‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆಪ್ ಲೋಕಾರ್ಪಣೆ

ದಾವಣಗೆರೆ, ಮಾ.25- ಜನ ಸಾಮಾನ್ಯರಿಗೆ ಸರ್ಕಾರಿ ಕಚೇರಿ, ಆಸ್ಪತ್ರೆ, ಯಾತ್ರಾ ಸ್ಥಳ, ಜನೌಷಧಿ ಕೇಂದ್ರ ಇತ್ಯಾದಿ ಮಾಹಿತಿಯನ್ನು  ಸುಲಭವಾಗಿ ತಲುಪಿಸುವ ಉದ್ದೇಶ ದಿಂದ ‘ದಾವಣಗೆರೆ ಆನ್ ಮ್ಯಾಪ್’ ಮೊಬೈಲ್ ಆಪ್ ಅಭಿವೃದ್ದಿಪಡಿಸಿದ್ದು, ಸಾರ್ವಜನಿಕರು  ಉಪಯೋಗ ಪಡೆದು ಕೊಳ್ಳಬೇಕು  ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯ ನ್ಯಾಷನಲ್ ಇನ್‍ಫರ್ಮ್ಯಾಟಿಕ್ಸ್ ಸೆಂಟರ್ (ಎನ್‍ಐಸಿ) ಅಧಿಕಾರಿಗಳು ಅಭಿವೃದ್ದಿ ಪಡಿಸಿರುವ ಈ ಆಪ್ ಗೆ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ಅಧಿಕೃತವಾಗಿ ಚಾಲನೆ ನೀಡಿ, ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.

ಡಿಸ್ಟ್ರಿಕ್ಟ್ ಗವರ್ನೆನ್ಸ್ ಮೊಬೈಲ್ ಚಾಲೆಂಜ್ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳ ಎನ್‍ಐಸಿ ಅಧಿಕಾರಿಗಳು ಆಪ್ ಅಭಿವೃದ್ಧಿ ಪಡಿಸುವ  ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದರ ಅಂಗವಾಗಿ  ಕೇವಲ 15 ರಿಂದ 20 ದಿನಗಳಲ್ಲಿ ನಮ್ಮ ಅಧಿಕಾರಿಗಳು ರಾಜ್ಯದಲ್ಲಿಯೇ ಪ್ರಥಮವಾಗಿ ಆಪ್  ಅಭಿವೃದ್ದಿಪಡಿಸಿದ್ದಾರೆ ಎಂದರು.

ಆರು ಸೇವೆಗಳ ಮಾಹಿತಿ ಅಳವಡಿಕೆ :   ಆಸ್ಪತ್ರೆಗಳು, ಜನೌಷಧ ಕೇಂದ್ರಗಳು, ಪೊಲೀಸ್ ಸ್ಟೇಷನ್‍ಗಳು, ಪೆಟ್ರೋಲ್ ಬಂಕ್‍ಗಳು, ಗ್ರಾಮ ಒನ್ ಕೇಂದ್ರಗಳು ಮತ್ತು ಯಾತ್ರಾ ಸ್ಥಳಗಳು ಸೇರಿ ಜಿಲ್ಲೆಯ ಆರು ಪ್ರಮುಖ ಮಾಹಿತಿಗಳನ್ನು ಆಪ್ ನಲ್ಲಿ ಅಳವಡಿಸಲಾಗಿದೆ ಎಂದರು.

ಜಿಲ್ಲೆಯ ವೆಬ್‍ಸೈಟ್ ಸಹ ಇದರಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳು, ರೈತ ಸಂಪರ್ಕ ಕೇಂದ್ರಗಳು, ವೆಟರ್ನರಿ ಹಾಸ್ಪಿಟಲ್‍ಗಳು ಮತ್ತು ಗ್ರಾಮ ಪಂಚಾಯಿತಿಗಳ ಮಾಹಿತಿಯನ್ನು ಆಪ್ ನಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ ಎಂದರು.

ಇದೊಂದು ಜನರಿಗೆ ಉಪಯುಕ್ತವಾದ ಸೇವೆಯಾಗಿದೆ ಎಂದು ಎನ್‍ಐಸಿ ಅಧಿಕಾರಿಗಳಾದ ಉದಯಕುಮಾರ್ ಮತ್ತು ರಮೇಶ್ ತಿಳಿಸಿದರು.

error: Content is protected !!