ಮಲೇಬೆನ್ನೂರು, ಜೂ.17- ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಪುರಸಭೆ ಚುನಾವಣೆಗೆ ಮತದಾರರ ಪಟ್ಟಿ ತಯಾರಿಸಿ ಕೊಡುವ ಬಗ್ಗೆ ಮೊನ್ನೆ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರು ಬಿಎಲ್ಒಗಳ ಸಭೆ ನಡೆಸಿದರು.
ವಾರ್ಡ್ವಾರು ಮತದಾರರ ಪಟ್ಟಿ, ಗಣಕೀಕರಣ ಹಾಗೂ ಮುದ್ರಣದ ಬಗ್ಗೆ ವಿವರವಾಗಿ ತಿಳಿಸಿದ ತಹಶೀಲ್ದಾರ್ ಅವರು, ಜೂ.17 ರಿಂದ 19 ರ ಒಳಗಾಗಿ ವಾರ್ಡ್ಗಳ ವಿಂಗಡಣೆ ಅಧಿಸೂಚನೆಯಂತೆ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮತದಾರರನ್ನು ಗುರ್ತಿಸಬೇಕು.
ಜೂನ್ 21 ರಿಂದ 23 ರ ಒಳಗಾಗಿ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಗುರ್ತಿಸಿದ ನಂತರ ಫ್ರಮ್ ಟು ಮ್ಯಾಟ್ರಿಕ್ಸ್ ತಯಾರಿಸಿ, ಮುದ್ರಕರಿಗೆ ನೀಡಬೇಕು. ಜೂ.24 ರಿಂದ 25ರ ಒಳಗಾಗಿ ಮುದ್ರಕರಿಂದ ಪ್ರಥಮ ಚೆಕ್ಲಿಸ್ಟ್ ಪಡೆದುಕೊಂಡು ವಾರ್ಡ್ವಾರು ಮತ್ತೊಮ್ಮೆ ಪರಿಶೀಲಿಸಿ ಆಗಬೇಕಾಗಿರುವ ಬದಲಾವಣೆಯನ್ನು ಮುದ್ರಕರಿಂದ ಮಾಡಿಸುವುದು.
ಜೂ.28ಕ್ಕೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು. ಜುಲೈ 1 ಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಕೊನೆಯ ದಿನ. ಆಕ್ಷೇಪಣೆಗಳು ಇದ್ದಲ್ಲಿ ಇತ್ಯರ್ಥ ಪಡಿಸಲು ಜು. 2 ರಿಂದ 5 ರವರೆಗೆ ಅವಕಾಶ ಇರುತ್ತದೆ. ಜುಲೈ 9 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಚುನಾವಣೆ ವಿಷಯ ನಿರ್ವಾಹಕ ರಾದ ಸೋಮಶೇಖರ್, ಉಮೇಶ್, ಗುರುಪ್ರಸಾದ್, ನವೀನ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮಲೆಕ್ಕಾಧಿಕಾರಿ ಕೊಟ್ರೇಶ್ ಸಭೆಯಲ್ಲಿದ್ದರು.