ತೆರಿಗೆ ಸಲಹೆಗಾರರ ವೃತ್ತಿ ಶ್ರೇಷ್ಠವಾದದ್ದು : ಎಸ್ಪಿ ರಿಷ್ಯಂತ್

ದಾವಣಗೆರೆ, ಆ.5- ತೆರಿಗೆದಾರರು ಮತ್ತು ಸರ್ಕಾರದ ಕೊಂಡಿಯಾಗಿ ತೆರಿಗೆ ಸಲಹೆಗಾರರು ಕಾರ್ಯನಿರ್ವಹಿಸುತ್ತಿದ್ದು, ತೆರಿಗೆ ಸಲಹೆಗಾರರ ವೃತ್ತಿ ಶ್ರೇಷ್ಠ ಹಾಗೂ ತುಂಬಾ ಖುಷಿ ಕೊಡುವ ವೃತ್ತಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಶ್ರೀ ಜಯದೇವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತೆರಿಗೆ ಸಲಹೆಗಾರರ ಸಂಘ ತೆರಿಗೆದಾರರಿಗೆ ಮತ್ತು ಹೊಸದಾಗಿ ವೃತ್ತಿ ಆರಂಭಿಸಿದವರಿಗೆ ಅನುಕೂಲವಾಗುವಂತೆ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸುವಂತೆ ಅವರು ಸಲಹೆ ನೀಡಿದರು.

ಹಿರಿಯರನ್ನು ಗೌರವಿಸುವುದು ಸೇರಿದಂತೆ ಭಾರತೀಯ ಪರಂಪರೆ,  ಸಂಸ್ಕೃತಿ, ಸಂಸ್ಕಾರಗಳನ್ನು ವಿದೇಶದ ಜನರು ಅನುಸರಿಸುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಬೇರೆ ದೇಶಗಳಲ್ಲಿ ಸಂಚಾರಿ,  ಶುಚಿತ್ವದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಾರತದಲ್ಲಿ ಪಾಲಿಸುತ್ತಿಲ್ಲ. ವಿದೇಶದಲ್ಲಿ ಭಾರತ ದೇಶಕ್ಕಿಂತ ದುಪ್ಪಟ್ಟು ದಂಡವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.

ಪ್ಲಾಸ್ಟಿಕ್ ಮತ್ತು ಅರ್ಧ ಹೆಲ್ಮೆಟ್ ಮಾರಾಟ ಮಾಡುವ ಮಾಲೀಕರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ವಾಹನ ಸವಾರರ ಹಿತದೃಷ್ಟಿಯಿಂದ ಕೆಲವೊಂದು ಸಂಚಾರಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಪೂರ್ಣಪ್ರಮಾಣದ ಹೆಲ್ಮೆಟ್ ಹಾಕಲು ಈಗಾಗಲೇ ತಿಳಿಸಲಾಗಿದೆ. ದಂಡ ವಸೂಲಿ ಮಾಡುವ ಉದ್ದೇಶ ನಮ್ಮದಲ್ಲ. ಬದಲಿಗೆ ವಾಹನ ಸವಾರರ ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದವರ ಪ್ರಾಣ ರಕ್ಷಣೆಗೆ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ ಎಂದರು.

ಆಸ್ಟ್ರೇಲಿಯಾ ದೇಶದಲ್ಲಿ ಮಾಸ್ಕ ಧರಿಸದಿದ್ದರೆ 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದೇ ರೀತಿ ಅಮೆರಿಕಾ ದೇಶದಲ್ಲಿ ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಿದರೆ 10 ಬಾರಿ ದಂಡ ಹಾಕಿ ನೋಟಿಸ್ ನೀಡಲಾಗುವುದು. ನಂತರ 11 ನೇ ಬಾರಿ ಪರವಾನಿಗೆಯನ್ನೇ ಶಾಶ್ವತವಾಗಿ ರದ್ದು ಮಾಡುವ ಕಾನೂನು ಇದೆ ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಮಾತನಾಡಿ,  ತೆರಿಗೆ ಸಲಹೆಗಾರರು ತೆರಿಗೆ ಪಾವತಿದಾರರು ಮತ್ತು ಸರ್ಕಾರದ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ತೆರಿಗೆ ಸಲಹೆಗಾರರ ಪಾತ್ರ ಪ್ರಮುಖವಾದುದು ಎಂದು ಹೇಳಿದರು. ಜನರಲ್ಲಿ ತೆರಿಗೆ ಪಾವತಿಸುವ ಬಗ್ಗೆ ಇರುವ ಗೊಂದಲಗಳನ್ನು ನಿವಾರಣೆ ಮಾಡಲು ಮತ್ತು ತೆರಿಗೆದಾರರಿಗೆ ಸರಿಯಾದ ಮಾಹಿತಿ ತಿಳಿಸುವ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಸಕಾಲಕ್ಕೆ ತೆರಿಗೆ ಪಾವತಿಸಿದರೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರೂ ಕೂಡ ಸಾಮಾಜಿಕ ಜವಾಬ್ದಾರಿಯನ್ನು ಅರಿಯುವ ಅಗತ್ಯವಿದೆ ಎಂದರು.

ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗಿ ರಾಧೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಸವರಾಜ್ ಮತ್ತು ಅರುಣಾಚಲಶೆಟ್ರು ಅವರನ್ನು ಗೌರವಿಸಲಾಯಿತು.

ಸಂಘದ ಪದಾಧಿಕಾರಿಗಳಾದ ಹೆಚ್.ಎಸ್. ಮಂಜುನಾಥ್, ರೇವಣಸಿದ್ಧಯ್ಯ, ಮಹಾಂತೇಶ್, ಜಗದೀಶ ಗೌಡ್ರು, ಹೆಚ್. ಬಸವರಾಜ್, ವಿನಯ್ ಮತ್ತಿತರರಿದ್ದರು.

error: Content is protected !!