ದೇಶದ ಶಕ್ತಿಗೆ ಆರೋಗ್ಯವೇ ಮುಖ್ಯ

ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಮೇಯರ್ ಎಸ್.ಟಿ. ವೀರೇಶ್

ದಾವಣಗೆರೆ, ಮಾ. 23 – ದೇಶ ಶಕ್ತಿಶಾಲಿಯಾಗಲು ಆರೋಗ್ಯವೇ ಮುಖ್ಯ ಎಂದಿರುವ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಕಳೆದ ವರ್ಷ ಕಾಣಿಸಿಕೊಂಡ ಕೊರೊನಾ ಎದುರಿಸುವಲ್ಲಿ ಯಶಸ್ಸು ಕಾಣಲು ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು ಕಾರಣರಾಗಿದ್ದಾರೆ. ಹೀಗಾಗಿಯೇ ಅವರನ್ನು ಕೊರೊನಾ ಯೋಧರು ಎಂದು ಪರಿಗಣಿಸಲಾಗುತ್ತಿದೆ. ಯೋಧರ ರೀತಿಯಲ್ಲೇ ಇವರೆಲ್ಲಾ ವೈಯಕ್ತಿಕ ಜೀವನ ಬದಿಗೊತ್ತಿ ಸೇವೆ ಮತ್ತು ತ್ಯಾಗದಿಂದ ಕಾರ್ಯ ನಿರ್ವಹಿಸಿದ್ದಾರೆ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ಬಿ ದಾನಮ್ಮನವರ್ ಮಾತನಾಡಿ, ಕ್ಷಯ ರೋಗ ನಿಮೂರ್ಲನೆ ಹಳ್ಳಿಗಳಿಂದ ಆಗಬೇಕು. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಕ್ಷಯರೋಗ ಪತ್ತೆ, ಸೂಕ್ತ ಸಮಯದಲ್ಲಿ ತಪಾಸಣೆ ಮತ್ತು ಚಿಕಿತ್ಸೆ ನೀಡುವುದರೊಂದಿಗೆ ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪರಿಣಾಮಕಾರಿ ಕ್ರಮ ಜರುಗಿಸಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಕೆ.ಹೆಚ್. ಗಂಗಾಧರ ಮಾತನಾಡಿ, ವಿಶ್ವದ ಒಟ್ಟು ಕ್ಷಯ ಸೋಂಕಿನಲ್ಲಿ ಶೇ.25ರಷ್ಟು ಭಾರತದಲ್ಲಿದ್ದಾರೆ ಮತ್ತು ಒಟ್ಟು ಸಾವುಗಳಲ್ಲಿ ಶೇ.30ರಷ್ಟು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ 2025ರ ವೇಳೆಗೆ ಕ್ಷಯ ಸೋಂಕು ಹಾಗೂ ಸಾವುಗಳನ್ನು ಶೇ.80ರಷ್ಟು ಕಡಿಮೆ ಮಾಡುವ ಗುರಿ ಭಾರತದ್ದಾಗಿದೆ ಎಂದರು.

ಕ್ಷಯ ರೋಗದ ವೈರಾಣು ದೇಹಕ್ಕೆ ಸೇರಿದ ತಕ್ಷಣ ರೋಗ ಬರುವುದಿಲ್ಲ. ಅಪೌಷ್ಠಿಕತೆ, ಸಕ್ಕರೆ ಕಾಯಿಲೆ, ಹೆಚ್.ಐ.ವಿ. ಸೋಂಕು, ಧೂಮಪಾನ, ಮದ್ಯಪಾನ, ಕ್ಯಾನ್ಸರ್ ಮುಂತಾದ ಕಾರಣಗಳಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕ್ಷಯ ಬರುತ್ತದೆ ಎಂದವರು ಹೇಳಿದರು.

ಡಿ.ಹೆಚ್.ಒ. ಡಾ. ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 2020 ರಲ್ಲಿ ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಕಡಿಮೆ ಅಂದರೆ 1,898 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಈ ಪೈಕಿ 1540 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕ್ಷಯ ರೋಗದಿಂದ ಸಂಭವಿಸಿರುವ ಮರಣ ಪ್ರಮಾಣ ಶೇ.10 ರಷ್ಟಿದ್ದು, ಇದನ್ನು ಕಡಿಮೆ ಮಾಡಲು ಎಲ್ಲರೂ ಶ್ರಮವಹಿಸಬೇಕು ಎಂದು ತಿಳಿಸಿದರು. 

ಟಿಬಿ ರೋಗ ಗೆದ್ದವರನ್ನು ಟಿಬಿ ಚಾಂಪಿಯನ್ಸ್ ಎಂದು ಗುರುತಿಸಿ ವೇದಿಕೆಯಲ್ಲಿ ಗೌರವಿಸಲಾಯಿತು. ಇದೇ ವೇಳೆ ಜಿ.ಪಂ ಸಿಇಓ ಸೇರಿದಂತೆ, ವೇದಿಕೆಯಲ್ಲಿದ್ದ ಗಣ್ಯರು ಕ್ಷಯರೋಗ ಜಾಗೃತಿ ಮತ್ತು ನಿರ್ಮೂಲನೆ ಕುರಿತಾದ ಐಇಸಿ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಆರ್.ಸಿ.ಹೆಚ್. ಅಧಿಕಾರಿ ಡಾ.ಮೀನಾಕ್ಷಿ, ನೋಡಲ್ ಅಧಿಕಾರಿ ಡಾ.ನಂದ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಿಎಲ್‍ಓ ಡಾ.ಮುರುಳೀಧರ್,  ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರು ಮತ್ತು ನೋಡೆಲ್ ಅಧಿಕಾರಿ ಹಾಗೂ ಸ್ಟೇಟ್ ಟಾಸ್ಕ್‌ಫೋರ್ಸ್ (ಟಿ.ಬಿ) ಅಧ್ಯಕ್ಷ ಡಾ. ಪಿ.ಎಸ್.ಬಾಲು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಉಮಾಪತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!