ಶಿಕ್ಷಣ ಜ್ಞಾನ ಪತ್ರಿಕೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು
ದಾವಣಗೆರೆ, ಮಾ.26- ಅರಿವು ಹಾಗೂ ಆಚಾರದ ಸಂಗಮದಿಂದ ಮಾತ್ರ ವ್ಯಕ್ತಿ ಹಾಗೂ ನಾಡಿನ ಏಳ್ಗೆ ಸಾಧ್ಯ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಜ್ಞಾನ ಪತ್ರಿಕೆಯ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪ್ರಸ್ತುತ ದಿನಗಳಲ್ಲಿ ಅರಿವಿದ್ದರೆ ಆಚಾರವಿಲ್ಲ, ಆಚಾರವಿದ್ದರೆ ಅರಿವಿಲ್ಲ ಎಂಬಂತಾಗಿದೆ. ಹೀಗಾಗಿ ಸಮಾಜದಲ್ಲಿ ಅನೇಕ ಸಮಸ್ಯೆಗಳು ಉಲ್ಬಣ ಗೊಂಡಿವೆ. ವ್ಯಕ್ತಿ ಹಾಗೂ ನಾಡಿನ ಏಳ್ಗೆಯಾಗ ಬೇಕಾದರೆ ಅರಿವು ಮತ್ತು ಆಚಾರ ಸಂಗಮವಾಗ ಬೇಕು. ಅದು ಮೊದಲು ನಮ್ಮ ಮನೆಯಿಂದ ಆರಂಭವಾಗಬೇಕು ಎಂದು ಹೇಳಿದರು.
ಹೊನ್ನು, ಹೆಣ್ಣು ಹಾಗೂ ಮಣ್ಣು ಮಾನವನ ನಿಜವಾದ ಆಸ್ತಿ ಎಂದು ಅನೇಕರು ಭ್ರಮಿಸಿದ್ದಾರೆ. ಆದರೆ ಶರಣರು ಮಾನವನ ನಿಜವಾದ ಆಸ್ತಿ ಜ್ಞಾನ ಎಂದು ಹೇಳಿದ್ದಾರೆ. ಜ್ಞಾನವು ಅರಿವು ಹಾಗೂ ಆಚಾರವನ್ನು ಒಳಗೊಂಡಿದ್ದು. ಕೇವಲ ಅರಿವು ಅಥವಾ ಕೇವಲ ಆಚಾರವಿದ್ದರೆ ಜ್ಞಾನವಾಗದು. ಅರಿವು-ಆಚಾರ ಒಳಗೊಂಡದ್ದು ಮಾತ್ರ ಸುಜ್ಞಾನವಾಗಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಇಂದಿನ ಶಿಕ್ಷಣದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಕಂಪ್ಯೂಟರ್ ಬಳಕೆಯಿಂದ ಬಹುಮುಖ ಪ್ರತಿಭೆಗಳು ಹೊರಹೊಮ್ಮುತ್ತಿ ರುವುದು ಹೆಮ್ಮೆ ಪಡುವಂತಹ ಸಂಗತಿ ಎಂದರು.
ಶಿಕ್ಷಣ ಕಲಿತಂತೆ ವಿನಯ, ವಿಧೇಯತೆ, ತಾಳ್ಮೆ, ಸಾಮಾಜೀಕರಣ ವ್ಯಕ್ತಿಯಲ್ಲಿ ರೂಪುಗೊಂಡಾಗ ಆರೋಗ್ಯಕರ ಸಮಾಜ ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಕೆ.ಆರ್. ಸಿದ್ದಪ್ಪ, ಒಂದು ಪತ್ರಿಕೆಯ ಬಳಗ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ನಡೆಸುವುದು ವಿಶೇಷ ಸಂಗತಿ. ಶಿಕ್ಷಣ ಜ್ಞಾನ, ಪತ್ರಿಕೆಯು ಸತತವಾಗಿ 18ನೇ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ನಡೆಸುವುದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ರಾಜ್ಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪತ್ರಿಕೆಯ ಗೌರವ ಸಂಪಾದಕ ಹೆಚ್. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೌಜ, ಚಿಕ್ಕೋಡಿಯ ಎಸ್.ಎಂ ತೇಲಿ, ಗೌರಿಬಿದನೂರಿನ ಬಿ.ಟಿ. ಶಿವಶಂಕರ್, ಶಿರಸಿಯ ಅಂಜನಾ ಭಟ್, ಯಲಹಂಕದ ಸಿ.ಒ. ಪಾಪೇಗೌಡ ಇತರರು ಉಪಸ್ಥಿತರಿದ್ದರು.
ಭದ್ರಾವತಿಯ ಅಪೇಕ್ಷಾ ಮಂಜುನಾಥ ತಂಡ, ಶಿರಸಿಯ ಅನನ್ಯ ಹೆಗಡೆ, ಸಿದ್ಧಗಂಗಾ ಶಾಲಾ ವಿದ್ಯಾರ್ಥಿಗಳು, ಸಂಗೀತ ಶಿಕ್ಷಕರಾದ ಎ. ಸಿದ್ದಪ್ಪ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಯಶಾ ದಿನೇಶ್ ಪ್ರಾರ್ಥಿಸಿದರು. ಎಸ್.ವಿ. ನಾಗರಾಜ್ ಸ್ವಾಗತಿಸಿದರು. ಎಂ. ವನಿತಾ ರಾಜು ನಿರೂಪಿಸಿದರು. ಹೆಚ್.ಎಂ. ಪುಷ್ಪ ಎಸ್. ಚಂದ್ರಕುಮಾರ್ ವಂದಿಸಿದರು.