ಉತ್ತಮ ಮಳೆ, ಬಿತ್ತನೆ ಆರಂಭ

ಜಗಳೂರು ತಾಲ್ಲೂಕಿನಾದ್ಯಂತ ಪೂರ್ವ ಮುಂಗಾರಿನಲ್ಲಿ  ಉತ್ತಮ ಮಳೆಯಾಗಿದ್ದು ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಜೂನ್‌ ತಿಂಗಳವರೆಗೆ ವಾಡಿಕೆ ಮಳೆ 43 ಮಿ.ಮೀ. ಆಗಿದ್ದರೆ, ಈವರೆಗೆ 78 ಮಿ.ಮೀ. ಮಳೆ ಯಾಗಿದೆ. ವಾಡಿಕೆಗಿಂತ  ಹೆಚ್ಚಿನ ಮಳೆಯಾಗಿದೆ.

ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು ರೈತರು ಬಿತ್ತನೆಗೆ ಮುಂದಾಗಿದ್ದಾರೆ. ಸಾಂಪ್ರದಾಯಿಕವಾಗಿ ಎತ್ತುಗಳ ಬೇಸಾಯ ಈಗ ಹೆಚ್ಚಾಗಿ ಕಂಡುಬರುತ್ತಿಲ್ಲ. ಹೆಚ್ಚಾಗಿ ಟ್ರ್ಯಾಕ್ಟರ್ ಮೂಲಕವೇ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನಲ್ಲಿ 54 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇದ್ದು ಇದರಲ್ಲಿ ಕಸಬಾ ಹೋಬಳಿ 22 ಸಾವಿರ ಹೆಕ್ಟೇರ್, ಬಿಳಿಚೋಡು14,967 ಹೆಕ್ಟೇರ್, ಸೊಕ್ಕೆ-ಹೊಸಕೆರೆ ಹೋಬಳಿ 17,011 ಹೆಕ್ಟೇರ್ ಬಿತ್ತನೆ ಪ್ರಮಾಣದ ಗುರಿ ಇದ್ದು, ಈವರೆಗೆ ಸುಮಾರು ಹದಿನಾಲ್ಕು ಸಾವಿರ ಹೆಕ್ಟೇರ್  ಅಂದರೆ ಶೇ. 27 ರಷ್ಟು ಬಿತ್ತನೆಯಾಗಿದೆ.

ಇದರಲ್ಲಿ ಮೆಕ್ಕೆಜೋಳ-1300 ಹೆಕ್ಟೇರ್, ತೊಗರಿ-800 ಹೆಕ್ಟೇರ್, ಶೇಂಗಾ-300 ಹೆಕ್ಟೇರ್,  ಸೂರ್ಯ ಕಾಂತಿ-138, ಹತ್ತಿ-140 ಹೆಕ್ಟೇರ್ ಬಿತ್ತನೆಯಾಗಿದೆ ಎಂದು  ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಬಿತ್ತನೆಗೆ ಬೇಕಾದ ಅಗತ್ಯ  ಬಿತ್ತನೆ ಬೀಜ, ರಸಗೊಬ್ಬರ, ಔಷಧ ವಿತರಿಸಲು ತಾಲ್ಲೂಕಿನಾದ್ಯಂತ 8 ವಿತರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಕಸಬಾ ಹೋಬಳಿಯಲ್ಲಿ ಎಪಿಎಂಸಿ ಆವರಣದಲ್ಲಿ ಎರಡು ಘಟಕ, ಬಿಳಿಚೋಡು ಹೋಬಳಿಯಲ್ಲಿ ಆರ್‌ಎಸ್‌ಕೆ ಹಾಗು ಹಾಲೇಕಲ್ ಸಹಕಾರ ಸೊಸೈಟಿ, ಪಲ್ಲಾಗಟ್ಟೆ ಕೊಂಡುಕುರಿ ಸಂರಕ್ಷಣಾ ಕೇಂದ್ರಗಳಲ್ಲಿ ವಿತರಿಸಿದರೆ, ಸೊಕ್ಕೆ ಹೋಬಳಿಯಲ್ಲಿ ಹೊಸಕೆರೆ ಆರ್‌ಎಸ್‌ಕೆ ಸೊಕ್ಕೆ,  ಬಸವನಕೋಟೆ ಸಹಕಾರಿ ಸೊಸೈಟಿಗಳಲ್ಲಿ ವಿತರಿಸಲಾಗುತ್ತಿದೆ. ರಿಯಾಯ್ತಿ ದರದಲ್ಲಿ  ಒಬ್ಬ ರೈತರಿಗೆ ಗರಿಷ್ಠ  ಐದು ಎಕರೆವರೆಗೆ  ವಿತರಿಸಲಾಗುತ್ತದೆ. ತಾಲ್ಲೂಕಿನಲ್ಲಿ ಈವರೆಗೂ ಬಿತ್ತನೆ ಬೀಜದ ಕೊರತೆ ಕಂಡುಬಂದಿಲ್ಲ.

ಮೆಕ್ಕೆಜೋಳಕ್ಕೆ ಲದ್ದಿ ಹುಳುಗಳ ಬಾಧೆ: ಮೇ ತಿಂಗಳ ಮಾಹೆಯಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳಕ್ಕೆ ಮೂರ್ನಾಲ್ಕು ದಿನಗಳಿಂದ ದೇವಿಕೆರೆ ಸುತ್ತಮುತ್ತಲೂ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಲದ್ದಿ ಹುಳುಗಳ ಬಾಧೆ ಕಂಡುಬಂದಿದೆ. ರೈತರು ಹುಳುಗಳನ್ನು ಹತೋಟಿ ತರಲು ಈ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಅಲ್ಪಾವಧಿ ತಳಿಗಳನ್ನು ಬಿತ್ತನೆ ಮಾಡುವುದು, ಆಳವಾದ ಉಳುಮೆ ಮಾಡುವುದರ ಮೂಲಕ ಜೀವಕೋಶಗಳನ್ನು ನಾಶಪಡಿಸಬಹುದು. ತತ್ತಿಗಳು ಮತ್ತು ವಿವಿಧ ಹಂತದ ಮರಿಹುಳುಗಳನ್ನು ಕೈಯಿಂದ ಆರಿಸಿ ನಾಶಪಡಿಸಬೇಕು. ಜೈವಿಕ ಶಿಲೀಂಧ್ರ ಕೀಟನಾಶಕಗಳಾದ ನೂಮೋರಿಯ ರಿಲೈ ಅಥವಾ ಮೆಟಾರೈಜಿಯಮ್,  ಅನಿಸೋಪ್ಲೀಯಾವನ್ನು 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೊಲದಲ್ಲಿ ದೀಪಾಕರ್ಷಕ ಬೆಳಕನ್ನು ಪ್ರತಿ ಹೆಕ್ಟೇರ್‌ಗೆ ಒಂದರಂತೆ ಅಳವಡಿಸುವುದರಿಂದ ಪತಂಗಗಳ ಚಟುವಟಿಕೆಗಳನ್ನು ಕಾಣಬಹುದು. ಪ್ರತಿ ಹೆಕ್ಟೇರಿಗೆ ಬೇವಿನ ಹಿಂಡಿ 250 ಕೆ.ಜಿ. ಜಮೀನಿಗೆ ಹಾಕುವುದರಿಂದ ಪ್ಯೂಪೆಗಳಿಂದ ಪತಂಗಗಳ ಹೊರಹೊಮ್ಮುವಿಕೆಯನ್ನು ಕಡಿಮೆ ಮಾಡಬಹುದು. ಪತಂಗಗಳ ಹೀರುವಿಕೆಯನ್ನು ತಡೆಯಲು ಮೋಹಕ ಬಲೆಗಳನ್ನು ಅಳವಡಿಸುವುದು ಮತ್ತು  ರೈತರು ಮೆಕ್ಕೆಜೋಳ ಬೆಳೆಯಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆಯನ್ನು ಬೆಳೆಯಬೇಕು  ಎಂದು ತಿಳಿಸಿದ್ದಾರೆ.

ಬೇವಿನ ಎಣ್ಣೆ 2 ಮಿ.ಲೀ. ಅಥವಾ ತೈಯೋಡಿಕಾರ್ಬ 2ಗ್ರಾಂ ಅಥವಾ ಫದಲೂಬೆಂಡಿಜಮೈಡ್ 3 ಮಿ.ಲೀ. ಅಥವಾ ಕ್ಲೋರಾಂಟ್ರಿನಿಲಿಪ್ರೋಲ್ 0.3 ಮಿ.ಲೀ. ಅಥವಾ ಇಮಾಮೆಕ್ಟಿನ್ ಬೆಂಜೋಯೇಟ್ 0.4 ಗ್ರಾಂ ಅಥವಾ ಸ್ಪೈನೋಸ್ಯಾಡ್ 0.3 ಮಿ.ಲೀ. ಅಥವಾ ಲ್ಯಾಮ್ಡಸೈಹ್ಯಾಲೋಥ್ರಿನ್ 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕೀಟ ಬಾಧೆಯನ್ನು ಹತೋಟಿಗೆ ತರಬಹುದು ಎಂದು ಕೃಷಿ ತಜ್ಞರು ಸಲಹೆ ನೀಡಿದ್ದಾರೆ.


– ಬಿ.ಪಿ. ಸುಭಾನ್,
[email protected]

error: Content is protected !!