ಬಡವರ ಬಗ್ಗೆ ಕಾಳಜಿ ತೋರಿದರೆ ಭಗವಂತನ ಸ್ಮರಣೆ ಮಾಡಿದಂತೆ : ಎಸ್ಪಿ

ಹರಿಹರ, ಜೂ.20- ಬಡವರ ಬಗ್ಗೆ ಕಾಳಜಿ ತೋರಿಸಿದರೆ ಭಗವಂತನ ಸ್ಮರಣೆ ಮಾಡಿದಂತಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅಭಿಪ್ರಾಯ ಪಟ್ಟರು.

ನಗರದ ತರಳಬಾಳು ಯುವಕ ಸಂಘ, ಸಾಧು ವೀರಶೈವ ಸಮಾಜದ ತಾಲ್ಲೂಕು ಘಟಕ ಮತ್ತು ಮಹಿಳಾ ಘಟಕದ ವತಿಯಿಂದ ಕೊರೊನಾ ವಾರಿಯರ್ಸ್‌ ಮತ್ತು ಪರಿಚಾರಕರಿಗೆ ಮಧ್ಯಾಹ್ನದಲ್ಲಿ ನೀಡುವ ಉಚಿತ ಆಹಾರ ವಿತರಣೆಗೆ ಅವರು ಚಾಲನೆ ನೀಡಿ, ಪತ್ರಕರ್ತರೊಂದಿಗೆ ಮಾತನಾಡಿದರು.

ಮನುಷ್ಯರ ಜೀವನದಲ್ಲಿ ಚಿಕ್ಕ ವಯಸ್ಸಿನಿಂದ ಹಿಡಿದು ಮುಪ್ಪಿನವರೆಗೆ ಸಾಕಷ್ಟು ಅನುಭವಗಳನ್ನು ಕಾಣುತ್ತೇವೆ. ನಾವು ಮಾಡುವ ದಾನಕ್ಕೆ ಮತ್ತು ಇನ್ನೊಬ್ಬರು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದಾಗ ಸಿಗುವ ನೆಮ್ಮದಿ, ಯಾವುದೇ ಕಾರ್ಯದಿಂದ ಪಡೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. 

ಸಮಾಜದಲ್ಲಿ ಅನೇಕ ಜನರು ಶ್ರೀಮಂತ ವರ್ಗದವರು ಇರುತ್ತಾರೆ. ಆದರೆ ಅದನ್ನು ಹೇಗೆ ಮತ್ತಷ್ಟು ಹೆಚ್ಚಿಗೆ ಮಾಡಬೇಕೆಂದು ಹಗಲು, ರಾತ್ರಿ ಅದರ ಬಗ್ಗೆ ಯೋಚಿಸುತ್ತಾರೆ. ಆದರೆ ಅದನ್ನು ದ್ವಿಗುಣ ಮಾಡುವುದು ತಪ್ಪಲ್ಲ, ಸಂಕಷ್ಟದ ಸಮಯದಲ್ಲಿ ಬಡವರಿಗೆ ನೆರವು ನೀಡಲು ಸ್ವಲ್ಪ ಹಣ ಬಳಸಿದರೆ ದೇವರು ಇನ್ನೊಂದು ರೂಪದಲ್ಲಿ ಮತ್ತಷ್ಟು ದ್ವಿಗುಣ ಮಾಡುವುದಕ್ಕೆ ದಾರಿ ಕಲ್ಪಿಸುವುದರ ಜೊತೆಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ಪ್ರತಿಪಾದಿಸಿದರು. 

ಈ ಸಂದರ್ಭದಲ್ಲಿ ನಗರದ ರಾಮಕೃಷ್ಣ ಆಶ್ರಮದ ಶ್ರೀ ಶಾರದೇಶಾನಂದ ಸ್ವಾಮೀಜಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ‌ ವೀರೇಶ್ ಹನಗವಾಡಿ, ಸಮಿತಿಯ ಶಿವಕು ಮಾರ್ ಕೊಂಡಜ್ಜಿ, ಬೆಳ್ಳೂಡಿ ರಾಮಚಂದ್ರಪ್ಪ, ಹನಗವಾಡಿ ಮಂಜಪ್ಪ, ಕೊಂಡಜ್ಜಿ ವೀರಣ್ಣ, ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ಗ್ರಾಪಂ ಸದಸ್ಯೆ ಗೀತಮ್ಮ, ವಕೀಲರಾದ ಉಮೇಶ್, ವಸಂತ, ಭರತ್, ಪ್ರಭಾಕರ್ ಇತರರು ಹಾಜರಿದ್ದರು.

ದೇವೀರಮ್ಮ ರವೀಂದ್ರ ಮಲ್ಲಾಪುರ್ ದಾವಣಗೆರೆ ಇವರು ಆಹಾರದ ಸೇವೆಯನ್ನು ಒದಗಿಸಿದ್ದರು.

error: Content is protected !!