ಕಾಮಗಾರಿಗೆ ಶೀಘ್ರ ಚಾಲನೆ : ಸಚಿವ ಭೈರತಿ
ಹರಿಹರ, ಆ.6- ಕೊಂಡಜ್ಜಿ ಮತ್ತು ಗಂಗನರಸಿ ಗ್ರಾಮದ ಸಂಪರ್ಕ ಸೇತುವೆ ನಿರ್ಮಾಣ ಮಾಡಲು 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ, ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಕೊಂಡಜ್ಜಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಹಾನಿಗೀಡಾದ ಸೇತುವೆಯ ವೀಕ್ಷಣೆ ಹಾಗೂ ಗ್ರಾಮದಲ್ಲಿ ಮನೆಗಳಿಗೆ ಹಾನಿಯಾದ ಸ್ಥಳವನ್ನು ಪರಿಶೀಲನೆ ನಡೆಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಾರಥಿ ಮತ್ತು ಚಿಕ್ಕಬಿದರಿ ಗ್ರಾಮದ ಸಂಪರ್ಕ ಸೇತುವೆ ಕೆಲಸವನ್ನು ಸಹ ಶೀಘ್ರವಾಗಿ ಮಾಡಲಾಗುತ್ತದೆ. ಸೇತುವೆ ನಿರ್ಮಾಣದ ವಿಚಾರವಾಗಿ ಇತ್ತೀಚೆಗೆ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ಪ್ರಕರಣಗಳು ದಾಖಲು ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಜಿಲ್ಲಾಧಿಕಾರಿಗಳ ಬಳಿ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು.
ನಂತರ ಗ್ರಾಮದಲ್ಲಿ ಆರ್. ಆಶಾ ಮಂಜುನಾಥ್ ಎಂಬುವವರ ಮನೆ ಬಿದ್ದಿದ್ದು, ಸ್ಥಳಕ್ಕೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಸಂಪೂರ್ಣ ಹಾನಿ ಗೊಳಗಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಕ್ಕೆ ಸರ್ಕಾರದಿಂದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಶೇ. 70 ರಿಂದ 80 ರಷ್ಟು ಪ್ರಮಾಣದಲ್ಲಿ ಹಾನಿಯಾದ ಮನೆಗಳಿಗೆ 3 ರಿಂದ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಅವರು ಹೇಳಿದರು.
ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಗಳು ಆದಷ್ಟು ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿದ್ದಾರೆ. ಶಾಸಕರೆಲ್ಲರಿಗೂ ಸಚಿವ ಸ್ಥಾನ ನೀಡುವುದು ಕಷ್ಟಸಾಧ್ಯ ಎಂದರು. ದಾವಣಗೆರೆ ಜಿಲ್ಲೆಯ ವಿಚಾರದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಅವರನ್ನು ಭೇಟಿ ಮಾಡಿದ್ದೇನೆ. ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದರು.
ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಕರಣದ ತನಿಖೆಯನ್ನು ಅಧಿಕಾರಿಗಳು ಮಾಡುತ್ತಿದ್ದು, ಅದರ ಬಗ್ಗೆ ಮಾತನಾಡುವುದಿಲ್ಲ. ಹೊನ್ನಾಳಿ ಶಾಸಕರು ಸಹ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕ್ಷೇತ್ರದಲ್ಲಿ ಬಹಳ ಕೆಲಸಗಳಿಗೆ ಚಾಲನೆ ನೀಡಬೇಕಾಗಿದ್ದು, ಸಮಯದ ಅಭಾವದಿಂದ ಮುಂದಿನ ದಿನಗಳಲ್ಲಿ ಅಲ್ಲಿನ ಎಲ್ಲಾ ಕೆಲಸಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಕೊಂಡಜ್ಜಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಕಟ್ಟಡ ಕಾಮಗಾರಿ ಬಗ್ಗೆ ಆಗಸ್ಟ್ 14 ರ ನಂತರ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಮುಂದಿನ ನಿರ್ಣಯ ತಿಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ರಿಷ್ಯಂತ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ದೂಡಾ ಅಧ್ಯಕ್ಷ ಶಿವಕುಮಾರ್, ದೂಡಾ ಅಧಿಕಾರಿ ಕುಮಾರಸ್ವಾಮಿ, ಹರಿಹರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಲಿಂಗರಾಜ್ ಹಿಂಡಸಘಟ್ಟ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ತಾ.ಪಂ. ಇಓ ಗಂಗಾಧರನ್, ಡಿವೈಎಸ್ಪಿ ನರಸಿಂಹರಾಜು, ಸಿಪಿಐ ಸತೀಶ್ ಕುಮಾರ್, ಗ್ರಾಮಾಂತರ ಠಾಣೆ ಪಿಎಸ್ಐ ಡಿ. ರವಿಕುಮಾರ್, ಕೊಂಡಜ್ಜಿ ಜಿ.ಎನ್. ಸಿದ್ದೇಶ್, ವಿಜಯಕುಮಾರ್, ಕೆ.ಹೆಚ್. ಗಣೇಶ್, ಸಿ.ಜಿ. ನಾಗರಾಜ್, ಎಂ. ನಾಗರಾಜ್, ಬಿ.ಆರ್. ಅಶೋಕ್, ಮಲ್ಲಿಕಾರ್ಜುನ ಹೆಗಡೆ, ಎಂ. ನಾಗರಾಜ್, ಬಸವರಾಜ್ ಮೇಕೆರ, ಜಿ.ಹೆಚ್. ಉಮೇಶ್. ಮಠದ ನಾಗೇಂದ್ರಪ್ಪ, ಗಿರಿಜಹಳ್ಳಿ ಕರಿಬಸಪ್ಪ, ಬಿ. ವಿರೂಪಾಕ್ಷ ಗೌಡ್ರು, ಕಿರಣ್ಕುಮಾರ್, ಆವರಗೊಳ್ಳದ ಭೀಮಪ್ಪ, ಗಂಗನರಸಿ ಹೆಚ್.ಜಿ. ಉಮೇಶ್ ಇನ್ನಿತರರಿದ್ದರು.