ಕುಡಿವ ನೀರಿನ ಸಮಸ್ಯೆ ಇಲ್ಲ

ರಾಜನಹಳ್ಳಿ ಮತ್ತು ಬಾತಿ ಪಂಪ್ ಹೌಸ್‌ಗಳನ್ನು ಪರಿಶೀಲಿಸಿದ ಮೇಯರ್ ಎಸ್.ಟಿ. ವೀರೇಶ್, ಆಯುಕ್ತ ವಿಶ್ವನಾಥ್ ಮುದಜ್ಜಿ 

ದಾವಣಗೆರೆ,ಮಾ.23- ಬೇಸಿಗೆ ಸಂದರ್ಭ ದಲ್ಲಿ ನಗರದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ಮತ್ತು ಆಯುಕ್ತ ವಿಶ್ವನಾಥ್ ಮುದಜ್ಜಿ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಿರುವಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ರಾಜನಹಳ್ಳಿ ಪಂಪ್ ಹೌಸ್ ಮತ್ತು ಬಾತಿ ಪಂಪ್‌ ಸ್ಟೇಷನ್‌ಗಳಿಗೆ ಇಂದು ಸಂಜೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಮ್ಮನ್ನು ಸಂಪರ್ಕಿಸಿದ `ಜನತಾವಾಣಿ’ಗೆ ಅವರು
ಈ ವಿಷಯ ತಿಳಿಸಿದರು.

ರಾಜನಹಳ್ಳಿ ಪಂಪ್ ಹೌಸ್ ನಲ್ಲಿ ಸುಟ್ಟಿದ್ದ ಒಂದು ಮೋಟಾರ್ ಅನ್ನು ದುರಸ್ತಿ ಪಡಿಸ ಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿರುವ ಮೋಟಾರ್ ಗಳನ್ನು ಸುಸ್ಥಿತಿಯಲ್ಲಿಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು. 

ಇದೇ ಸಂದರ್ಭದಲ್ಲಿ, ಕರ್ನಾಟಕ ನಗರ ಹಣಕಾಸು ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ `ಜಲಸಿರಿ’ ಯೋಜನೆಯ ಕಾಮಗಾರಿಯನ್ನೂ ಪರಿಶೀಲಿಸಲಾಯಿತು. ಈ ಕಾಮಗಾರಿ ಭರದಿಂದ ನಡೆದಿದೆ ಎಂದರು.

ಟಿವಿ ಸ್ಟೇಷನ್ ಕೆರೆಗೆ ಚಾನಲ್ ನೀರು ಬರುತ್ತಿದ್ದು, ಕೆರೆಯಲ್ಲಿ ಸಾಕಷ್ಟು ನೀರಿದೆ. ಕುಂದುವಾಡ ಕೆರೆ ಅಭಿವೃದ್ಧಿಯಾಗುತ್ತಿರುವ ಕಾರಣ, ರಾಜನಹಳ್ಳಿ ಪಂಪ್ ಹೌಸ್ ನಿಂದ ನೇರ ಕುಂದುವಾಡ ಕೆರೆ ಪಂಪ್ ಹೌಸ್ ಗೆ ಬರುವ ನೀರು ಅಲ್ಲಿ ಶುದ್ಧೀಕರಣಗೊಂಡು ನಾಗರಿಕರಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ನಗರದ ಕೆಲ ಭಾಗಗಳಿಗೆ 5-6 ದಿನಗಳಿಗೊಮ್ಮೆ ಮತ್ತೆ ಕೆಲವು ಭಾಗಗಳಿಗೆ 6-7 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದ್ದು, ಒಟ್ಟಿನಲ್ಲಿ ಬೇಸಿಗೆ ಅವಧಿಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಿರುವಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ವಿವರಿಸಿದರು.

ವಕೀಲ ಎ.ವೈ. ಪ್ರಕಾಶ್, ಮುಖಂಡ ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!