ದಾವಣಗೆರೆ, ಜೂ. 20 – ರಾಜ್ಯ ಸರ್ಕಾರದ ಮಾರ್ಗಸೂಚಿ ಯಂತೆ ಜಿಲ್ಲೆಯಲ್ಲೂ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಸೋಮವಾರ ದಿಂದ ಬರುವ ಜುಲೈ 5ರವರೆಗೆ ಅನುಮತಿ ಪಡೆದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಬಹುದಾಗಿದೆ. ಬಸ್ ಸಂಚಾರಕ್ಕೂ ನಿರ್ಬಂಧಿತ ಚಾಲನೆ ನೀಡಲಾಗಿದೆ.
ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸೋಮವಾರದಿಂದ ಬಸ್ಗಳು ಶೇ.50ರಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ. ಸಂಜೆ 7ರ ಒಳಗೆ ಬಸ್ ತಮ್ಮ ನಿಲುಗಡೆಗೆ ತಲುಬೇಕು ಎಂದಿದ್ದಾರೆ.
ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದ್ದು, ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿ ಇರಲಿದೆ.
ಹಾಲಿನ, ಡೈರಿ, ಹಾಲಿನ ಬೂತ್, ಪಶು ಆಹಾರ ಅಂಗಡಿಗಳು, ಕಿರಾಣಿ ಅಂಗಡಿಗಳು, ದಿನಸಿ, ಹಣ್ಣು ತರಕಾರಿಗಳು, ಮಾಂಸ ಮತ್ತು ಮೀನು ಹಾಗೂ ಎಲ್ಲಾ ಮದ್ಯದ ಅಂಗಡಿಗಳಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅನುಮತಿ ಇದೆ. ಸಿಎಲ್-4 ಸನ್ನದು ಹೊಂದಿರುವ ಕ್ಲಬ್ಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇರಲಿದೆ.
ಕಟ್ಟಡ ಕಾಮಗಾರಿ, ದುರಸ್ತಿಗೆ ಸಂಬಂಧಿಸಿದ ವಸ್ತುಗಳನ್ನು ಪೂರೈಸುವ ಎಲ್ಲಾ ಅಂಗಡಿಗಳು (ಸಿಮೆಂಟ್, ಕಬ್ಬಿಣ, ಪೇಂಟ್ಸ್, ಹಾರ್ಡವೇರ್, ಗ್ಲಾಸ್, ಪ್ಲೇ-ವುಡ್, ಸಾಮಿಲ್ಸ್, ಎಲೆಕ್ಟ್ರಿಕಲ್ಸ್, ಪೈಪ್ಸ್, ಟೈಲ್ಸ್/ಮಾರ್ಬಲ್ಸ್, ಸ್ಯಾನಿಟರಿ ವೇರ್ಸ್), ಕನ್ನಡಕದ ಅಂಗಡಿಗಳು, ಪಡಿತರ ನ್ಯಾಯಬೆಲೆ ಅಂಗಡಿಗಳಿಗೂ ಅನುಮತಿ ಇದೆ.
ದಾಸ್ತಾನು ಇಳಿಸಲು, ರವಾನಿಸಲು ದಿನ ಪೂರ್ತಿ ಅವಕಾಶ: ಜಿಲ್ಲಾಧಿಕಾರಿ
ಅಂಗಡಿ ಮತ್ತು ಗೋದಾಮುಗಳಲ್ಲಿ ದಾಸ್ತಾನು ಇಳಿಸಲು ಮತ್ತು ತೆಗೆದುಕೊಂಡು ಹೋಗಲು ಮಾತ್ರ ದಿನ ಪೂರ್ತಿ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.
ಅಂಗಡಿಗಳನ್ನು ತೆರೆಯಲು ನಿರ್ಬಂಧವಿದೆ. ಆದರೆ, ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಅವಕಾಶವಿರುವ ಹಿನ್ನೆಲೆಯಲ್ಲಿ ಸದರಿ ವಾಹನಗಳು ಸರಕುಗಳನ್ನು ರಶೀದಿಯಲ್ಲಿ ನಮೂದಿತ ವಿಳಾಸದ ಅಂಗಡಿ ಮತ್ತು ಗೋದಾಮುಗಳಲ್ಲಿ ಇಳಿಸಲು ಹಾಗೂ ತೆಗೆದುಕೊಂಡು ಹೋಗಲು ಮಾತ್ರ ದಿನಪೂರ್ತಿ ಅವಕಾಶ ಇರಲಿದೆ ಎಂದವರು ಹೇಳಿದ್ದಾರೆ.
ಪಠ್ಯಪುಸ್ತಕ ಪೂರೈಕೆ ಅವಕಾಶಕ್ಕೆ ಸೂಕ್ತ ನಿರ್ಣಯ
ಆನ್ಲೈನ್ ತರಗತಿಗಳು ಆರಂಭವಾಗಿದ್ದು, ಶಾಲಾ ಪಠ್ಯಪುಸ್ತಕಗಳನ್ನು ಪೂರೈಸಲು ಪುಸ್ತಕ ಮಾರಾಟಗಾರರಿಗೆ ಅವಕಾಶ ನೀಡುವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪೂರ್ವದಲ್ಲೇ ದಾಖಲಾತಿ ನಡೆಸುತ್ತಿರುವ ಪ್ರಥಮ ಪಿಯು ಕಾಲೇಜುಗಳಿಗೆ ನೋಟಿಸ್ ನೀಡುವಂತೆ ಡಿಡಿಪಿಯು ಅವರಿಗೆ ಸೂಚಿಸಲಾಗಿದೆ. ತಾವೂ ಸಹ ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದವರು ಹೇಳಿದ್ದಾರೆ.
ಜಿಲ್ಲೆಗೆ 22 ಸಾವಿರ ಕೋವಿಶೀಲ್ಡ್, 6 ಸಾವಿರ ಕೋವ್ಯಾಕ್ಸಿನ್ ಲಸಿಕಾ ಪೂರೈಕೆಯಾಗಿದ್ದು, ಸೋಮವಾರ ಬೃಹತ್ ಲಸಿಕಾ ಮೇಳ ನಡೆಯಲಿದೆ. ಆದ್ಯತಾ ಗುಂಪಿನವರಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದೂ ಅವರು ಹೇಳಿದ್ದಾರೆ.
ನಿಗದಿತ ಮದುವೆ ಕಾರ್ಯಕ್ರಮಗಳನ್ನು ನಡೆಸಲು, ಗರಿಷ್ಠ 40 ಹತ್ತಿರದ ಸಂಬಂಧಿಗಳು ಮಾತ್ರ ಭಾಗವಹಿಸಿ, ಅವರುಗಳ ಮನೆಯಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗಿದೆ. ಆದರೆ, ಈ ಮದುವೆಗಳಲ್ಲಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ನಿರ್ಬಂಧಿಸಲಾಗಿದೆ. ಉಳಿದ ಎಲ್ಲಾ ಸಾಮಾ ಜಿಕ, ಧಾರ್ಮಿಕ ಸಭೆ, ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.
ಎಲ್ಲಾ ವಿಧದ ಉತ್ಪಾದಿತ ಘಟಕಗಳು ಸಂಸ್ಥೆಗಳು, ಕೈಗಾರಿಕೆಗಳು, ಕೋವಿಡ್ ನಿಯಮಾವಳಿಯ ಮೇಲೆ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು. ಗಾರ್ಮೆಂಟ್ಸ್ ಗಳಲ್ಲಿ ಶೇ.30ರ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹು ದಾಗಿದೆ ಎಂದು ಜಿಲ್ಲಾಧಿಕಾರಿ ಬೀಳಗಿ ಹೇಳಿದ್ದಾರೆ.
ವಾಕಿಂಗ್ ಮತ್ತು ಜಾಗಿಂಗ್ ಉದ್ದೇಶಕ್ಕಾಗಿ ಮಾತ್ರ ಉದ್ಯಾನವನಗಳನ್ನು ಬೆಳಿಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಆದರೆ, ಯಾವುದೇ ಗುಂಪು ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದವರು ಹೇಳಿದ್ದಾರೆ.
ಈ ಮೇಲೆ ತಿಳಿಸಿದ ಮಾರ್ಗಸೂಚಿ ಅಥವಾ ನಿಬಂಧನೆಗಳನ್ನು ಉಲ್ಲಂಘಿಸಿದ ಪಕ್ಷದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿರುವ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.6.37 ರಷ್ಟಿದ್ದು ಮುಂದಿನ ಎರಡು ಮೂರು ದಿನಗಳಲ್ಲಿ ಶೇ.5 ರೊಳಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಪಾಸಿಟಿವಿಟಿ ಮತ್ತು ಡೆತ್ ರೇಟ್ ಜಾಸ್ತಿ ಇದ್ದು, ಇದನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್ಓ ಡಾ.ನಾಗರಾಜ್ ಉಪಸ್ಥಿತರಿದ್ದರು.