3ನೇ ಅಲೆಯಿಂದ ಮಕ್ಕಳಿಗೆ ರಕ್ಷಣೆ

3ನೇ ಅಲೆಯಿಂದ ಮಕ್ಕಳಿಗೆ ರಕ್ಷಣೆ - Janathavaniಅಪೌಷ್ಟಿಕತೆ ನಿವಾರಣೆ, ಪೋಷಕರಿಗೆ ಲಸಿಕೆ ನೀಡಲು ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ದಾವಣಗೆರೆ, ಜೂ. 22 – ಕೊರೊನಾದ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ತೊಂದರೆಯಾಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾದಿಂದ 52 ಮಕ್ಕಳು ಅನಾಥರಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಮಕ್ಕಳು ತಂದೆ ಇಲ್ಲವೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಜಿಲ್ಲೆ ಯಲ್ಲೂ ಸಹ ಒಂದು ಮಗು ಅನಾಥವಾಗಿದೆ ಹಾಗೂ 100 ಮಕ್ಕಳು ಏಕಪೋಷಕರಾಗಿದ್ದಾರೆ ಎಂದರು.

ಮೂರನೇ ಅಲೆಯಲ್ಲಿ ಇಂತಹ ಪರಿಸ್ಥಿತಿ ಎದುರಾಗಬಾರದು. ವಿಶೇಷವಾಗಿ ಪೌಷ್ಟಿಕತೆ ಕೊರತೆ ಇರುವ ಮಕ್ಕಳ ಮೇಲೆ ಕೊರೊನಾ ಹೆಚ್ಚು ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲಿ 8 ಸಾವಿರ ಅಪೌಷ್ಟಿಕ ಮಕ್ಕಳಿದ್ದಾರೆ. ಇವರ ಅಪೌಷ್ಠಿಕತೆ ನೀಗಿಸಲು ಹಾಗೂ ಅಂತಹ ಮಕ್ಕಳ ಪೋಷಕರಿಗೆ ಲಸಿಕೆ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದವರು ಹೇಳಿದರು.

ಕೊರೊನಾ ನಂತರ ನಿಲ್ಲಿಸಲಾಗಿ ರುವ ರಾಷ್ಟ್ರೀಯ ಪೌಷ್ಠಿಕಾಂಶ ಕೇಂದ್ರ(ಎನ್.ಆರ್.ಸಿ.)ಗಳನ್ನು ಮತ್ತೆ ಆರಂಭಿಸಬೇಕು ಎಂದು ಜೊಲ್ಲೆ ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯ ಕುಮಾರ್ ಮಾತನಾಡಿ, ಜಿಲ್ಲೆಯ  11,966 ವಿಕಲಚೇತನರಿಗೆ ಲಸಿಕೆ ನೀಡ ಲಾಗಿದೆ. ಒಟ್ಟಾರೆ ಶೇ.84.91ರಷ್ಟು ಜನರಿಗೆ ಲಸಿಕೆ ನೀಡಲಾಗಿದ್ದು, ಈ ವರ್ಗದ ಲಸಿಕೆಯಲ್ಲಿ ದಾವಣಗೆರೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಹೆಚ್.ಒ. ಡಾ. ನಾಗರಾಜ್, ಮಕ್ಕಳಿಗೆ ಪ್ರತ್ಯೇಕ ಐ.ಸಿ.ಯು. ಅಗತ್ಯವಿರುತ್ತದೆ. ಇಂತಹ ಒಟ್ಟು 60 ಪಿ.ಐ.ಸಿ.ಯು.ಗಳು ಜಿಲ್ಲೆಗೆ ಬೇಕಾಗಿವೆ. ಇದಕ್ಕಾಗಿ ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದರು.

ತಜ್ಞ ವೈದ್ಯರ ನೇಮಕಾತಿಗೆ ರಾಜ್ಯ ಸರ್ಕಾರ 1.10 ಲಕ್ಷ ರೂ.ಗಳ ವೇತನ ನಿಗದಿ ಪಡಿಸಿದೆ. ಆದರೆ, ಈ ವೇತನಕ್ಕೆ ತಜ್ಞ ವೈದ್ಯರು ಬರುತ್ತಿಲ್ಲ. ಕನಿಷ್ಠ 2.50 ಲಕ್ಷ ರೂ.ಗಳ ವೇತನ ನಿಗದಿ ಪಡಿಸಿದರೆ ವೈದ್ಯರು ಲಭ್ಯವಾಗುತ್ತಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

 ಶಾಸಕ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಮಾತನಾಡಿ, ತಮ್ಮ ಜಗಳೂರು ಕ್ಷೇತ್ರ ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಗಳ ನಡುವೆ ಹರಿದು ಹಂಚಿದೆ. 7 ಪಂಚಾಯ್ತಿಗಳು ಹರಪನಹಳ್ಳಿಯಲ್ಲಿವೆ. ಅಲ್ಲಿನ ಸೋಂಕಿತರು ದಾವಣಗೆರೆಗೆ ಬಂದಾಗ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ತಿಳಿಸಲಾಗುತ್ತಿದೆ. ಬಳ್ಳಾರಿಗೆ ಹೋಗಲು ದೂರವಾಗುತ್ತದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊರೊನಾದಿಂದ ಅನಾಥವಾದ ಬಾಲಕಿಯೊಬ್ಬರ ಜೊತೆ ಸಚಿವೆ ಜೊಲ್ಲೆ ಮಾತನಾಡಿ, ಮುಂದಿನ ಜವಾಬ್ದಾರಿ ವಹಿಸಿಕೊಳ್ಳುವ ಭರವಸೆ ನೀಡಿದರು. 

ಆಗ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಕೊರೊನಾದಿಂದ ಅನಾಥವಾದ ಹೊನ್ನಾಳಿಯ ಬಾಲಕಿಯೊಬ್ಬರ ಪಿಯುಸಿಯಿಂದ ಉನ್ನತ ಶಿಕ್ಷಣದವರೆಗಿನ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು.

 ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಶಾಸಕ ಹಾಗೂ ಲಿಡ್ಕರ್ ಅಧ್ಯಕ್ಷ ಪ್ರೊ. ಲಿಂಗಣ್ಣ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!