ದಾವಣಗೆರೆ, ಜೂ.20 – ಕೊರೊನಾ ಸೋಂಕಿತರು, ರೋಗಿಗಳು, ಬಡವರಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ನೀಡುತ್ತಿರುವ ಅನ್ನ ದಾಸೋಹ ಶ್ರೇಷ್ಠ ಸಾಮಾಜಿಕ ಸೇವೆ ಎಂದು ಶಾಸಕರುಗಳಾದ ಎಸ್.ಎ. ರವೀಂದ್ರನಾಥ್ ಮತ್ತು ಎಸ್.ವಿ. ರಾಮಚಂದ್ರ ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.
ದಾಸೋಹದ ಸಿದ್ಧತೆ ನಡೆಯುತ್ತಿರುವ ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಇಂದು ಮಧ್ಯಾಹ್ನ ಭೇಟಿ ನೀಡಿದ ಅವರುಗಳು, ದಾಸೋ ಹದ ಸಿದ್ಧತೆಗಳನ್ನು ವೀಕ್ಷಿಸಿ, ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘದ ಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು.
ಈ ಕಾರ್ಯಕ್ಕೆ ತಾವು ವೈಯಕ್ತಿಕವಾಗಿ 1 ಲಕ್ಷ ರೂ.ಗಳನ್ನು ನೀಡುವುದಾಗಿ ಎಸ್.ಎ. ರವೀಂದ್ರನಾಥ್ ತಿಳಿಸಿದರು. ಎಸ್.ಎ. ರವೀಂದ್ರನಾಥ್ ಅಭಿಮಾನಿ ಬಳಗದಿಂದ 2.5 ಲಕ್ಷ ರೂ.ಗಳನ್ನು ದೇಣಿಗೆ ನೀಡಲಾಯಿತು. ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರ ಅವರು ಕೂಡಾ ವೈಯಕ್ತಿಕವಾಗಿ 50 ಸಾವಿರ ರೂ.ಗಳನ್ನು ನೀಡುವುದಾಗಿ ಹೇಳಿದರು.
ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಜನರು ಸಂಕಷ್ಟಕ್ಕೆ ಗುರಿಯಾದ ಸಂದರ್ಭದಲ್ಲೆಲ್ಲ ಸಿರಿಗೆರೆ ತರಳಬಾಳು ಶ್ರೀಮಠ ಸೇವೆಗೆ ಬರುತ್ತದೆ. ಇದು ಶ್ರೀಮಠದ ಪರಂಪರೆಗೆ ಸಾಕ್ಷಿ ಎಂದು ಹೇಳಿದರು.
ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ದೇಶ ವಿಷಮ ಪರಿಸ್ಥಿತಿ ಯಲ್ಲಿ ಇರುವಾಗ ಎಲ್ಲವೂ ಸರ್ಕಾರವೇ ಮಾಡು ತ್ತದೆ ಅನ್ನುವುದು ಸರಿಯಲ್ಲ. ಜನರು, ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸಿದ್ದಲ್ಲಿ ಉತ್ತಮ ಕೆಲಸ ಮಾಡಿದಂತೆ ಆಗುತ್ತದೆ ಎಂದರು.
ಶಿವಸೈನ್ಯ ಯುವಕರ ಸಂಘದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು ಮಾತನಾಡಿ, ದಾನಿಗಳ ಕೊಡುಗೆಯನ್ನು ಸ್ಮರಿಸಿದರು.
ಮಾಜಿ ಮೇಯರ್ ಎಂ.ಎಸ್. ವಿಠಲ್, ಜಗಳೂರು ತಾಲ್ಲೂಕು ಬಿಜೆಪಿ ಅಧ್ಯಕ್ಷ ಹೆಚ್.ಸಿ. ಮಹೇಶ್ ಪಲ್ಲಾಗಟ್ಟಿ, ಪಾಲಿಕೆ ಸದಸ್ಯ
ಕೆ.ಎಂ. ವೀರೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ವಾಮದೇವಪ್ಪ, ಸಂಘದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು, ಮಾಗನೂರು ಉಮೇಶ್ ಗೌಡ, ಲಿಂಗರಾಜು ಅಗಸನಕಟ್ಟೆ, ಪ್ರಭು ಕಾವಲಹಳ್ಳಿ, ಶ್ರೀನಿವಾಸ ಮೆಳ್ಳೇಕಟ್ಟೆ, ಸತೀಶ್ ಸಿರಿಗೆರೆ, ಶಿವಕುಮಾರ್ ಕೊರಟಿಗೆರೆ ಮತ್ತಿತರರಿದ್ದರು.