ಕೂಲಹಳ್ಳಿಯ ಐತಿಹಾಸಿಕ ಶ್ರೀ ಗೋಣಿಬಸವೇಶ್ವರ ಸ್ವಾಮಿ ರಥೋತ್ಸವ

ಹರಪನಹಳ್ಳಿ, ಮಾ.25- ಪಂಚಗಣಾಧಿಶ್ವರ ರಲ್ಲಿ ಒಬ್ಬರಾದ ತಾಲ್ಲೂಕಿನ ಐತಿಹಾಸಿಕ ಕೂಲ ಹಳ್ಳಿಯ ಶ್ರೀ ಗೋಣಿ ಬಸವೇಶ್ವರಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

ಭಕ್ತರ ಇಷ್ಟಾರ್ಥವನ್ನು ನೆರವೇರಿಸುವ ಕ್ಷೇತ್ರದ ಗೋಣಿ ಬಸವೇಶ್ವರ ರಥೋತ್ಸವಕ್ಕೆ ಕೊರೊನಾ ಸೇರಿದಂತೆ ಸರ್ಕಾರದ ಯಾವುದೇ ನಿಯಮಗಳನ್ನು  ಲೆಕ್ಕಿಸದೆ ಜನಸಾಗರವೇ ಸೇರಿತ್ತು.

ಜಾತ್ರೆಯಲ್ಲಿ ಕೆಲವೇ ಅಂಗಡಿಗಳ ಟೆಂಟ್ ಹಾಕಲಾಗಿತ್ತು.  ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ದೂರದಿಂದ ಬಂದ ಭಕ್ತರಿಗೆ ಜಾತ್ರೆಯಲ್ಲಿ ಉಳಿದುಕೊಳ್ಳಲು ಅವಕಾಶವಿಲ್ಲದ್ದರಿಂದ  ದೇವರ ದರ್ಶನ ಪಡೆದು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿದ್ದರು. ಜಾತ್ರೆಗೆ ಬಂದ ಭಕ್ತರಲ್ಲಿ ಬೆರಳೆಣಿಕೆಯಷ್ಟು  ಜನರು ಮಾತ್ರ ಮಾಸ್ಕ್ ಧರಿಸಿದ್ದರು.  ರಥೋತ್ಸವಕ್ಕೆ  ಉತ್ಸವ ಮೂರ್ತಿ ಜೊತೆಗೆ  ಪಟ್ಟದ ಶ್ರೀ ಚಿನ್ಮಯ  ಸ್ವಾಮೀಜಿ, ಅಲಂಕರಿಸಿದ ಅಶ್ವದೊಂದಿಗೆ ರಥದ ಬಳಿ ಆಗಮಿಸಿ, ರಥವನ್ನು ಐದು ಸುತ್ತು ಪ್ರದಕ್ಷಿಣೆ ಮಾಡಿದ ನಂತರ  ಕೊಟ್ಟೂರಿನ ಗುರುಬಸವೇಶ್ವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ನಂತರ  ಗೋಣಿ ಬಸವೇಶ್ವರ ರಥೋತ್ಸವ ಜರುಗಿತು.

ಈ ವೇಳೆ ನೀಲಗುಂದ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.   ಪರುಶುರಾಮಪ್ಪ, ಬಾಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪೂಜಾರ್ ಹನುಮಂತಪ್ಪ, ಸಿಪಿಐ ನಾಗರಾಜ್ ಕಮ್ಮಾರ, ಪಿಎಸ್‌ಐ  ಪ್ರಕಾಶ್  ಇನ್ನಿತರರಿದ್ದರು.

error: Content is protected !!