ದಾವಣಗೆರೆಯ ತರಳಬಾಳು ಬಡಾವಣೆಯ ಕೆಲ ಮನೆಗಳಲ್ಲಿ ಜಲಸಿರಿ ಯೋಜನೆಯಡಿ ಅವೈಜ್ಞಾನಿಕವಾಗಿ ಪೈಪ್ ಲೈನ್ ಸಂಪರ್ಕ ಕೊಟ್ಟಿರುವುದು.
ದಾವಣಗೆರೆ: ಊರ ತುಂಬೆಲ್ಲಾ ಗುಂಡಿ, ಅಗೆಯೋನೊಬ್ಬ, ಮುಚ್ಚೋನೊಬ್ಬ, ಪೈಪ್ ಹಾಕೋನೊಬ್ಬ, ಮುಂದೆ ಮೀಟರ್ ಹಾಕೋನು ಮತ್ತೊಬ್ಬ… ತುಂಡು ಗುತ್ತಿಗೆ, ಸಮನ್ವಯತೆ ಇಲ್ಲದ ಕೆಲಸ, ಅನುಭವ ಇಲ್ಲದ ಕಾರ್ಮಿಕರು…
ಸದ್ಯ ನಗರಕ್ಕೆ 24×7 ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಭರದಿಂದ ನಡೆಯುತ್ತಿ ರುವ ಮಹತ್ವದ ಜಲಸಿರಿ ಕಾಮಗಾರಿಯ ಹೈಲೆಟ್ಸ್ ಇವು.
ಜಲಸಿರಿ ಎಂಬ ಕಾಮಗಾರಿ ಸದ್ಯಕ್ಕೆ ದಾವಣಗೆರೆಯ ಮನೆ ಮಾಲೀಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವುದಂತೂ ಸತ್ಯ. ಕಳೆದ ಕೆಲ ದಿನಗಳ ಹಿಂದೆ ತೆಗೆದಿದ್ದ ಗುಂಡಿ ಮುಚ್ಚಿ ನಿಟ್ಟುಸಿರು ಬಿಡುತ್ತಿದ್ದಂತೆ ಇದೀಗ ಮತ್ತೆ ಗುಂಡಿ ಅಗೆದು ಪೈಪ್ ಸಂಪರ್ಕ ಕೊಡಲಾರಂಭಿಸಿದ್ದಾರೆ.
ಲಕ್ಷಾಂತರ, ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕನಸಿನ ಮನೆಯನ್ನು ಸುಂದರವಾಗಿ ಕಟ್ಟಿಕೊಂಡವರಿಗೆ ಈ `ಜಲಸಿರಿ’ ನುಂಗಲಾರದ ತುತ್ತಾಗಿದೆ.
ಈ ಮಹತ್ವದ ಯೋಜನೆಯನ್ನು ತುಂಡು ಗುತ್ತಿಗೆ ನೀಡಿದ ಪರಿಣಾಮ ಗುಂಡಿ ಅಗೆಯಲು, ಪೈಪ್ ಲೈನ್ ಅಳವಡಿಸಲು, ಮುಚ್ಚಲು ಹೀಗೆ ಪ್ರತಿ ಬಾರಿಯೂ ಕಾರ್ಮಿಕರು ಬದಲಾಗುತ್ತಲೇ ಇದ್ದಾರೆ. ಅದೂ ಹೊರ ರಾಜ್ಯದ ಕಾರ್ಮಿಕರು.
ಇನ್ನು ಇದೀಗ ಮನೆಯ ಕಾಂಪೌಡ್ ಕೊರೆದು ಒಳ ಭಾಗದಲ್ಲಿ ಸಂಪರ್ಕ ಕಲ್ಪಿಸಿ, ಮೀಟರ್ ಅಳವಡಿಸುವ ಕಾರ್ಯ ಕೆಲ ಬಡಾವಣೆಗಳಲ್ಲಿ ನಡೆಯುತ್ತಿದೆ. ಆದರೆ ಬಂದಿರುವ ಪ್ಲಂಬರ್‌ಗಳಿಗೆ ಸಾಮಾನ್ಯ ಜ್ಞಾನದ ಕೊರತೆ ಕಾಡುತ್ತಿರುವುದರಿಂದ ಎಲ್ಲೆಂದರಲ್ಲಿ, ತಮಗೆ ತೋಚಿದಂತೆ ಸಂಪರ್ಕ ಕಲ್ಪಿಸಿ ತೆರಳುತ್ತಿದ್ದಾರೆ.
ಲಕ್ಷ, ಕೋಟಿ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿಕೊಂಡು, ನಗರದ ಸೌಂದರ್ಯೀಕರ ಣಕ್ಕೆ ನಮ್ಮದೂ ಒಂದಿಷ್ಟು ಕೊಡುಗೆ ಇರಲಿ ಎಂಬ ಉದ್ದೇಶದಿಂದ ಪೈಪ್‌ಗಳು, ವೈರ್‌ಗಳು ಕಾಣದಂತೆ ಪ್ಲಾನ್ ಮಾಡಿಕೊಂಡು, ಗಾರ್ಡನ್, ಕಾಂಪೌಂಡ್, ಗೇಟ್ ಮೂಲಕ ಹೆಚ್ಚಿಸಿಕೊಂಡಿದ್ದ ಮನೆಯ ಅಂದ ಇದೀಗ ಕಾಮಗಾರಿ ನೆಪದಲ್ಲಿ ಮೂರಾಬಟ್ಟೆಯಾ ಗುತ್ತಿದೆ. ಇವರ ಕಾಮಗಾರಿಗೆ ಮಾರ್ಗಸೂಚಿ ಎಂಬುದಿಲ್ಲವೇ? ಎಂಬುದು ಮಾಲೀಕರ ಪ್ರಶ್ನೆ. ಮನೆ ಒಳಭಾಗಕ್ಕೆ ಪೈಪ್ ಸಂಪರ್ಕ ತರುವಾಗ ನಿಮ್ಮ ಮನೆಯ ನಳ ಸಂಪರ್ಕ ಎಲ್ಲಿದೆ? ಎಲ್ಲಿ ಮೀಟರ್ ಅಳವಡಿಸಬೇಕು? ಎಂಬ ಬಗ್ಗೆ ಕನಿಷ್ಟ ಪಕ್ಷ ಮಾಲೀಕರೊಂದಿಗೆ ಚರ್ಚಿಸಬೇಕಿತ್ತು ಎಂಬುದು ಮಾಲೀಕರ ಸಲಹೆ.
ಪ್ರಸುತ್ತ ಅಳವಡಿಸುತ್ತಿರುವ ಪೈಪ್‌ಗಳು ಮುಂದೆ ನೀರು ಬರುವ ವೇಳೆಗಾಗಲೇ ಜಂಗ್ ಹಿಡಿದು ದುರಸ್ತಿಗೆ ಬಂದಿರುತ್ತವೆ. ಅಲ್ಲದೇ ಅವೈಜ್ಞಾನಿಕ ಪೈಪ್ ಲೈನ್ ಮೂಲಕ ನೀರು ಹರಿಯುವುದೂ ಕಷ್ಟ ಎಂದು ಸ್ಥಳೀಯ ಪ್ಲಂಬರ್‌ಗಳು ಜಲಸಿರಿ ಕಾರ್ಯವನ್ನು ಟೀಕಿಸುತ್ತಿದ್ದಾರೆ.
ಒಟ್ಟಾರೆ ನಮ್ಮ ಅಂದದ ಮನೆಗೆ ಜಲಸಿರಿ ಯೋಜನೆ ದೃಷ್ಟಿ ಬೊಟ್ಟು ಇಟ್ಟಂತೆ ಎಂದು ಮಾಲೀಕರು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.