ವಿಷ್ಣು ಸಹಸ್ರನಾಮದಿಂದ ಸ್ಮರಣಶಕ್ತಿ, ಏಕಾಗ್ರತೆ

ಸಾಮೂಹಿಕ ‘ನಾಮಸಹಸ್ರಮ್’ನಲ್ಲಿ ಸ್ವಾಮಿ ತ್ಯಾಗೀಶ್ವರಾನಂದಜೀ

ದಾವಣಗೆರೆ, ಮಾ. 22 – ವಿಷ್ಣು ಸಹಸ್ರನಾಮ ಸ್ತೋತ್ರದಿಂದ ವಿದ್ಯಾರ್ಥಿಗಳಲ್ಲಿ ಸ್ಮರಣ ಶಕ್ತಿ, ಬುದ್ಧಿಮತ್ತೆ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ನಗರದ ರಾಮಕೃಷ್ಣ ಮಿಷನ್‌ನ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ತಿಳಿಸಿದ್ದಾರೆ.

ನಗರದ ಸಪ್ತಗಿರಿ ವಿದ್ಯಾಲಯದಲ್ಲಿ ವಿವೇಕ ಶಿಕ್ಷಣ ವಾಹಿನಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ §ನಾಮಸಹಸ್ರಮ್¬ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಸರಸ್ವತಿ ಹೋಮ ಮತ್ತು ದಿವ್ಯ ಸತ್ಸಂಗ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಭಾರತದ ಮಕ್ಕಳು ಆರು ವರ್ಷದವರೆಗೆ ವಿಶ್ವದಲ್ಲೇ ಅತಿ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಇದು ಈ ನೆಲದ ಮಣ್ಣಿನ ಪ್ರಭಾವ. ಆದರೆ, ನಂತರದಲ್ಲಿ ಈ ನೆಲದ ಸಂಸ್ಕೃತಿ, ಸಂಸ್ಕಾರ ಸಿಗದೇ ಮಕ್ಕಳು ಹಿಂದೆ ಬೀಳುತ್ತಿದ್ದಾರೆ ಎಂದವರು ವಿಷಾದಿಸಿದರು.

ಸಂಸ್ಕಾರ ಒದಗಿಸಿ ಮಕ್ಕಳಲ್ಲಿನ ಸ್ಮರಣ ಶಕ್ತಿ ಹಾಗೂ ಬುದ್ಧಿಮತ್ತೆ ಹೆಚ್ಚಿಸಲು, ಅವರು ಒಳ್ಳೆಯ ವಿದ್ಯಾರ್ಥಿ, ಕುಟುಂಬದ ಒಳ್ಳೆಯ ಸದಸ್ಯ ಹಾಗೂ ಒಳ್ಳೆಯ ನಾಗರಿಕನಾಗಿ ಮಾಡಲು ವಿಷ್ಣು ಸಹಸ್ರನಾಮ, ಶಿವ ಸ್ತ್ರೋತ್ರ, ದೇವಿಸ್ತುತಿ ಮತ್ತಿತರೆ ಪಾರಾಯಣಗಳು ನೆರವಾಗುತ್ತವೆ ಎಂದವರು ತಿಳಿಸಿದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಷ್ಣು ಸಹಸ್ರನಾಮ ನೆರವಾಗುವುದು ಕೇವಲ ಆರಂಭಿಕ ಹಂತ ಮಾತ್ರ. ಸಹಸ್ರನಾಮ ಪಾರಾಯಣದಿಂದ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಉನ್ನತಿ ನಂತರದಲ್ಲಿ ದೊರೆಯುತ್ತದೆ. ವಿಷ್ಣು ಸಹಸ್ರನಾಮವು ಭಗವಂತನ ಚರಿತ್ರೆ, ರೂಪ ಹಾಗೂ ಶೌರ್ಯವನ್ನು ವರ್ಣಿಸುತ್ತದೆ. ಶಂಕರಾಚಾರ್ಯರು ವಿಷ್ಣು ಸಹಸ್ರನಾಮದ ಕುರಿತು ಮೊದಲ ಬಾರಿಗೆ ಭಾಷ್ಯ ಬರೆದಿದ್ದರು ಎಂದು ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿವೇಕ ಶಿಕ್ಷಣ ವಾಹಿನಿ ಸ್ಥಾಪಕ ನಿತ್ಯಾನಂದ ವಿವೇಕವಂಶಿ, ಕೊರೊನಾಗೆ ಲಸಿಕೆ ಇರುವಂತೆಯೇ ಸಮಾಜದಲ್ಲಿನ ಅದ್ವಾನ ನಿವಾರಿಸಲು ವಿಷ್ಣು ಸಹಸ್ರನಾಮದಂತಹ ಲಸಿಕೆ ಅಗತ್ಯವಿದೆ. ಇದು ಇಡೀ ಜೀವನ ಒಳ್ಳೆಯ ದಾರಿಯಲ್ಲಿ ಸಾಗುವಂತೆ ಮಾಡುತ್ತದೆ ಎಂದರು.

ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶಾರದೇಶಾ ನಂದಜೀ ಮಹಾರಾಜ್, ಹೊಸಪೇಟೆ ರಾಮಕೃಷ್ಣ, ಗೀತಾಶ್ರಮದ ಅಧ್ಯಕ್ಷ ಸ್ವಾಮಿ ಸುಮೇಧಾ ನಂದಜೀ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಸಪ್ತಗಿರಿ ವಿದ್ಯಾಲಯದ ಮುಖ್ಯಸ್ಥ ರಾಮಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಪ್ತಗಿರಿ ವಿದ್ಯಾಲಯದ ಟ್ರಸ್ಟೀ ರಾಧಿಕಾ ರಾಮಮೂರ್ತಿ, ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಮಹಾಂತೇಶ್ ಭಾರತಿ, ಸಪ್ತಗಿರಿ ಪ್ರಾಥಮಿಕ ಶಾಲೆಯೆ ಮುಖ್ಯೋಪಾಧ್ಯಾಯಿನಿ ಶೈಲಜಾ ರಮೇಶ್, ಸಪ್ತಗಿರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದೇವರಾಜ, ವಿವೇಕ ಶಿಕ್ಷಣ ವಾಹಿನಿ ರಾಜ್ಯ ಸಂಯೋಜಕ ಪ್ರಭಂಜನ್ ಉಪಸ್ಥಿತರಿದ್ದರು.

error: Content is protected !!