವ ಕಲಾವಿದರನ್ನು ಸೃಜಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ನಗರದ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಗತಿಗೆ ಹೆಚ್ಚಿನ ಕಾಳಜಿ ವಹಿಸುವುದಾಗಿ ಹೇಳಿದರು.
ಇಲ್ಲಿನ ಕೆಲಸಗಳ ಬಗ್ಗೆ ಪ್ರಸ್ತಾವನೆ ನೀಡಿದರೆ ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆ. ಇದರ ಜೊತೆಗೆ ಮಹಾವಿದ್ಯಾಲಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಬಿಂಬಿಸುವ ಕೆಲಸ ಆಗಬೇಕಿದೆ ಎಂದರು.
ದೃಶ್ಯ ಕಲಾ ಮಹಾವಿದ್ಯಾಲಯವನ್ನು ಅಭಿವೃದ್ದಿಪಡಿಸುವ ದೃಷ್ಟಿಯಿಂದ ಅದರ ಬಗ್ಗೆ ಜನಪ್ರತಿನಿಧಿಗಳ ಕಾಳಜಿ ಹೆಚ್ಚಬೇಕಿದೆ. ಈ ನಿಟ್ಟಿನಲ್ಲಿ ಒಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಮಿತಿಯವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಂಸದರು ಇಂದು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪುನರುತ್ಥಾನ ಸಮಿತಿಯ ಬಿ.ಎನ್.ಮಲ್ಲೇಶ್, ವಿಶ್ವವಿದ್ಯಾನಿಲಯ ಸಿಂಡಿಕೇಟ್ ಮಾಜಿ ಸದಸ್ಯ ಸಿ.ಹೆಚ್.ಮರುಗೇಂದ್ರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಸಿಂಡಿಕೇಟ್ ಮಾಜಿ ಸದಸ್ಯ ಹೆಚ್.ಎನ್.ಶಿವಕುಮಾರ್, ವ್ಯಂಗ್ಯ ಚಿತ್ರ ಬರಹಗಾರ ಹೆಚ್.ಬಿ.ಮಂಜುನಾಥ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಬಾಮ ಬಸವರಾಜಯ್ಯ, ದಾವಣಗೆರೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶ್ರೀಮತಿ ಗಾಯತ್ರಿ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.