ನಟ ದರ್ಶನ್ ಕರೆಗೆ ಸ್ಪಂದಿಸಿದ ಪಕ್ಷಿ-ಪ್ರಾಣಿ ಪ್ರಿಯರು

ಆನಗೋಡು ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ 15 ದಿನದಲ್ಲೇ ಪ್ರಾಣಿ-ಪಕ್ಷಿ ದತ್ತು ಪಡೆದ 182 ಜನ, 3.81 ಲಕ್ಷ ರೂ. ಸಂಗ್ರಹ

ದಾವಣಗೆರೆ, ಜೂ.20- ರಾಜ್ಯದ ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯುವಂತೆ ಚಿತ್ರನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ್ದ ಕರೆಗೆ ಸ್ಪಂದಿಸಿರುವ ಪ್ರಾಣಿ-ಪಕ್ಷಿ ಪ್ರಿಯರು ದಾವಣಗೆರೆ ಸಮೀಪದಲ್ಲಿರುವ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲೂ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದ್ದಾರೆ.

ಕಳೆದ ಕೇವಲ 15 ದಿನಗಳಲ್ಲಿಯೇ 182 ಅಭಿಮಾನಿಗಳು 3.81 ಲಕ್ಷ ರೂ. ಹಣ ಪಾವತಿಸಿ ತಮಗಿಷ್ಟದ ಪ್ರಾಣಿ-ಪಕ್ಷಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದು ಮಾನವೀಯತೆ ಮೆರೆದಿದ್ದಾರೆ.

ದತ್ತು ಪಡೆದ ಬಹುತೇಕ ದರ್ಶನ್  ಅಭಿಮಾನಿಗಳು, ಮೃಗಾಲಯದಿಂದ ನೀಡುವ ಪ್ರಮಾಣ ಪತ್ರದಲ್ಲಿ ತಮ್ಮ ಹೆಸರಿನೊಂದಿಗೆ ಡಿಬಾಸ್ ಅಭಿಮಾನಿಗಳು ಎಂದು ಬರೆಸಿಕೊಳ್ಳುವ ಮೂಲಕ ನೆಚ್ಚಿನ ನಟನ ಮೇಲಿನ ಅಭಿಮಾನವನ್ನೂ ತೋರ್ಪಡಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಆನಗೋಡಿನಲ್ಲಿರುವ ಈ ಉದ್ಯಾನವನವು ದಾವಣಗೆರೆ ಸೇರಿದಂತೆ ಸುತ್ತ ಮುತ್ತಲಿನ ನಗರ ಹಾಗೂ ಗ್ರಾಮೀಣ ಭಾಗದ ಜನರನ್ನು ಆಕರ್ಷಿಸುತ್ತಿತ್ತು.  ಕರಡಿ, ಜಿಂಕೆಗಳು, ನವಿಲುಗಳು, ಗಿಳಿಗಳು, ಲವ್ ಬರ್ಡ್ಸ್ ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ಈ ಮಿನಿ ಪ್ರಾಣಿ ಸಂಗ್ರಹಾಲಯದ ಜೀವನಾಡಿಗಳಂತಿದ್ದವು.

ಪ್ರಾಣಿ-ಪಕ್ಷಿ- ಪ್ರಿಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಾರಾಂತ್ಯದ ದಿನ ಕಳೆಯಲು ಕುಟುಂಬ ಸಹಿತ ಬರುವ ಜನರು ಇಲ್ಲಿನ ವಾತಾವರಣ, ಪ್ರಾಣಿ, ಪಕ್ಷಿಗಳ ಚಿಲಿ-ಪಿಲಿಗೆ ಮನಸೋತು ಮನಸ್ಸಿನ ದುಗುಡಗಳನ್ನು ಕಳೆದುಕೊಂಡು ತೆರಳುತ್ತಿದ್ದರು. ಪ್ರೇಮಿಗಳಿಗೂ ಸಹ ಈ ಪಾರ್ಕ್ ಅಚ್ಚುಮೆಚ್ಚಾಗಿರುವುದುಂಟು.

ಕೊರೊನಾ ಸಂಕಷ್ಟ ಎದುರಾಗುವುದಕ್ಕೂ ಮುಂಚೆ  ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯಕ್ಕೆ ಬರುವ ವೀಕ್ಷಕರಿಂದ  ಪ್ರತಿ ದಿನ 2-3 ಸಾವಿರ ರೂ. ಸಂಗ್ರಹವಾಗುತ್ತಿತ್ತು. ಭಾನುವಾರದ ದಿನಗಳಲ್ಲಿ 5 ರಿಂದ 6 ಸಾವಿರ ರೂ. ಹಾಗೂ ಹಬ್ಬದಂತಹ ವಿಶೇಷ ದಿನಗಳಲ್ಲಿ 8-10 ಸಾವಿರ ರೂ. ಸಂಗ್ರಹವಾಗುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸದ್ಯ ಸಂಗ್ರಹಾಲಯಕ್ಕೆ ಪ್ರವೇಶ ನಿಷೇಧಿಸಲಾಗಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಉಷಾರಾಣಿ.

ಸದ್ಯ ಒಂದು ಕರಡಿ, 145 ಜಿಂಕೆಗಳು, ಕೃಷ್ಣಮೃಗ, ಅಪ ರೂಪದ ಕೊಂಡುಕುರಿ, ಮೊಲ ಸೇರಿದಂತೆ ವಿವಿಧ ಬಗೆಯ ಪಕ್ಷಿಗಳು ಇಲ್ಲಿವೆ. ಪಕ್ಷಿಗಳಿಗೆ ಕಡಿಮೆ ದರ ಇರುವುದರಿಂದ ಹೆಚ್ಚಿನವರು ಪಕ್ಷಿಗಳನ್ನೇ ದತ್ತು ಪಡೆಯುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಅನಾಥ ಪ್ರಾಣಿಗಳಿಗೆ ಊಟ ನೀಡುತ್ತಾ ಮಾನವೀಯತೆ ಮೆರೆಯುತ್ತಿದ್ದ `ನಮ್ಮ ದಾವಣಗೆರೆ’ ತಂಡವೇ ವಿವಿಧ ಬಗೆಯ 9 ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದಿದೆ.

ಇತ್ತೀಚೆಗಷ್ಟೇ `ಡಿಬಾಸ್’ ಎಂದೇ ಖ್ಯಾತಿಯಾಗಿದ್ದ ದರ್ಶನ್, ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿ ಸಂಕುಲಕ್ಕೂ ಆಗಿದೆ. ಕರ್ನಾಟಕದಲ್ಲಿ 9 ಮೃಗಾಲಯಗಳಿದ್ದು, ಅವುಗಳನ್ನು ವೀಕ್ಷಿಸಲು ಬರುವವರಿಲ್ಲದೆ ಮೃಗಾಲಯಗಳು ಸಂಕಷ್ಟದಲ್ಲಿದ್ದು, ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ದತ್ತು ಪಡೆಯುವಂತೆ ಕರೆ ನೀಡಿದ್ದರು.

ದತ್ತು ಪಡೆದು ಪ್ರಾಣಿ-ಪಕ್ಷಿಗಳ ಸಂಕುಲ ಉಳಿಸುವಂತೆಯೂ, ಮೃಗಾಲಯವನ್ನು ಬೆಳೆಸಲು ಎಲ್ಲರೂ ಕೈ ಜೋಡಿಸಲು ‘zoo of karnataka’ ಆಪ್ ಮುಖಾಂತರ ಅಥವಾ ಮೃಗಾಲಯಗಳಿಗೇ ಭೇಟಿ ನೀಡಿ ಈ ದತ್ತು ಪಡೆಯುವ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಬಹುದು. ಈ ಒಳ್ಳೆಯ ಕಾರ್ಯಕ್ಕೆ ನಾವೆಲ್ಲರೂ ಕೈ ಜೋಡಿಸೋಣ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಮೃಗಾಲಯ ಗಳಲ್ಲೂ ದತ್ತು ಪಡೆಯುವ ಪ್ರಕ್ರಿಯೆ ಮುಂದುವರೆದಿದೆ.

error: Content is protected !!