ಮಲೇಬೆನ್ನೂರು, ಜೂ. 25 – ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಬಸವಾಪಟ್ಟಣ ಮತ್ತು ಹರ್ಲೀಪುರ ಗ್ರಾಮಗಳಿಗೆ ನೀರಾವರಿ ಹಾಗೂ ಕಾಡಾ ಅಧಿಕಾರಿಗಳೊಂದಿಗೆ ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ಶುಕ್ರವಾರ ಭೇಟಿ ನೀಡಿ, ಹರ್ಲೀಪುರ ಹಾಗೂ ಕೋಟೆಹಾಳ್ ನೀರು ಬಳಕೆದಾರರ ಸಹಕಾರ ಸಂಘದವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಂಡು ನಾಲೆಗಳಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಎತ್ತಿಸುವ ಕೆಲಸ ಕೈಗೊಂಡು ನಾಲೆಗಳನ್ನು ಸ್ವಚ್ಛಗೊಳಿಸಿದ ಕಾಮಗಾರಿಯನ್ನು ಪರಿಶೀಲಿಸಿದರು.
ಸಮಗ್ರ ಕೆರೆ ಅಭಿವೃದ್ದಿ ಯೋಜನೆ ಬಳಸಿಕೊಂಡು ನಡೆಯುತ್ತಿರುವ ಕೆರೆ ರಿವಿಟ್ಮೆಂಟ್ ಕಾಮಗಾರಿ ಹಾಗೂ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಉಪಯೋಗಿಸಿಕೊಂಡು ಚಾನೆಲ್ ಏರಿ ರಸ್ತೆ ಅಭಿವೃದ್ದಿ ಪಡಿಸಿರುವುದನ್ನು ಪವಿತ್ರ ಅವರು ವೀಕ್ಷಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೆ ಅನುದಾನ ನೀಡುವಂತೆ ಒತ್ತಾಯಿಸುವ ಮೂಲಕ ಭದ್ರಾ ಅಚ್ಚುಕಟ್ಟು ಭಾಗವನ್ನು ಅಭಿವೃದ್ದಿ ಪಡಿಸುವಂತೆ ರೈತರು ಕೇಳಿಕೊಂಡರು.
ಈ ಹಿಂದೆ ನೀರು ಬಳಕೆದಾರರ ಸಂಘಗಳ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅವಕಾಶವಿತ್ತು, ಆಗ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿದ್ದೆವು, ಆದರೆ, ಈಗ ಇ – ಟೆಂಡರ್ ಮೂಲಕ ಅವಕಾಶ ನೀಡಿರುವ ಪರಿಣಾಮ ಗುತ್ತಿಗೆದಾರರು ಕಡಿಮೆ ಬೆಲೆಗೆ ಕೋಟ್ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವ ವಿಶ್ವಾಸ ಇಲ್ಲದಂತಾಗಿದೆ. ಹಾಗಾಗಿ ಇದನ್ನು ಬದಲಿಸಿ ಸಂಘಗಳನ್ನು ಗಟ್ಟಿ ಗೊಳಿಸುವಂತೆ ಇಲ್ಲವೇ ಪರ್ಯಾಯ ಆದಾಯ ಮೂಲವನ್ನು ಮಾಡಿಕೊಡುವಂತೆ ರೈತರು ಪವಿತ್ರ ರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್, ನೀರು ಬಳಕೆದಾರರ ಸಂಘದ ಸತೀಶ್, ರವಿ, ನಾಗರಾಜ್ ಹಾಗೂ ನರೇಗಾ ಅಧಿಕಾರಿ ರವಿ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಮತಾ, ಸದಸ್ಯರಾದ ಧರ್ಮೇಗೌಡ, ಶಿವಮೂರ್ತಿ, ಪಿಡಿಒ ಆನಂದ್, ಉಪಸ್ಥಿತರಿದ್ದರು.