ಪಾಲಿಕೆ ಉಪ ಚುನಾವಣೆ: ಬಹಿರಂಗ ಪ್ರಚಾರ ಅಂತ್ಯ

ಬಿಜೆಪಿ-ಕಾಂಗ್ರೆಸ್ ಬಲಾಬಲ ಪ್ರದರ್ಶನ

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಪ್ರಾಬಲ್ಯ ಕಂಡುಕೊಳ್ಳಲು ಹೆಣಗಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಇದೇ 29 ರಂದು ಎರಡು ವಾರ್ಡುಗಳಲ್ಲಿ ನಡೆಯುವ ಉಪ ಚುನಾವಣೆ ಮಹತ್ವದ್ದಾಗಿದೆ. ಪ್ರಚಾರದ ಭರಾಟೆಯ ಕಾವು ಹೆಚ್ಚಾಗಿದ್ದು, ಚುನಾವಣಾ ಕಣ ರಂಗೇರಿದೆ.

2020ರ ರಲ್ಲಿ ನಡೆದ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್‌ ಪಕ್ಷದಿಂದ ಗೆದ್ದಿದ್ದ ಯಶೋಧ ಉಮೇಶ್ 2021ರ ಮೇಯರ್ ಚುನಾವಣೆ ವೇಳೆ ಕಾಂಗ್ರೆಸ್‌ನ ದೇವರಮನೆ ಶಿವಕುಮಾರ್ ರಾಜೀನಾಮೆ ನೀಡಿದ್ದರಿಂದ ಇದೇ ಮಾ.29 ರಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಉಪ ಚುನಾವಣೆ ನಡೆಯಲಿದೆ.

`ಕೈ’ ಜಾರಿದ ಸ್ಥಾನಗಳನ್ನು ಮರಳಿ ಪಡೆ ಯಲು ಕಾಂಗ್ರೆಸ್ ಹರ ಸಾಹಸ ಮಾಡುತ್ತಿದ್ದರೆ, ಸೋತ ವಾರ್ಡುಗಳಲ್ಲಿ ಕಮಲ ಅರಳಿಸಿ ತಾಕತ್ತು ಪ್ರದರ್ಶಿಸಲು ಬಿಜೆಪಿ ಹೊಂಚು ಹಾಕಿದೆ.

ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಶುಕ್ರವಾರ ಕಾಂಗ್ರೆಸ್‌  ಹಿರಿಯರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ  ಎರಡೂ ವಾರ್ಡ್‌ಗಳಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿರುವುದು ಕೈ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.

ಇತ್ತ ಬಿಜೆಪಿ ಆರಂಭದಿಂದಲೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ಗೆಲುವಿಗೆ ಕಸರತ್ತು ನಡೆಸುತ್ತಲೇ ಇದೆ. ಶುಕ್ರವಾರವೂ ಸಹ 20ನೇ ವಾರ್ಡ್‌ನಲ್ಲಿ ಸಂಸದ ಸಿದ್ದೇಶ್ವರ ಪ್ರಚಾರ ನಡೆಸಿದರೆ, 22ನೇ ವಾರ್ಡ್‌ನಲ್ಲಿ ಶಾಸಕ ಎಸ್.ಎ ರವೀಂದ್ರನಾಥ್  ಸ್ಥಳೀಯ ಮುಖಂಡರೊಂದಿಗೆ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಿದರು. ಚುನಾವಣೆ ನಡೆಯಲಿರುವ ಎರಡೂ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದೆ.

ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ 20ನೇ ವಾರ್ಡ್ ಭಾರತ್ ಕಾಲೋನಿಯಲ್ಲಿ ಕಾಂಗ್ರೆಸ್‌ನಿಂದ ಎಂ.ಮೀನಾಕ್ಷಿ ಹಾಗೂ ಬಿಜೆಪಿಯಿಂದ ಎಂ.ರೇಣುಕಾ ಕೃಷ್ಣ ಇಬ್ಬರೇ ಕಣದಲ್ಲಿದ್ದು, ಇಬ್ಬರ ನಡುವೆ ನೇರ ಹಣಾಹಣಿ ನಡೆಯಲಿದೆ. ಲಂಬಾಣಿ, ತಮಿಳು, ಪರಿಶಿಷ್ಟರು, ಹಿಂದುಳಿದ ವರ್ಗದವರ ಮತಗಳು ಹೆಚ್ಚಾಗಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ.

22ನೇ ವಾರ್ಡ್‌ ಯಲ್ಲಮ್ಮ ನಗರ ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನಕ್ಕೆ ಐವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಪ್ರಮುಖವಾಗಿ ಕಣದಲ್ಲಿರುವ ಕಾಂಗ್ರೆಸ್‌ನ  ರವಿಸ್ವಾಮಿ ಮತ್ತು ಬಿಜೆಪಿಯ ಶಿವಾನಂದ ರಾಮಚಂದ್ರಪ್ಪ ನಡುವೆಯೇ ಜಿದ್ದಾ ಜಿದ್ದಿ ಏರ್ಪಟ್ಟಿದ್ದು, ಅಲ್ಪ ಸಂಖ್ಯಾತರು, ಹಿಂದುಳಿದವರ ಮತಗಳು ಹೆಚ್ಚಾಗಿವೆ.

ಆದರೆ ಈ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಾಕಲಿದೆ. ಕಾಂಗ್ರೆಸ್ ಟಿಕೆಟ್  ಸಿಗದ ಕಾರಣಕ್ಕೆ ಬಂಡಾಯ ಎದ್ದಿರುವ ಆಕಾಂಕ್ಷಿ ಮಹಮದ್ ಮುಜಾಹಿದ್ ಪಾಷಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಶುಕ್ರವಾರ ರಾಷ್ಟ್ರೀಯ ಪಕ್ಷಗಳಿಗೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಪ್ರಚಾರ ನಡೆಸಿ ಶಕ್ತಿ ಪ್ರದರ್ಶಿಸಿದರು.

ಪ್ರಚಾರದ ಸಾಗರದಲ್ಲಿ ಕೊಚ್ಚಿಹೋದ ಕೊರೊನಾ ಅಲೆ: ಉಪ ಚುನಾವಣೆ ಅಂಗವಾಗಿ ನಗರದ 20 ಹಾಗೂ 22ನೇ ವಾರ್ಡ್‌ನಲ್ಲಿ ಅಭ್ಯರ್ಥಿಗಳ ಪರ ಆಯಾ ಪಕ್ಷದ ಮುಖಂಡರು ಭಾರೀ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದರು.

ಪ್ರಚಾರದ ಭರಾಟೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆಯಾಗಿತ್ತು. ನಗರದ ವಿವಿಧೆಡೆ ಮಾಸ್ಕ್ ಧರಿಸದೇ ಇರುವವರನ್ನು ತಡೆದು ದಂಡ ವಿಧಿಸುವ  ಪೊಲೀಸರು, ಮಹಾನಗರ ಪಾಲಿಕೆ ಅಧಿಕಾರಿಗಳು ಇಲ್ಲಿ ಏಕೆ ಮಾಯವಾಗಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

error: Content is protected !!