ಯೋಗ ಸಪ್ತಾಹದಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯರು
ದಾವಣಗೆರೆ, ಜೂ.27-ಯೋಗವು ದೈಹಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಸಮತೋಲನದ ಸ್ಥಿತಿಗೆ ತರುವಂತದ್ದಾಗಿರುವುದರಿಂದ ಇಂದು ವಿಶ್ವಮಾನ್ಯವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಮತ್ತು ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ವತಿಯಿಂದ ಪ್ರಕೃತಿ ಚಿಕಿತ್ಸಾ ತಜ್ಞ ಡಾ. ಗಂಗಾಧರ್ ವರ್ಮ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 7 ದಿನಗಳ ಆನ್‌ಲೈನ್ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಮಾತನಾಡಿದರು.
ಯೋಗ ಅಭ್ಯಾಸವು ಮನುಷ್ಯನ ಆತ್ಮವನ್ನು ಪರಮಾತ್ಮನೊಂದಿಗೆ ಸೇರಿಸುವ ಪ್ರಕ್ರಿಯೆಯೆಂದು ಕರೆಯಲಾಗಿದೆ. ಯೋಗದ ಎಲ್ಲ ಎಂಟು ಅಂಗಗಳು ಮನುಷ್ಯನ ಆರೋಗ್ಯ ಮತ್ತು ಜೀವನ ಕ್ರಮದ ಮೇಲೆ ಮಹತ್ತರ ಪರಿಣಾಮಗಳನ್ನು ಬೀರುತ್ತದೆ. ಈ ಅಭ್ಯಾಸಗಳು ಕೇವಲ ದೇಹವನ್ನು ಮಾತ್ರವಲ್ಲದೆ ಮನಸ್ಸನ್ನೂ ಕೂಡ ನಿಯಂತ್ರಣಕ್ಕೆ ತಂದುಕೊಳ್ಳುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ `ಕಸ್ತೂರಿ’ ಮಾಸ ಪತ್ರಿಕೆ ಪ್ರಧಾನ ಸಂಪಾದಕರಾದ ಶಾಂತಲಾ ಧರ್ಮರಾಜ್ ಮಾತ ನಾಡಿ, ತಾವು ಕಂಡಂತೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧೆಯು ಯೋಗಾಭ್ಯಾಸವನ್ನು ಅಳವಡಿಸಿ ಕೊಳ್ಳುವ ಮೂಲಕ ಹತ್ತು ವರ್ಷಗಳಿಂದ ಯಾವುದೇ ನೋವಿ ಲ್ಲದೆ ಬದುಕು ಸಾಗಿಸುತ್ತಿರುವುದು ತಮಗೆ ಯೋಗ ಅರಿಯಲು ಪ್ರೇರಣೆಯಾಯಿತು ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಡಾ. ಶಿವಲಿಂಗಪ್ಪ ಮಾತನಾಡಿ, ಮೆಡಿಟೇಷನ್ ಧ್ಯಾನ್ ಮೆಡಿಕೇಶನ್ ಎನ್ನುವ ಸೂತ್ರವನ್ನು ಪಾಲಿಸಬೇಕೆಂದರು.
ಸೈಯದ್ ಅಹಮದ್, ಜಿಲ್ಲೆಯ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಡಾ. ವಿಂಧ್ಯ ಗಂಗಾಧರ್ ವರ್ಮ, ಯೋಗದ ಮಹತ್ವ ಸಾರಿದರು.
ಕಾರ್ಯಕ್ರಮದ ರೂವಾರಿ ಡಾ. ಬಿ.ಆರ್. ಗಂಗಾಧರ್ ವರ್ಮ ಪ್ರತಿಯೊಬ್ಬರಲ್ಲೂ ಒಡಮೂಡುವ ಭಾವನೆಗಳ ಏರು-ಪೇರುಗಳನ್ನು ತಡೆಯಲು ಯೋಗಾಭ್ಯಾಸವು ಉಪಯುಕ್ತ ಎಂದು ಹೇಳುವ ಮೂಲಕ ಯೋಗದ ಮಹತ್ವವನ್ನು ವಿವರಿಸಿದರು.
ಡಾ. ರತ್ನ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.