ಹೊನ್ನಾಳಿಗೆ 582 ಕೋಟಿ ರೂ. ಯೋಜನೆಗಳಿಗೆ ಸಂಪುಟ ಅಸ್ತು

ಹೊನ್ನಾಳಿಗೆ 582 ಕೋಟಿ ರೂ. ಯೋಜನೆಗಳಿಗೆ ಸಂಪುಟ ಅಸ್ತು - Janathavaniಶಾಸಕ ರೇಣುಕಾಚಾರ್ಯ ಕ್ಷೇತ್ರಕ್ಕೆ ಬೃಹತ್ ಕೊಡುಗೆ 

ಬೆಂಗಳೂರು, ಜೂ. 21 – ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, 582 ಕೋಟಿ ರೂ.ಗಳ ಯೋಜನೆಗಳಿಗೆ ವಿಸ್ತೃತ ಯೋಜನಾ ವರದಿ ರೂಪಿಸಲು ಅನುಮೋದನೆ ನೀಡಿದೆ.

ಇದರಲ್ಲಿ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 415 ಕೋಟಿ ರೂ.ಗಳ ಯೋಜನೆ ಸಹ ಸೇರಿದೆ.

ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ‌ಬರುವ 94 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಎತ್ತಿ ಕೆರೆಗಳನ್ನು ತುಂಬಿಸುವ 415 ಕೋಟಿ ರೂ. ಮೊತ್ತದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದವರು ಹೇಳಿದ್ದಾರೆ.

ಇದೇ ವೇಳೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ವೃದ್ಧಿಸುವ ಯೋಜನೆಯನ್ನು ಎರಡು ಹಂತಗಳಲ್ಲಿ ಒಟ್ಟಾರೆ 167 ಕೋಟಿಗಳ ವೆಚ್ಚದಲ್ಲಿ (ಹಂತ 1ರಲ್ಲಿ ರೂ. 121 ಕೋಟಿ ಮತ್ತು ಎರಡನೇ ಹಂತದಲ್ಲಿ ರೂ. 46 ಕೋಟಿ) ಕೈಗೊಳ್ಳುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು  ಬೊಮ್ಮಾಯಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ಹೊನ್ನಾಳಿ – ನ್ಯಾಮತಿ ಅವಳಿ ಕ್ಷೇತ್ರಗಳ ಅಭಿವೃದ್ಧಿ ಯೋಜನೆ ಗಳಿಗೆ 585 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ನಾಯಕತ್ವದ ವಿಷಯ ಬಂದಾಗ ರೇಣುಕಾಚಾರ್ಯ ಅವರು ಪ್ರಬಲವಾಗಿ ಮುಖ್ಯಮಂತ್ರಿ ಬೆಂಬಲಿಸುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೇ ನಾಯಕತ್ವದ ವಿಷಯ ಚರ್ಚೆಗೆ ಬಂದಾಗ, ರೇಣುಕಾಚಾರ್ಯ ಮುಂಚೂಣಿಯಲ್ಲಿ ನಿಂತು ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದರು.

ಮೂರನೇ ಅಲೆ‌ ವರದಿ ನಾಳೆ ಸಿಎಂಗೆ ಸಲ್ಲಿಕೆ: ಕೊರೊನಾದ ಮೂರನೇ ಅಲೆ ಸಂಬಂಧ ದೇವಿ ಶೆಟ್ಟಿ ನೇತೃತ್ವದ ಸಮಿತಿ ಸಿದ್ಧಪಡಿಸಿದ ಮಧ್ಯಂತರ ವರದಿಯನ್ನು ನಾಳೆ ಸಿಎಂಗೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

ವರದಿಯನ್ನು ಆಧರಿಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಹಾಸನದಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿಗಳ ರೂ.193.65 ಕೋಟಿಗಳ ಅಂದಾಜು ಮೊತ್ತಕ್ಕೆ ಅನುಮೋದನೆ‌ ನೀಡಲಾಗಿದೆ.

ಇದೇ ವೇಳೆ, ಕೃಷಿ ವಿವಿ ಪ್ರವೇಶಾತಿಯಲ್ಲಿ ಕೃಷಿಕರ ಮಕ್ಕಳಿಗೆ ಪ್ರಸ್ತುತ ಇರುವ ಶೇ.40 ಮೀಸಲಾತಿಯನ್ನು ಶೇ. 50ಕ್ಕೆ ಹೆಚ್ಚಿಸಲು ಸಮ್ಮತಿಸಲಾಗಿದೆ.

 ರಾಜ್ಯದಲ್ಲಿ ಸ್ವಂತ ಕಟ್ಟಡಗಳಿಲ್ಲದ 100 ಪೊಲೀಸ್ ಠಾಣೆಗಳಿಗೆ 200 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಶಾಲೆ ವಿದ್ಯಾರ್ಥಿಗಳಿಗೆ 83 ಕೋಟಿ ರೂ.‌ಮೊತ್ತದ ಸಮವಸ್ತ್ರ ನೀಡಲು ಅನುಮೋದನೆ ನೀಡಲೂ ಸಹ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ವಿಶ್ವ ಬ್ಯಾಂಕ್ ಸಹಕಾರದಲ್ಲಿ ಅಣೆಕಟ್ಟೆ ಪುನರ್ವಸತಿ ಹಾಗೂ ಸುಧಾರಣಾ ಯೋಜನೆಗಾಗಿ 1,500 ಕೋಟಿ ರೂ. ಮೌಲ್ಯದ ಯೋಜನೆಗೂ ಸಮ್ಮತಿ ನೀಡಲಾಗಿದೆ.

ಸುಗ್ರೀವಾಜ್ಞೆ ಮೂಲಕ ತುರ್ತು ನಿಧಿಯ ಮೊತ್ತವನ್ನು 500 ಕೋಟಿ ರೂ.ಗಳಿಂದ 2,500 ಕೋಟಿ ರೂ.ಗಳಿಗೆ ಹೆಚ್ಚಿಸಲೂ ಸಹ ಸಂಪುಟ ಸಮ್ಮತಿಸಿದೆ.

error: Content is protected !!