ಬಾಳೇಹೊನ್ನೂರು, ಮಾ.26- ಯುವ ಜನಾಂಗದಲ್ಲಿ ಅದ್ಭುಚ ಶಕ್ತಿಯಿದೆ. ಉತ್ತಮ ಸಂಸ್ಕಾರ ಮತ್ತು ಸದ್ವಿಚಾರಗಳನ್ನು ಬೆಳೆಸಿದರೆ ಗುಣಾತ್ಮಕ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾ ರಥೋತ್ಸವದ ಅಂಗವಾಗಿ ಜರುಗಿದ ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯೌವ್ವನಾವಸ್ಥೆಯಲ್ಲಿ ಬಹಳ ಜಾಗ ರೂಕತೆಯಿಂದ ಬದುಕು ಕಟ್ಟಿಕೊಳ್ಳ ಬೇಕಾಗಿದೆ, ಸಂಸ್ಕಾರ ಮತ್ತು ಅವುಗಳ ಪರಿಪಾಲನೆಯಿಂದ ಸುಖ, ಶಾಂತಿಯ ಬದುಕನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಕೇದಾರ ಜಗದ್ಗುರು ಭೀಮಾಶಂಕರ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ವೀರಶೈವ ಧರ್ಮದಲ್ಲಿ ಬುದ್ಧಿಗಿಂತ ಸಂಸ್ಕಾರಕ್ಕೆ ಬಹಳಷ್ಟು ಮಹತ್ವ ಕೊಟ್ಟಿದ್ದಾರೆ. ತತ್ವ, ಸಿದ್ಧಾಂತಗಳ ಅರಿವಿನ ಹಾದಿಯಲ್ಲಿ ನಡೆದಾಗ ಸಶಕ್ತ ಜೀವನ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಮೈಸೂರು ಜಪದಕಟ್ಟಿ ಮಠದ ಮುಮ್ಮಡಿ ಚಂದ್ರಶೇಖರ ಶ್ರೀಗಳು ಸಿದ್ಧಾಂತ ಶಿಖಾಮಣಿ ಭಾವಾರ್ಥ ನಿರೂಪಣೆ ಕೃತಿ ಬಿಡುಗಡೆ ಮಾಡಿದರು. ಹಣವಾಳ ಗ್ರಾ.ಪಂ. ಸದಸ್ಯ ಸೋಮನಾಥಯ್ಯ ಕುಲಕರ್ಣಿ ಮಾತನಾಡಿದರು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರು ಸಮಾರಂಭ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ. ಮೃತ್ಯುಂಜಯ ಸ್ವಾಮಿ, ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ, ಶಿವಮೊಗ್ಗ ಶ್ರೀ ಬಸವೇಶ್ವರ ವೀರಶೈವ ಸೇವಾ ಸಂಘದ ಅಧ್ಯಕ್ಷ ಎನ್.ಜೆ. ರಾಜಶೇಖರ್ ಭಾಗವಹಿಸಿದ್ದರು.
ಕಣ್ವಕುಪ್ಪಿ ಗವಿಮಠದ ಡಾ. ನಾಲ್ಡಿ ಶಾಂತಲಿಂಗ ಶ್ರೀಗಳು ಮಾತನಾಡಿದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶ್ರೀಗಳು, ಚಳಗೇರಿ ವೀರಸಂಗಮೇಶ್ವರ ಶ್ರೀಗಳು, ತರೀಕೆರೆ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಎಂ.ಬಿ. ಗಿರಿರಾಜು, ಚಿಕ್ಕಮಗಳೂರು ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಬಿ.ಎ. ಶಿವಶಂಕರ್, ಬೆಂಗಳೂರಿನ ಬಸವರಾಜ ಕನಕಪುರ, ಹುಬ್ಬಳ್ಳಿಯ ವೀರೇಶ ಪಾಟೀಲ ಹಾಗೂ ದೇವರ ಹಿಪ್ಪರಗಿಯ ಬಾಳಯ್ಯ ಇಂಡಿಮಠ, ಅವರನ್ನು ಗುರು ರಕ್ಷೆ ಇತ್ತು ಹಾರೈಸಲಾಯಿತು.
ಸುಳ್ಯ, ಶಿರಕೋಳ, ಮಳಲಿ, ಸಂಗೊಳ್ಳಿ, ಎಂ. ಚಂದರಗಿ ಶ್ರೀಗಳು ಸೇರಿದಂತೆ ನಾಡಿನ 25 ಕ್ಕೂ ಹೆಚ್ಚು ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಂದು ಬೆಳಿಗ್ಗೆ ಉಭಯ ಜಗದ್ಗುರುಗಳವರಿಂದ ಧರ್ಮ ಧ್ವಜಾರೋಹಣ ನೆರವೇರಿತು. ಹರಿದ್ರಾ ಲೇಪನ ಪೂಜೆಯೊಂದಿಗೆ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಜರುಗಿತು. ಸಿದ್ಧರಬೆಟ್ಟ, ಸುಳ್ಯ, ಶಿರಕೋಳ, ಮಳಲಿ, ಸಂಗೊಳ್ಳಿ ಮೊದಲಾದ ಮಠಾಧೀಶರು ಪಾಲ್ಗೊಂಡಿದ್ದರು.