ಎಸ್.ಪಿ.ಬಾಲಸುಬ್ರಮಣ್ಯಂ ತುಳುಕದ ಕೊಡ

`ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಮಣ್ಯಂ’ ಕೃತಿ ಬಿಡುಗಡೆಯಲ್ಲಿ ಆನಂದ ಋಗ್ವೇದಿ ಬಣ್ಣನೆ

ದಾವಣಗೆರೆ, ಸೆ.28- ಸ್ವರ ಸಾಮ್ರಾಟರಾಗಿದ್ದ ಹಿರಿಯ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ತುಂಬಿದ ಹಾಗೂ ತುಳುಕದ ಕೊಡ ಆಗಿದ್ದರು  ಎಂದು ಲೇಖಕ ಡಾ. ಆನಂದ ಋಗ್ವೇದಿ ಬಣ್ಣಿಸಿದರು.  

ನಗರದ ಕುವೆಂಪು ಕನ್ನಡ ಭವನದಲ್ಲಿ `ಜಿಲ್ಲೆ ಸಮಾಚಾರ’ ಬಳಗದ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಪತ್ರಕರ್ತ ವಿ. ಹನುಮಂತಪ್ಪ ರಚಿಸಿರುವ `ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಮಣ್ಯಂ’ ಕೃತಿ ಬಿಡುಗಡೆ ಹಾಗೂ ಎಸ್ಪಿಬಿ ನೆನಪಿನ ಒಂದು ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮಿಮಿಕ್ರಿ ಕಲೆ ಬಲ್ಲವರಾಗಿದ್ದರೂ ಚಿತ್ರ ಗೀತೆಗಳ ಗಾಯನ ಸಂದರ್ಭದಲ್ಲಿ ಮಿಮಿಕ್ರಿ ಕಲಾವಿದರನ್ನು ಬಳಸಿಕೊಳ್ಳಿ. ನನಗೆ ಹಾಡುವ ಅವಕಾಶ ಕೊಡಿ ಎಂದು ವಿನಮ್ರವಾಗಿ ಹೇಳು ತ್ತಿದ್ದ ಬಾಲಸುಬ್ರಹ್ಮಣ್ಯಂ ಅವರದ್ದು ಪೂರ್ಣ ಕುಂಭದ ವ್ಯಕ್ತಿತ್ವವಾಗಿತ್ತು ಎಂದು ತಿಳಿಸಿದರು. 

14 ಭಾಷೆಯಲ್ಲಿ 40 ಸಾವಿರ ಹಾಡುಗಳನ್ನು ಹಾಡಿರುವ ಬಾಲಸುಬ್ರಮಣ್ಯಂ ಅವರು ಡಬ್ಬಿಂಗ್ ಕಲಾವಿದರಾಗಿದ್ದರು. 12 ಗಂಟೆಯಲ್ಲಿ 21 ಹಾಡುಗಳನ್ನು ಹಾಡಿ ಗಿನ್ನೆಸ್ ದಾಖಲೆ ಮಾಡಿದ್ದರು. ಕರ್ನಾಟಕ ಹಿಮೊಫಿಲಿಯಾ ಸಂಸ್ಥೆಯಡಿ ಕುಸುಮ ರೋಗಿಗಳಿಗಾಗಿ ಪ್ರತಿ ಬಾರಿ ಹಾಡುತ್ತಾ ಸಂಭಾವನೆಯನ್ನು ಟ್ರಸ್ಟ್‌ಗೆ ನೀಡುತ್ತಿದ್ದ ಅವರು, ತಮ್ಮ ನಡವಳಿಕೆ ಮೂಲಕ ಎತ್ತರದ ಸ್ಥಾನಕ್ಕೆ ತಲುಪಿದ್ದರು ಎಂದು ಬಾಲಸುಬ್ರ ಮಣ್ಯಂ ಅವರ ವ್ಯಕ್ತಿತ್ವವನ್ನು ನೆನೆದರು. 

ಕೊರೊನಾ ಬಗ್ಗೆ ಜಾಗೃತಿ ಹಾಡು ಹಾಡಿದ ಬಾಲಸುಬ್ರಮಣ್ಯಂ ಅವರು ಅದೇ ಕಾಯಿಲೆಗೆ ಬಲಿಯಾದರು. ಅವರು ಭೌತಿಕವಾಗಿ ನಮ್ಮ ಜೊತೆಗೆ ಇಲ್ಲವಾದರೂ ಹಾಡುಗಳ ರೂಪದಲ್ಲಿ ಧ್ರುವ ನಕ್ಷತ್ರವಾಗಿ ಜೀವಂತವಾಗಿದ್ದಾರೆ. ಕೋದಂಡ ಪಾಣಿ ಎಂಬ ವ್ಯಕ್ತಿ ಬಾಲಸುಬ್ರ ಮಣ್ಯಂ ಅವರನ್ನು ಚಿತ್ರರಂಗಕ್ಕೆ ಪರಿಚಯಿಸದೇ  ಇದ್ದಿದ್ದರೆ, ಅನರ್ಘ್ಯ ರತ್ನವೊಂದು ಕಳೆದು ಹೋಗಿರುತ್ತಿತ್ತು ಎಂದ ಅವರು, ಬಾಲಸುಬ್ರ ಮಣ್ಯಂ ಜೀವನದ ಬಗ್ಗೆ ಗೊತ್ತಿರದ ಸಂಗತಿಗಳ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ಅವಿರಕ್ತವಾದ ಸಂಶೋಧನಾ ಕೃತಿ ಎಂದು ಹೇಳಿದರು. 

ಚಿತ್ರ ನಿರ್ದೇಶಕ ಚಿಂದೋಡಿ ಬಂಗಾರೇಶ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಾ, ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ಒಡನಾಟದ ದಿನಗಳನ್ನು ಮೆಲುಕು ಹಾಕುತ್ತಾ, ತಾವು ನಿರ್ಮಿಸಿದ ಗಾನಯೋಗಿ ಪಂಚಾಕ್ಷರ ಗವಾಯಿ ಚಿತ್ರದ ಹಾಡನ್ನು ಹಾಡಲು 8 ತಿಂಗಳು ಸಮಯ ಪಡೆದ ನಂತರ ಬಾಲಸುಬ್ರಹ್ಮಣ್ಯಂ ಅವರು ಶಾಸ್ತ್ರೀಯ ಬದ್ಧವಾದ ಹಾಡನ್ನು ಹಾಡಲು ಆಗುವುದಿಲ್ಲ ಎಂದಿದ್ದರು. ಆದರೂ ಬಿಡದೆ ಹಾಡಿಸಿದೆವು. ಆ ಹಾಡು ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿತು ಎಂದು ಸ್ಮರಿಸಿದರು. 

ಮೇಯರ್ ಎಸ್.ಟಿ. ವೀರೇಶ್ ಮಾತ ನಾಡಿ, ಸೆಲೆಬ್ರಿಟಿಯಾದರೂ ಜನಸಾಮಾನ್ಯರೊಂ ದಿಗಿನ ಒಡನಾಟದ ಬಗ್ಗೆ ಬಾಲಸುಬ್ರಹ್ಮಣ್ಯಂ ಅವರು ಜೀವಂತ ನಿದರ್ಶನ ಎಂದರು. 

ವಕೀಲ ರಾಮಚಂದ್ರ ಕಲಾಲ್ ಮಾತನಾಡಿ,  ಬಾಲಸುಬ್ರಹ್ಮಣ್ಯಂ ಅವರು ಪ್ರಚಾರ ಬಯಸಲಿಲ್ಲ. ಇಂತಹ ಅಪ್ರತಿಮ ಕಲಾವಿದರ ಬಗ್ಗೆ ಪುಸ್ತಕ ಪ್ರಕಟವಾಗಿರುವುದು  ಗಮನಾರ್ಹ ಎಂದರು. 

ಕಾರ್ಯಕ್ರಮದಲ್ಲಿ ಎಂಬಿ ಪದವಿ ಪೂರ್ವ ವಿಜ್ಞಾನ ಕಾಲೇಜಿನ ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಪತ್ರಕರ್ತ ವಿ. ಹನುಮಂತಪ್ಪ, ಎನ್.ಟಿ. ಯರಿಸ್ವಾಮಿ, ಈಶ್ವರ ಶರ್ಮ ಇದ್ದರು. ಪತ್ರಕರ್ತ ರವಿ ಆರುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಲಿಗ್ರಾಮ ಗಣೇಶ್ ಶೆಣೈ  ನಿರೂಪಿಸಿದರು.

error: Content is protected !!