ದಾವಣಗೆರೆ, ಜೂ. 24 – ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆದೇಶದಂತೆ ಈಗಾಗಲೇ ಸಾವಿರಾರು ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಉಳಿದ ಪೌರ ಕಾರ್ಮಿಕರನ್ನೂ ಸಹ ಖಾಯಂಗೊಳಿಸಲು ಶಿಫಾರಸ್ಸು ಸಲ್ಲಿಸಲಾಗುವುದು ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಪ್ರಸಕ್ತ ಖಾಯಂ, ನೇರ ಪಾವತಿ, ಯು.ಜಿ.ಡಿ. ಹಾಗೂ ಆಟೋ ಟಿಪ್ಪರ್ ಎಂದು ಬೇರೆ ಬೇರೆ ನೇಮಕವಾದ ಪೌರ ಕಾರ್ಮಿಕರಿದ್ದಾರೆ. ಎಲ್ಲರನ್ನೂ ಒಂದೇ ರೀತಿ ಖಾಯಂ ಮಾಡಲು ಆಯೋಗದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಹೊರತು ಪಡಿಸಿ ಉಳಿದೆಡೆ ಗ್ರಾಮ ಪಂಚಾಯ್ತಿಗಳಿಂದ ಹಿಡಿದು ಪಾಲಿಕೆಯವರೆಗೆ 23 ಸಾವಿರ ಪೌರ ಕಾರ್ಮಿಕರಿದ್ದಾರೆ ಎಂಬ ಅಂದಾಜಿದೆ. ಆದರೆ, ಆಸ್ಪತ್ರೆ, ಅಪಾರ್ಟ್‌ಮೆಂಟ್, ಖಾಸಗಿ ತಾಣ ಸೇರಿದಂತೆ ಹಲವೆಡೆ ಇರುವ ಪೌರ ಕಾರ್ಮಿಕರ ಲೆಕ್ಕ ಸಿಕ್ಕಿಲ್ಲ. ಈ ಬಗ್ಗೆ ಸಮೀಕ್ಷೆ ಮಾಡಿಸುತ್ತೇವೆ ಎಂದು ಹೇಳಿದರು.
ಪೌರ ಕಾರ್ಮಿಕರಲ್ಲಿ ಹೆಚ್ಚಿನವರು ಮಹಿಳೆಯರಿದ್ದಾರೆ. ಇವರಿಗೆ ವಿಶ್ರಾಂತಿ ಕೋಣೆ ಇಲ್ಲದೇ ಸಮಸ್ಯೆಯಾಗುತ್ತಿದೆ. ರಾಜ್ಯದೆಲ್ಲೆಡೆ ಇಂತಹ ಕೋಣೆ ಸ್ಥಾಪಿಸಲಾಗುವುದು. ದಾವಣಗೆರೆ ನಗರ ಪಾಲಿಕೆ ಬಜೆಟ್‌ನಲ್ಲಿ ಹಣ ನಿಗದಿ ಪಡಿಸಲಾಗಿದೆ ಎಂದು ಶಿವಣ್ಣ ತಿಳಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಸಂಪೂರ್ಣ ನಿಷೇಧ ಆಗಬೇಕಿದೆ. ಇದಕ್ಕಾಗಿ ಆಯೋಗ ಹಾಗೂ ಸರ್ಕಾರ ಬದ್ಧವಾಗಿದೆ ಎಂದವರು ಹೇಳಿದರು.
ಪೌರ ಕಾರ್ಮಿಕರ ಸರಾಸರಿ ಆಯಸ್ಸು 45 ವರ್ಷ
ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವಾಗ ಎದುರಿಸುವ ಆರೋಗ್ಯ ಸಮಸ್ಯೆಯಿಂದಾಗಿ ಅವರ ಸರಾಸರಿ ಆಯಸ್ಸು 45 ವರ್ಷವಿದೆ ಎಂದು ನ್ಯಾಷನಲ್ ಸ್ಕೂಲ್ ಆಫ್ ಇಂಡಿಯಾ ವರದಿ ಮಾಡಿದೆ.
ಪೌರ ಕಾರ್ಮಿಕರ ಪೈಕಿ ಶೇ.4ರಷ್ಟು ಜನರಿಗೆ ಮಾತ್ರ ಇದುವರೆಗೂ ಸೌಲಭ್ಯ ಗಳು ತಲುಪಿವೆ ಎಂದು ಇದೇ ವರದಿ ತಿಳಿಸಿದೆ ಎಂದು ಹೇಳಿರುವ ಎಂ. ಶಿವಣ್ಣ, ಈ ಪರಿಸ್ಥಿತಿ ಸುಧಾರಿಸಬೇಕಿದೆ ಎಂದಿದ್ದಾರೆ.
ಪ್ರಸಕ್ತ ನಗರಗಳಲ್ಲಿ 700 ಜನರಿಗೆ ಒಬ್ಬರು ಪೌರ ಕಾರ್ಮಿಕರಿದ್ದಾರೆ. ಹಳ್ಳಿಗಳಲ್ಲಂತೂ 4-5 ಸಾವಿರ ಜನರಿಗೆ ಒಬ್ಬರು ಪೌರ ಕಾರ್ಮಿಕರಿದ್ದಾರೆ. ನಗರಗಳಲ್ಲಿ 500 ಜನರಿಗೆ ಒಬ್ಬರು ಹಾಗೂ ಗ್ರಾಮೀಣ ಭಾಗದಲ್ಲಿ ಸಾವಿರ ಜನರಿಗೆ ಒಬ್ಬರು ಪೌರ ಕಾರ್ಮಿಕರಿರುವಂತೆ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಸಲ್ಲಿಸಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರಿಗೆ ತಿಂಡಿಗಾಗಿ ಕೇವಲ 20 ರೂ. ನೀಡಲಾಗುತ್ತಿದೆ. ಇದನ್ನು 50 ರೂ.ಗಳಿಗೆ ಹೆಚ್ಚಿಸಬೇಕಿದೆ. ನಗರ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಫಾಯಿ ಕರ್ಮಚಾರಿಗಳು ಸಾಲಕ್ಕಾಗಿ ನಿಗಮಗಳಿಗೆ ಅರ್ಜಿ ಸಲ್ಲಿಸಿದರೂ ಸಾಲ ಸಿಗುತ್ತಿಲ್ಲ ಎಂಬ ವರದಿಗಳಿವೆ. ಬ್ಯಾಂಕುಗಳು ನಿಯಮಗಳ ನೆಪ ಹೇಳದೇ ಸಾಲ ನೀಡಬೇಕೆಂದು ಸೂಚಿಸಲಾಗುವುದು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಸಫಾಯಿ ಕರ್ಮಚಾರಿ ಆಯೋಗದ ಕಾರ್ಯದರ್ಶಿ ರೂಪ, ಮಹಾಪೌರರಾದ ಎಸ್.ಟಿ.ವೀರೇಶ್, ಎಸಿ ಮಮತ ಹೊಸಗೌಡರ್, ಡಿಹೆಚ್‍ಓ ಡಾ.ನಾಗರಾಜ್, ನಗರಾಭಿವೃದ್ಧಿ ಯೋಜನಾಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ, ಪಾಲಿಕೆ ಆಯಕ್ತ ವಿಶ್ವನಾಥ ಮುದಜ್ಜಿ ಮತ್ತಿತರರು ಉಪಸ್ಥಿತರಿದ್ದರು.