ಸಹಾಯಕ ಪ್ರೊಫೆಸರ್ ಹುದ್ದೆಗೆ ಪಿಹೆಚ್‍ಡಿ ಕಡ್ಡಾಯ
ಶ್ರೀಗಳ ಸಲಹೆ ಮೇರೆಗೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪತ್ರ ಮುಖ್ಯಮಂತ್ರಿಗಳ ಶೀಘ್ರ ಸ್ಪಂದನೆಗೆ ಶ್ರೀಗಳ ಹರ್ಷ
ಸಿರಿಗೆರೆ, ಜೂ. 18- ವಿವಿಗಳಲ್ಲಿ ಖಾಲಿ ಇರುವ ಸಹಾಯಕ ಪ್ರೊಫೆಸರ್ ಹುದ್ದೆಗಳಿಗೆ ಪಿ.ಹೆಚ್.ಡಿ ಕಡ್ಡಾಯ ಮಾಡಿದ್ದರಿಂದ ಸಂಕಷ್ಟದಲ್ಲಿದ್ದ ಅರ್ಹ ಅಭ್ಯರ್ಥಿಗಳ ಹಿತ ಕಾಯಲು ತರಳಬಾಳು ಶ್ರೀಗಳು ಮಾಡಿದ ಸಲಹೆಗೆ ಸರ್ಕಾರ ಸ್ಪಂದಿಸಿ, ಕ್ರಮ ಕೈಗೊಂಡಿರುವುದಕ್ಕೆ ಶ್ರೀಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂ.15 ರಂದು ಕೇಂದ್ರ ಸರ್ಕಾರದ ಶಿಕ್ಷಣ ಸಚಿವರಿಗೆ ವೈಯಕ್ತಿಕ ಪತ್ರ ಬರೆದು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಸಹಾಯಕ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೇ ಜು.1 ರಿಂದ ಪಿಎಚ್‍ಡಿ ಕಡ್ಡಾಯವೆಂಬ ನಿಯಮವನ್ನು 2 ವರ್ಷ (ಜೂನ್ 30, 2023 ರವರೆಗೆ) ಮುಂದೂಡಬೇಕೆಂದು ಕೋರಿದ್ದರು.
ಈ ಬಗ್ಗೆ ನೂರಾರು ಜನರು, ತಾವು ಪ್ರಾಧ್ಯಾಪಕರಾಗುವ ಅರ್ಹತೆಗಳಿದ್ದರೂ ನೂತನ ನಿಯಮದಿಂದ ಹೇಗೆ ಅವಕಾಶ ವಂಚಿತರಾಗುತ್ತಿ ದ್ದೇವೆಂದು ಅಲವತ್ತುಕೊಂಡು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳಿಗೆ ಮಿಂಚೋಲೆ ಬರೆದಿದ್ದರು. ಪರೀಕ್ಷೆಗ ಳಲ್ಲಿ ಉತ್ತೀರ್ಣರಾಗಿ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿಗಾಗಿ ಹಲವು ವರ್ಷಗಳಿಂದ ಕಾಯುತ್ತಿರುವ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿ ಮುಗಿಸಿ ಅರ್ಹತಾ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹಲವು ವರ್ಷಗಳೇ ಕಳೆದಿವೆ. ವಯಸ್ಸು ಮೀರುತ್ತಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯ ಗಳಲ್ಲಿ ಒಟ್ಟು ಸುಮಾರು 900 ಪ್ರಾಧ್ಯಾಪಕ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಆಗುತ್ತಿಲ್ಲ.
ಇದೇ ಜು.1 ರೊಳಗೆ ನೇಮಕಾತಿ ಆಗದಿದ್ದರೆ ರಾಜ್ಯದ ಸಾವಿರಾರು ಯುವಕ ಮತ್ತು ಯುವತಿ ಯರು ಅವಕಾಶ ವಂಚಿತರಾಗುತ್ತಾರೆ. ಏಕೆಂದರೆ ಇದೇ ವರ್ಷ ಜುಲೈ 1 ರಿಂದ ಈ ಖಾಲಿ ಹುದ್ದೆಗಳ ನೇಮಕಾತಿಗೆ ಯುಜಿಸಿಯ ಹೊಸ ನಿಯಮವನ್ನು ಜಾರಿಗೊಳಿಸಿದರೆ ಇದುವರೆಗೆ ಇದ್ದ ಅರ್ಹತೆಯನ್ನು ಕಳೆದುಕೊಂಡು ಅವಕಾಶ ವಂಚಿತರಾಗುತ್ತೇವೆ ಎಂಬ ಭಯ ಆವರಿಗಿರುವುದಾಗಿ ಶ್ರೀಗಳಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಶ್ರೀಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ, ಯುಜಿಸಿ ಯು 2021 ರ ಜುಲೈ ತಿಂಗಳ 1 ರಿಂದ ಈ ಹುದ್ದೆಗೆ ಪಿಎಚ್‍ಡಿ ಡಿಗ್ರಿಯನ್ನು ಕಡ್ಡಾಯಗೊಳಿಸುವುದಾಗಿ ಮೂರು ವರ್ಷಗಳ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ ಸರ್ಕಾರವು ಕೋವಿಡ್ ಕಾರಣಕ್ಕಾಗಿ ಇದುವರೆಗಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಸಂಕಷ್ಟದ ಕಾರಣ ಅನುಮತಿ ನೀಡಿಲ್ಲ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಇದ್ದ ಎಲ್ಲ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಕಾಯುತ್ತಾ ಕುಳಿತಿವರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವಿವರಿಸಿದಾಗ, ಮುಖ್ಯಮಂತ್ರಿಗಳು ಅಭ್ಯರ್ಥಿಗಳ ಹಿತಾಸಕ್ತಿಯನ್ನು ಕಾಪಾಡಲು ಎಲ್ಲಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಅದರಂತೆ ಅದೇ ದಿನ ಹಣಕಾಸು ಇಲಾಖೆ ಮತ್ತು ಕಾರ್ಯದರ್ಶಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ಅನುಕೂಲಕರವಾದ ನಿರ್ಧಾರವನ್ನು ಕೈಗೊಂಡಿದ್ದಾರೆ. ಮಾರನೇ ದಿನವೇ ಕೇಂದ್ರದ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸಹ ಯು.ಜಿ.ಸಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರವು ಈ ಸಮಸ್ಯೆಗೆ ಸ್ಪಂದಿಸಿ ಶೀಘ್ರ ಕ್ರಮ ಕೈಗೊಂಡಿರುವುದು ಶ್ರೀಗಳಿಗೆ ಸಂತಸ ತರಿಸಿದೆ.