ದಾವಣಗೆರೆ, ಮಾ. 25 – ಕೊರೊನಾ ಹಿನ್ನೆಲೆಯಲ್ಲಿ ಹೋಳಿ ಹಬ್ಬ ವನ್ನು ಮನೆಗೆ ಸೀಮಿತಗೊಳಿಸಬೇಕು, ಸಾರ್ವಜನಿಕವಾಗಿ ಹೋಳಿ ಆಚರಿಸ ಬಾರದು. ಡಿ.ಜೆ. ಹಾಗೂ ಸಾರ್ವಜನಿ ಕರಿಗೆ ಹೋಳಿ ನೀರು ಸಿಂಪಡಿಸುವುದರ ಮೇಲೆ ಸಂಪೂರ್ಣ ನಿಷೇಧ ಇದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಬರುವ ಮಾ. 28ರ ಕಾಮ ದಹನ, ಮಾ. 29ರ ಹೋಳಿ, ಶಬ್-ಎ-ಬರಾತ್, ಪಾಲಿಕೆ ಎರಡು ವಾರ್ಡ್ಗಳ ಉಪ ಚುನಾವಣೆ ಮತ್ತು ಗ್ರಾಮ ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಮಾರ್ಗಸೂಚಿ ಬಿಡುಗಡೆ ಮಾಡಿವೆ. ಅದರ ಅನ್ವಯ ಮಾಸ್ಕ್ ಧರಿಸದಿದ್ದರೆ 250 ರೂ. ದಂಡ ವಿಧಿಸಲಾಗುವುದು ಹಾಗೂ ನಿಗದಿಗಿಂತ ಹೆಚ್ಚು ಜನ ಸಭೆ – ಸಮಾರಂಭಗಳಲ್ಲಿ ಸೇರಿದರೆ ಆಯೋಜಕರು ಹಾಗೂ ಕಟ್ಟಡ ಬಾಡಿಗೆ ನೀಡಿದವರಿಗೆ 10 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುವುದು ಎಂದವರು ಎಚ್ಚರಿಸಿದ್ದಾರೆ.
ಸಮಾರಂಭಕ್ಕೆ ಕಟ್ಟಡ ಬಾಡಿಗೆ ನೀಡುವವರು ಪದೇ ಪದೇ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೂ ಕಳಿಸಲಾಗುವುದು ಎಂದ ಬೀಳಗಿ, ಮೇ ವರೆಗೆ ಹಲವಾರು ಹಬ್ಬಗಳು ಹಾಗೂ ಜಾತ್ರೆಗಳು ಬರುತ್ತವೆ. ಈ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದ ತಂಡ ಗುರುವಾರ ಸಂಜೆ ಮಾಸ್ಕ್ ಧರಿಸದ ವಾಹನ ಚಾಲಕರಿಗೆ ದಂಡ ವಿಧಿಸಿ, ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದರು.
ಹಬ್ಬ-ಜಾತ್ರೆ ದಿನಗಳಲ್ಲಿ ಮಾರ್ಗಸೂಚಿ ಪಾಲಿಸದಿದ್ದರೆ ದಂಡದ ಎಚ್ಚರಿಕೆ : ಜಿಲ್ಲಾಧಿಕಾರಿ
34,750 ರೂ. ದಂಡ ವಸೂಲಿ: ದಾವಣಗೆರೆಯ ವಿವಿಧೆಡೆ ದಾಳಿ ಮಾಡಿರುವ ಪೊಲೀಸರು ಮಾಸ್ಕ್ ಹಾಕದ 139 ಜನರಿಂದ 34750 ರೂ.ಗಳ ದಂಡ ವಿಧಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮನೆಯಲ್ಲಿ ಹಾಗೂ ಕಾಂಪೌಂಡ್ ಒಳಗೆ ಓಕುಳಿ ಆಚರಿಸಬೇಕು. ಹಿಂದಿನ ದಿನಗಳಂತೆ ಹೋಳಿ ಹಬ್ಬಕ್ಕಾಗಿ ಬೀದಿಗೆ ಬಂದು ಜನಸಂದಣಿ ಮಾಡಬಾರದು ಎಂದು ತಿಳಿಸಿದರು.
ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸುತ್ತಾರೆ ಎಂಬುದಕ್ಕಿಂತ ಹೆಚ್ಚಾಗಿ ಜೀವಕ್ಕೆ ಪ್ರಾಮುಖ್ಯತೆ ನೀಡಬೇಕು. ಜೀವ ಹೋದರೆ ಮತ್ತೆ ಸಿಗುವುದಿಲ್ಲ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಗುರಿಯಾದವರಲ್ಲಿ ಮೂರ್ನಾಲ್ಕು ಜನರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಇದನ್ನೆಲ್ಲ ಅರಿತು ಕೊರೊನಾ ಮಾರ್ಗಸೂಚಿ ಪಾಲಿಸಬೇಕು ಎಂದು ತಿಳಿಸಿದರು. ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಸ್ವಚ್ಛತೆಗೆ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತಿದೆ. ಈ ವಿಷಯದಲ್ಲಿ ನಾಗರಿಕರ ಸಹಭಾಗಿತ್ವವೂ ಮುಖ್ಯ. ಕಸ ಸೃಷ್ಟಿಸುವವರು ನಾವೇ ಆಗಿರುವುದರಿಂದ, ನಿಭಾಯಿಸುವ ಪ್ರಮುಖ ಕರ್ತವ್ಯವೂ ನಮ್ಮ ಮೇಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರಾದ ಕೆ.ಬಿ. ಶಂಕರನಾರಾಯಣ, ಸಾಧಿಕ್ ಪೈಲ್ವಾನ್, ವೈ. ಮಲ್ಲೇಶ್, ಅಮಾನುಲ್ಲಾ ಖಾನ್, ಸತೀಶ್ ಪೂಜಾರ್, ಸಿರಾಜ್, ಸೋಮಲಾಪುರ ಹನುಮಂತಪ್ಪ, ಹಾಲೇಶ್ ಮತ್ತಿತರರು ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕೆಂದು ಕರೆ ನೀಡಿದರು.
ಡಿಹೆಚ್ಒ ಡಾ. ನಾಗರಾಜ್, ಆರ್.ಟಿ.ಒ. ಶ್ರೀಧರ ಮಲ್ನಾಡ್, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಎ.ಎಸ್.ಪಿ. ರಾಜೀವ್ ಮತ್ತಿತರರು ಉಪಸ್ಥಿತರಿದ್ದರು. ಡಿವೈೆಸ್ಪಿ ನಾಗೇಶ್ ಐತಾಳ್ ಸ್ವಾಗತಿಸಿದರೆ, ವೃತ್ತ ನಿರೀಕ್ಷಕ ಗಜೇಂದ್ರ ವಂದಿಸಿದರು.