ಚನ್ನಗಿರಿ ತಾಲ್ಲೂಕು ಮಟ್ಟದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್
ಚನ್ನಗಿರಿ, ಜೂ. 28 – ಕೋವಿಡ್ನಿಂದ ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರ ದಿಂದ ಪರಿಹಾರ ಸೌಲಭ್ಯ ಕಲ್ಪಿಸುವ ಉದ್ದೇಶ ದಿಂದ ತಾಲ್ಲೂಕಿನಲ್ಲಿ ಕೋವಿಡ್ನಿಂದ ಮರಣ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಪಟ್ಟಿ ಸಿದ್ಧಪಡಿಸಿ, ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಅವರು ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಮೌದ್ಗಲ್ ಆಂಜನೇಯ ಸ್ವಾಮಿ ಕಲ್ಯಾಣ ಮಂದಿರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಹಾಗೂ ಕೋವಿಡ್-19 ನಿಯಂತ್ರಣ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕೋವಿಡ್ನಿಂದ ಎಷ್ಟು ಜನ ಮೃತಪಟ್ಟಿದ್ದಾರೆ, ಎಂಬ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಸಂಗ್ರಹಿಸಿ, ಮೃತಪಟ್ಟಿರುವವರ ಹೆಸರು, ವಿಳಾಸ, ಕೋವಿಡ್ ಪಾಸಿಟಿವ್ ರಾಜ್ಯ ಮಟ್ಟದ ಗುರುತು ಸಂಖ್ಯೆಯುಳ್ಳ ಮಾಹಿತಿಯ ವಿವರವಾದ ಪಟ್ಟಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 3551 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 59 ಜನ ಕೋವಿಡ್ನಿಂದ ಮರಣ ಹೊಂದಿದ್ದಾರೆ. ತಾಲ್ಲೂಕಿನಲ್ಲಿ 5 ಕೋವಿಡ್ ಕೇರ್ ಸೆಂಟರ್ಗಳನ್ನು ಪ್ರಾರಂಭಿಸಲಾಗಿದ್ದು, 1544 ಜನರು ಕೋವಿಡ್ ಕೇರ್ ಸೆಂಟರ್ನಲ್ಲಿ ಆರೈಕೆ ಪಡೆದುಕೊಂಡಿದ್ದಾರೆ ಎಂದರು.
ತಹಶೀಲ್ದಾರ್ ಪುಟ್ಟರಾಜ ಗೌಡ ಮಾತನಾಡಿ, ಲಸಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಹೆಚ್ಚು ಜನರು ಲಸಿಕೆ ಪಡೆದುಕೊಳ್ಳಲು ಮುಂದೆ ಬರುತ್ತಿದ್ದಾರೆ. ಪಟ್ಟಣದ 23 ವಾರ್ಡ್ಗಳಲ್ಲಿ ಸೋಂಕು ನಿವಾರಕ ಸಿಂಪಡಿಸಲಾಗಿದ್ದು, ಪ್ರತಿನಿತ್ಯ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ನಡೆಸುತ್ತಿದ್ದೇವೆ ಎಂದರು.
ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ, ತಜ್ಞರ ಅಭಿಪ್ರಾಯದಂತೆ ಕೋವಿಡ್ನ ಮೂರನೆ ಅಲೆ ಬರುವ ಸಾಧ್ಯತೆಗಳಿದ್ದು, ಮಕ್ಕಳ ಮೇಲೆ ಪರಿಣಾಮ ಬೀರುವ ಸಂಭವವಿದೆ ಎಂದಿದ್ದಾರೆ. ಹೀಗಾಗಿ ಜನರ ಪ್ರಾಣ ರಕ್ಷಣೆಗೆ ನಾವು ಆದ್ಯತೆ ನೀಡಬೇಕಿದ್ದು, ಮೂರನೇ ಅಲೆ ತಾಲ್ಲೂಕಿಗೆ ಬಾರದಂತೆ ಅಧಿಕಾರಿಗಳು ಶ್ರಮವಹಿಸಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ಪುರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವ ಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಶ್ರೀಮತಿ ಮಮತ ಹೊಸಗೌಡರ್ ಸೇರಿದಂತೆ ಇನ್ನುಳಿದ ತಾಲ್ಲೂಕು ಅಧಿಕಾರಿಗಳು ಇದ್ದರು.