ಹರಪನಹಳ್ಳಿಯಲ್ಲಿ ರೈತ ಸಂಘಟನೆಗಳಿಂದ ಆಕ್ರೋಶ
ಹರಪನಹಳ್ಳಿ, ಜೂ.27 – ಕೃಷಿಯನ್ನು ಉಳಿಸಿ ಪ್ರಜಾಪ್ರಭುತ್ವವನ್ನು ರಕ್ಷಿಸಿ ರೈತ ವಿರೋಧಿ ಮೂರು ಶಾಸನಗಳ ರದ್ಧತಿಗೆ ಆಗ್ರಹಿಸಿ ಹಾಗೂ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆಗೆ ಒತ್ತಾಯಿಸಿ ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ಮಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಮುಖಂಡ ಹೊಸಹಳ್ಳಿ ಮಲ್ಲೇಶ್ ಮಾತನಾಡಿ, ಈ ದೇಶದಲ್ಲಿ ರೈತರನ್ನು ಅನ್ನದಾತರು ಎಂದು ಕರೆಯುತ್ತಾರೆ. ಕಳೆದ 74 ದಿನಗಳಿಂದ ನಮ್ಮೆಲ್ಲಾ ಶ್ರಮದ ಮೂಲಕ ಹಾಗೂ ಇತರೆ ಎಲ್ಲ ರೀತಿಯ ಪ್ರಯತ್ನಗಳ ಮೂಲಕ ನಾವು ರೈತರಾಗಿ ನಮ್ಮ ಜವಾಬ್ದಾರಿಯನ್ನು ನಿಭಾಯಿಸಿಕೊಂಡು ಬಂದಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನಾವು ಸುಮಾರು 33 ಕೋಟಿ ಜನತೆಗೆ ಅನ್ನದಾತರಾಗಿದ್ದರೆ ಈಗ ಅದೇ ಭೂಮಿಯಲ್ಲಿ ಸುಮಾರು 140 ಕೋಟಿ ಜನತೆಗೆ ಅನ್ನದಾತರಾಗಿದ್ದೇವೆ. ಕೋವಿಡ್ ನಿಂದಾಗಿ ದೇಶದ ಎಲ್ಲಾ ಕ್ಷೇತ್ರಗಳು ಕೆಲಸ ನಿಲ್ಲಿಸಿರುವಾಗ ಅಥವಾ ಉತ್ಪಾದನೆಯಲ್ಲಿ ಇಳಿಮುಖ ತೋರಿಸುವಾಗ ರೈತರು ಮಾತ್ರ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೃಷಿಯಲ್ಲಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ್ದೇವೆ ಹಾಗೂ ಉಗ್ರಾಣಗಳನ್ನು ತುಂಬಿಸಿರುತ್ತೇವೆ. ದೇಶಕ್ಕೆ ನಮ್ಮಿಂದ ಏನೆಲ್ಲಾ ಸೇವೆಗಳನ್ನು ನೀಡಿದರೂ ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರವನ್ನು ನಾಶ ಮಾಡಬಲ್ಲಂತಹ ಮೂರು ರೈತ ವಿರೋಧಿ ಕಾಯ್ದೆಗಳನ್ನು ನಮ್ಮ ಮೇಲೆ ಹೇರಿದೆ ಎಂದು ಕಿಡಿಕಾರಿದರು.
ಮುಖಂಡ ಗುಡಿಹಳ್ಳಿ ಹಾಲೇಶ್ ಮಾತನಾಡಿ, ನಾವು ಸರ್ಕಾರದಿಂದ ಯಾವುದೇ ದಾನವನ್ನು ಕೇಳುತ್ತಿಲ್ಲ. ನಮ್ಮ ಪರಿಶ್ರಮ ಹಾಗೂ ಕೆಲಸಕ್ಕೆ ತಕ್ಕದಾದ ಬೆಲೆಯನ್ನು ಕೇಳುತ್ತಿದ್ದೇವೆ. ನಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಾಗ ನಾವು ಮೋಸ, ದರೋಡೆ ಹಾಗೂ ಶೋಷಣೆಗೆ ಒಳಗಾಗುತ್ತಿದ್ದೇವೆ. ಸದಾ ಸಾಲದಲ್ಲೇ ಜೀವಿಸುತ್ತಿರುವ ನಾವು ಕಳೆದ 30 ವರ್ಷಗಳಲ್ಲಿ ನಾಲ್ಕು ಲಕ್ಷಕ್ಕಿಂತ ಹೆಚ್ಚು ಮಂದಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಕನಿಷ್ಠ ಬೆಂಬಲ ಬೆಲೆಗಾಗಿ ಆಗ್ರಹಿಸುತ್ತಿದ್ದು ಶೀಘ್ರದಲ್ಲೇ ಸ್ವಾಮಿನಾಥನ್ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿದರು.
ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರಾದ ಇದ್ಲಿ ರಾಮಪ್ಪ, ಕೊಟ್ರೇಶ್ ಬಳಿಗಾನೂರು, ಸಂದೇರ ಪರಶುರಾಮ, ಹುಲಿ ಕಟ್ಟಿ ರಾಜಪ್ಪ ರಹಮತ್‍ವುಲ್ಲಾ, ಮತ್ತಿಹಳ್ಳಿ ತಿಂದಪ್ಪ, ಬಳಿಗಾನೂರು ಮಲ್ಲೇಶ್, ವೀರಯ್ಯ, ಬಸವರಾಜ ಹಾಗೂ ರಾಜಶೇಖರ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.