ದಾವಣಗೆರೆ, ಜೂ.21- ಜಿಲ್ಲಾಡಳಿತ ಲಾಕ್ಡೌನ್ ನಿರ್ಬಂಧಗಳನ್ನು ತುಸು ಸಡಿಲ ಗೊಳಿಸಿ, ಕೆಲವು ಅಂಗಡಿಗಳನ್ನು ತೆರೆಯಲು ಮಾತ್ರ ಅನುಮತಿಸಿತ್ತು. ಆದರೆ ಸೋಮವಾರ ನಗರದ ಬಹುತೇಕ ವರ್ತಕರು ಸ್ವಯಂ ಅನ್ಲಾಕ್ ಆಗಿ ವಹಿವಾಟು ನಡೆಸಿದರು.
ಜಿಲ್ಲೆಯಲ್ಲಿ ಹಾಲು, ಡೈರಿ, ಹಾಲಿನ ಬೂತ್, ಪಶು ಆಹಾರ ಅಂಗಡಿಗಳು, ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು, ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಎಲ್ಲಾ ಮದ್ಯದ ಅಂಗಡಿಗಳು, ಕಟ್ಟಡ ನಿರ್ಮಾಣ ಸಾಮಗ್ರಿ ಮಾರುವ ಅಂಗಡಿಗಳು ಸೇರಿದಂತೆ ಕೆಲವೇ ಅಂಗಡಿಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿತ್ತು.
ಆದರೆ, ಸೈಕಲ್ ಅಂಗಡಿಗಳಿಂದ ಹಿಡಿದು ಕಟಿಂಗ್ ಶಾಪ್, ಆಟೋಮೊಬೈಲ್, ಜೆರಾಕ್ಸ್, ಪುಸ್ತಕ, ಫ್ಯಾನ್ಸಿ ಸ್ಟೋರ್, ಲಾಂಡ್ರಿಗಳು, ವಾಟರ್ ಸರ್ವೀಸ್ ಸೇರಿದಂತೆ ಹತ್ತು ಹಲವು ಅಂಗಡಿಗಳ ಮಾಲೀಕರು ಮಧ್ಯಾಹ್ನ 2ರವರೆಗೆ ಬಾಗಿಲು ತೆರೆದು ವಹಿವಾಟು ನಡೆಸಿದರು.
ಮೊಬೈಲ್, ಸ್ಟೇಷನರಿ ಅಂಗಡಿಗೆ ಅವಕಾಶ
ಪುಸ್ತಕ, ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್ ಅಂಗಡಿ ಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ.
ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿ ದಿನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಈ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿರುವು ದಾಗಿ ಜಿಲ್ಲಾಡಳಿತ ತಿಳಿಸಿದೆ.
ಅಲ್ಲದೆ ಕೈಗಾರಿಕಾ ಚಟುವಟಿಕೆ ಗಳಿಗೆ ವಿಧಿಸಿರುವ ನಿಬಂಧನೆಯು ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಅವಧಿಯಲ್ಲಿಯು ಅನ್ವಯವಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ದಾವಣಗೆರೆಯಿಂದ 80 ಬಸ್ ಸಂಚಾರ
ಕೆಎಸ್ಸಾರ್ಟಿಸಿ ಬಸ್ಗಳ ಓಡಾಟಕ್ಕೆ ಸರ್ಕಾರ ಅನುಮತಿ ನೀಡಿದ್ದು, ದಾವಣಗೆರೆ ವಿಭಾಗದಿಂದ ಸೋಮವಾರ 80 ಬಸ್ ಗಳು ಸಂಚರಿಸಿವೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ತಿಳಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿ ಬೆಂಗ ಳೂರು, ಹೊಸಪೇಟೆ, ರಾಣೇಬೆನ್ನೂರು, ಚಿತ್ರದುರ್ಗ, ಶಿವಮೊಗ್ಗ, ಜಗಳೂರು, ಚನ್ನಗಿರಿ, ಹೊಸದುರ್ಗ ಸೇರಿದಂತೆ ವಿವಿಧ ನಗರಗಳಿಗೆ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಹೇಳಿದರು.
ಪ್ರಯಾಣಿಕರ ಓಡಾಟ ಪೂರ್ತಿ ಪ್ರಮಾಣದಲ್ಲಿರಲಿಲ್ಲ. ಮಧ್ಯಾಹ್ನ 2.30ರವರೆಗೆ ಮಾತ್ರ ಪ್ರಯಾಣಿಕರ ಓಡಾಟ ತುಸು ಹೆಚ್ಚಾಗಿತ್ತು. ಆದರೆ ನಂತರ ಕಡಿಮೆಯಾಗಿದೆ ಎಂದವರು ಹೇಳಿದರು.
ಲಾಕ್ಡೌನ್ ಪರಿಣಾಮ ಕಳೆದ ಎರಡು ತಿಂಗಳಿನಿಂದ ದಾವಣಗೆರೆ ವಿಭಾಗಕ್ಕೆ ಸುಮಾರು 24 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಇದೇ ಸಂದರ್ಭದಲ್ಲಿ ಹೆಬ್ಬಾಳ್ ತಿಳಿಸಿದರು.
ಬಟ್ಟೆ, ಬಂಗಾರ, ಎಲೆಕ್ಟ್ರಾನಿಕ್ಸ್, ಪಾತ್ರೆ ಅಂಗಡಿ ಸೇರಿದಂತೆ ಕೆಲವೇ ಅಂಗಡಿಗಳು ಮಾತ್ರ ಮಾರುಕಟ್ಟೆಯಲ್ಲಿ ಮುಚ್ಚಿದ್ದವು. ಜಿಲ್ಲಾಡಳಿತವೇ ಒಂದು ರೀತಿ ಅನ್ಲಾಕ್ ಮಾಡಿದ್ದರೆ, ಸಾರ್ವಜನಿಕರು ತಮಗೆ ತಿಳಿದ ರೀತಿಯ ಅನ್ಲಾಕ್ ಮಾಡಿಕೊಂಡಿದ್ದುದು ಕಂಡು ಬಂತು. ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಬೆಳಿಗ್ಗೆಯಿಂದಲೇ ಭರಾಟೆ ನಡೆಸಿದ್ದು ಕಂಡು ಬಂತು. ಮಧ್ಯಾಹ್ನ 2 ಗಂಟೆ ನಂತರ ಪೊಲೀಸರು ಅಂಗಡಿಗಳನ್ನು ಮುಚ್ಚುವಂತೆ ತಿಳಿಸಿದರು.
ಬಿಎಸ್ಎನ್ಎಲ್ ಬಳಿ ಟ್ರಾಫಿಕ್ ಪರದಾಟ : ಹಳೆ ಪಿ.ಬಿ. ರಸ್ತೆಯಲ್ಲಿ ಬಿ.ಎಸ್.ಎನ್.ಎಲ್. ಕಚೇರಿ ಬಳಿ ಬೆಳಿಗ್ಗೆ 10 ಗಂಟೆ ವೇಳೆ ಸಂಚಾರ ಅಸ್ತವ್ಯಸ್ತವಾಗಿದ್ದು ಕಂಡು ಬಂತು. ಮುಖ್ಯ ರಸ್ತೆಯ ಒಂದು ಭಾಗ ಬಂದ್ ಮಾಡಿದ್ದು ಸಂಚಾರಿಗಳಿಗೆ ಸಮಸ್ಯೆಯಾಗಿತ್ತು. ರಸ್ತೆ ಬಂದ್ ಆಗಿರುವುದು ತಿಳಿಯದ ಸವಾರರು ರಶ್ನಲ್ಲಿ ಸಿಲುಕಿ ಪರದಾಡಿದರು.
ಫುಲ್, ಹಾಫ್ ಮಾರಾಟ : ಆಟೋಮೊಬೈಲ್, ಸ್ಟೇಷನರಿ, ಫ್ಯಾನ್ಸಿ ಸೇರಿದಂತೆ ಹಲವಾರು ಅಂಗಡಿಯವರಲ್ಲಿ ಕೆಲವರು ಪೂರ್ಣ ಬಾಗಿಲು ತೆರೆದು ವಹಿವಾಟು ನಡೆಸಿದರು. ಇನ್ನು ಕೆಲವರು ಅರ್ಧ ಬಾಗಿಲು ತೆರೆದಿದ್ದರು. ಇನ್ನು ಕೆಲವರು ಅಂಗಡಿಯ ಶೆಟರ್ ಮುಚ್ಚಿ, ಗ್ರಾಹಕರು ಬಂದಾಗ ಮಾತ್ರ ಬಾಗಿಲು ತೆರೆಯುತ್ತಿದ್ದುದು ಕಂಡು ಬಂತು.
ಪಂಜರದಲ್ಲಿ ಕೂಡಿಹಾಕಿದ್ದ ಹಕ್ಕಿಗಳಂತಿದ್ದ ಜನತೆ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸುವುದನ್ನೇ ಕಾಯುತ್ತಿದ್ದಂತಿತ್ತು. ಪರಿಣಾಮ ಕೊರೊನಾವನ್ನು ಮರೆತೇ ವ್ಯಾಪಾರ-ವಹಿವಾಟನಲ್ಲಿ ನಿರತರಾಗಿದ್ದರು. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ನಾಮಕಾವಸ್ಥೆಗಾಗಿ ಮಾತ್ರ ಎನ್ನುವಂತಿತ್ತು. ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿತ್ತಾದರೂ, ಸಂಜೆವರೆಗೂ ವಾಹನಗಳ ಓಡಾಟ ಹೆಚ್ಚಾಗಿಯೇ ಇತ್ತು.