ಹರಿಹರದಲ್ಲಿ 60 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್
ಹರಿಹರ, ಜೂ28- ತಾಲ್ಲೂಕಿನ ಅಭಿವೃದ್ಧಿಗೆ ಶಾಸಕ ಎಸ್. ರಾಮಪ್ಪ ಸಚಿವರ ಹಿಂಬಾಲು ಬಿದ್ದು ಕ್ಷೇತ್ರಕ್ಕೆ 100 ಬೆಡ್ ಆಸ್ಪತ್ರೆ ಮತ್ತು ಅಭಿವೃದ್ಧಿಗೆ ಹಣವನ್ನು ತರುವಂತಹ ಕೆಲಸವನ್ನು ಮಾಡಬೇಕು, ಅದನ್ನು ಬಿಟ್ಟು ಕೇವಲ ಭಾಷಣ ಮಾಡಿದರೇ ವಿನಃ ನನ್ನನ್ನು ಎಂದೂ ಕರೆದುಕೊಂಡು ಹೋಗಲಿಲ್ಲ. ಅವರಿಗೆ ಕೆಲಸವನ್ನು ಮಾಡಬೇಕು ಎಂಬ ಆಸೆ ಇದೆ, ಆದರೆ ಆಸೆಗೆ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ರಾಮಪ್ಪನವರಿಗೆ ಹೆಚ್ಚು ಸಹಕಾರ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿ. ಮಲ್ಲಿಕಾರ್ಜುನಪ್ಪ, ಹಾಲಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಆಕ್ಸಿಜನ್ ಪ್ಲಾಂಟ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್. ರಾಮಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಯವರು ಚಾಲನೆ ನೀಡಿದ ನಂತರದಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ದೇಶದಲ್ಲಿ ಕೊರೊನಾ ಎರಡನೇ ಅಲೆ ಬಹಳ ದೊಡ್ಡದಾದ ಸಮಸ್ಯೆಯನ್ನು ತಂದಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ಆಕ್ಸಿಜನ್ ಕೊರತೆ ಹೆಚ್ಚಾಗಿ ಕಂಡುಬಂದ ಆ ಸಮಯದಲ್ಲಿ, ನಾವು ಹರಿಹರ ನಗರದ ಸದರನ್ ಗ್ಯಾಸ್‌ಗೆ ಭೇಟಿ ನೀಡಿದಾಗ ನಮ್ಮ ಜಿಲ್ಲೆ ಸೇರಿದಂತೆ ಪಕ್ಕದ ಹಲವಾರು ಜಿಲ್ಲೆಯ ಜನರ ಪ್ರಾಣ ರಕ್ಷಣೆಗೆ ಇಲ್ಲಿಂದ ಆಕ್ಸಿಜನ್ ಸರಬರಾಜು ಮಾಡುವುದನ್ನು ಗಮನಿಸಿ, ಇಲ್ಲಿನ ಜನತೆಗೆ ನಾವೇ ಯಾಕೆ ಆಕ್ಸಿಜನ್ ಕೇಂದ್ರವನ್ನು ತೆರೆಯಬಾರದು ಎಂದು ತೀರ್ಮಾನಕ್ಕೆ ಬಂದು ಹರಿಹರ, ಹರಪನಹಳ್ಳಿ, ಚಿತ್ರದುರ್ಗ ನಗರದಲ್ಲಿ ಸುಮಾರು 1 ಕೋಟಿ 80 ಲಕ್ಷ ಹಣವನ್ನು ಖರ್ಚು ಮಾಡಿ ಜಿ.ಎಂ. ಮಲ್ಲಿಕಾರ್ಜುನಪ್ಪ ಹಾಲಮ್ಮ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ಅನುಕೂಲ ಮಾಡಲಾಗಿದೆ. ಜೀವ ಉಳಿದರೆ ಸಮಾಜದಲ್ಲಿ ಸಾಧನೆ ಸಾಕಷ್ಟು ಮಾಡಬಹುದು ಎಂದು ಸಿದ್ದೇಶ್ವರ ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಮತ್ತು ನಗರ ಅಭಿವೃದ್ಧಿ ಸಚಿವ ಎಸ್.ಎ. ಭೈರತಿ ಬಸವರಾಜ್ ಮಾತನಾಡಿ, ಮನುಷ್ಯ ಎಷ್ಟು ದಿನ ಬದುಕುತ್ತಾರೆ ಎಂಬುದು ಮುಖ್ಯವಲ್ಲ ಬದುಕ್ಕಿದ್ದಾಗ ಜೀವನದಲ್ಲಿ ಏನು ಸಾಧನೆ ಮಾಡಿದ್ದೇವೆ ಎಂಬುದು ಬಹುಮುಖ್ಯ ವಾಗಿರುತ್ತದೆ. ಅಂತಹ ಸಾಧನೆ ಎಂ.ಪಿ ಯವರು ಮಾಡಿ ತೋರಿಸುವ ಮೂಲಕ ಈ ಭಾಗದ ಜನರಿಗೆ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.
ಕೊರೊನಾದಿಂದ ಮರಣ ಹೊಂದಿದ ಬಡ ಕುಟುಂಬದ ಸದಸ್ಯರು ನರಳುವಂತಾಗಿದೆ. ಇದನ್ನು ತಡೆಗಟ್ಟಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೃತ ಕುಟುಂಬಸ್ಥರಿಗೆ 1 ಲಕ್ಷ ಪರಿಹಾರ ನೀಡಲು ಮುಂದಾಗಿದ್ದು, ವರದಿಯನ್ನು ತರಿಸಿಕೊಂಡು ಅವರಿಗೆ ಪರಿಹಾರವನ್ನು ತಲುಪಿಸುವ ಕೆಲಸವನ್ನು ಶೀಘ್ರವಾಗಿ ಮಾಡಲಾಗುತ್ತದೆ. ನಾನು ಕೂಡ ವೈಯಕ್ತಿಕವಾಗಿ ನನ್ನ ಕ್ಷೇತ್ರದ ಜನತೆಗೆ 1 ಕೋಟಿ 15 ಲಕ್ಷ ಹಣದ ಚೆಕ್ ಮತ್ತು 1 ಲಕ್ಷ ಆಹಾರದ ಕಿಟ್ ವಿತರಣೆ ಮಾಡಿದ್ದೇನೆ.
ಶಾಸಕ ಎಸ್. ರಾಮಪ್ಪ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯವನ್ನು ಎರಡು ತಿಂಗಳ ಮೊದಲೇ ಮಾಡಿದ್ದಾರೆ. ಸಿದ್ದೇಶ್ವರ ಕುಟುಂಬದ ಸದಸ್ಯರು ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿರುವುದಕ್ಕೆ ಅಭಿನಂದನೆಗಳು. ನಗರದ ಸಾರ್ವಜನಿಕ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಯನ್ನಾಗಿ ಮಾಡಬೇಕು ಹಾಗೂ ಹರಪನಹಳ್ಳಿ ರಸ್ತೆಯಲ್ಲಿ ಇರುವ ಸೇತುವೆಗೆ ಇನ್ನೊಂದು ಸೇತುವೆ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಸಚಿವರನ್ನು ಕೇಳಿಕೊಂಡರು.
ದಾವಣಗೆರೆ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಜಿಲ್ಲೆಯಲ್ಲಿ ಕೊರೊನಾ ಸಮಯದಲ್ಲಿ ಆಕ್ಸಿಜನ್ ಮತ್ತು ವೆಂಟಿಲೇಶನ್ ಕೊರತೆ ಬಹಳ ಇತ್ತು. ಇದರಿಂದಾಗಿ ಸಾರ್ವಜನಿಕರ ಕಷ್ಟ ಹೇಳತೀರದು. ಹಿಂದೆ ರಾಜ್ಯದ ಆರೋಗ್ಯ ಸಚಿವ ಸಿದ್ದವೀರಪ್ಪನವರ ಕಾಲದಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚು ಒತ್ತನ್ನು ನೀಡಿದ್ದರು. ಅದರಂತೆ ಜಿಲ್ಲೆಯ ಸಚಿವರು, ಸಂಸದರು, ಜಿಲ್ಲಾಧಿಕಾರಿಗಳು ಎಲ್ಲಾ ತಾಲ್ಲೂಕಿಗೆ ಪ್ರವಾಸ ಕೈಗೊಂಡು ಸಾಕಷ್ಟು ಕೊರೊನಾ ತಡೆಗಟ್ಟಲು ಶ್ರಮವಹಿಸಿ ಕೆಲಸ ಮಾಡಿದರು ಎಂದು ಶ್ಲ್ಯಾಘಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಕಾರ್ಯನಿರ್ವಾಹಣಾಧಿಕಾರಿ ಮಹಾಂತೇಶ್. ಎಸ್.ಪಿ. ರಿಷ್ಯಂತ್, ಜಿಲ್ಲಾ ಉಪವಿಭಾಗಧಿಕಾರಿ ಮಮತಾ ಹೊಸಗೌಡ್ರು, ಜಿಲ್ಲಾ ಆರೋಗ್ಯ ಅಧಿಕಾರಿ ನಾಗರಾಜ್ , ನಟರಾಜ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮಿ, ಎಇಇ ಬಿರಾದಾರ, ಡಿವೈಎಸ್ಪಿ ನರಸಿಂಹರಾಜು, ಸಿಪಿಐ ಸತೀಶ್‌ಕುಮಾರ್, ಡಾ. ಹನುಮನಾಯ್ಕ್, ಡಾ. ಚಂದ್ರಮೋಹನ್, ಡಾ. ಸವಿತಾ, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ಹನುಮಂತಪ್ಪ, ರಜನಿಕಾಂತ್ ಮತ್ತಿತರರು ಹಾಜರಿದ್ದರು.