ದಾವಣಗೆರೆ, ಮಾ.23- ವಿದ್ಯೆಯಿಂದ ವಿನಯ ಹಾಗೂ ವಿವೇಚನಾ ಶಕ್ತಿ ಬರುತ್ತದೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವಂತೆ ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶುಕ್ಲಾ ಶೆಟ್ಟಿ ಮಹಿಳೆಯರಿಗೆ ಕರೆ ನೀಡಿದರು.
ಜಮಾ ಅತೆ ಇಸ್ಲಾಮಿ ಹಿಂದ್ ದಾವಣಗೆರೆ ಮಹಿಳಾ ಘಟಕ ಏರ್ಪಡಿಸಿದ್ದ ವಿಚಾರ ಸಂಕಿರಣ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ `ಆದರ್ಶ ಮಹಿಳೆ, ಸುಖೀ ಕುಟುಂಬ ಮತ್ತು ಆರೋಗ್ಯಕರ ಸಮಾಜಕ್ಕೆ ವರದಾನ’ ಕುರಿತು ಮಾತನಾಡಿದರು.
ಮಹಿಳೆ ಕೇವಲ ಕುಟುಂಬದ ಜವಾಬ್ದಾರಿ ನಿಭಾಯಿಸಿದರಷ್ಟೇ ಸಾಲದು, ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವಂತರನ್ನಾಗಿ ಮಾಡುವ ಮಹತ್ತರ ಪಾತ್ರ ಮಹಿಳೆಯದ್ದಾಗಿದೆ ಎಂದರು.
ಕುಟುಂಬ ನಿರ್ವಹಣೆಯಲ್ಲಿ ತೊಡಗಿರುವ ಮಹಿಳೆ ಕುಟುಂಬ ಸದಸ್ಯರ ಆರೋಗ್ಯದ ಜೊತೆಗೆ ತನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಮುಸ್ಲಿಂ ಸಮುದಾಯದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಿಕ್ಷಣ ಕ್ಷೇತ್ರದಲ್ಲಿ ಮುಂದಿದ್ದಾರೆ. ಆದರೆ ತಂದೆ-ತಾಯಿಗಳು ಹೆಣ್ಣು-ಗಂಡೆಂಬ ಭೇದ ತೋರದೇ ಸಮಾನವಾಗಿ ಬೆಳೆಸಬೇಕೆಂದರು.
ದಾವಣಗೆರೆಯ ಹಳೇ ಭಾಗದಲ್ಲಿ ಮಹಿಳೆಯರಲ್ಲಿಯೇ ಹೆಚ್ಚು ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳು ಕಾಣಿಸಿಕೊಂಡಿದ್ದು, ಈ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರದ ಸಂಗತಿ ಎಂದರು. ಅಲ್ಲಿನ ಮಹಿಳೆಯರು ರಕ್ತದೊತ್ತಡ, ಮಧುಮೇಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಹಿಳೆಯರು ಉತ್ತಮ ಪೌಷ್ಠಿಕ ಆಹಾರ ಸೇವನೆ ಜೊತೆಗೆ ಆರೋಗ್ಯಕ್ಕೆ ಹೆಚ್ಚು ಗಮನಹರಿಸುವಂತೆ ಕರೆ ನೀಡಿದರು.
ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ. ಅತಿಯಾ ಕೌಸರ್
ಅಧ್ಯಕ್ಷತೆ ವಹಿಸಿದ್ದರು.
ಕುಂಬಳೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ, ಅಖಿಲ ಭಾರತ ವೀರ ಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷೆ ವಿನುತಾ ರವಿ, ವಕೀಲರಾದ ಐ.ಕೆ. ಮಂಜುಳ ಮಾತನಾಡಿದರು.
ಜಿ.ಐ.ಓ ಜಿಲ್ಲಾ ಸಂಚಾಲಕಿ ತಹೇರಾಬಾನು ಕುರ್‌ಆನ್ ಪಠಿಸಿದರು. ಫರ್‌ಖುಂದ ಬಾನು ಸ್ವಾಗತಿಸಿದರು. ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಾಯೀದುನ್ನಿಸಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೇಷ್ಮಾಬಾನು ನಿರೂಪಿಸಿದರು. ಜಮ್‌ಷಿದಾ ಬಾನು ವಂದಿಸಿದರು.