ಜೂ.21ರಂದು ಮನೆಯಿಂದಲೇ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ಡಿಸಿ ಕರೆ
ದಾವಣಗೆರೆ, ಜೂ. 17 – ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಆನ್ಲೈನ್ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಿಸಲಾಗುವುದು. ಜೂ. 21ರ ಬೆಳಿಗ್ಗೆ 6 ಗಂಟೆಗೆ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಅಂದು ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ವೈದ್ಯಶ್ರೀ ಚನ್ನಬಸವಣ್ಣನವರು ಯೋಗ ಪ್ರಾತ್ಯಕ್ಷಿಕೆ ಕಲಿಸಿ ಕೊಡಲಿದ್ದಾರೆ. ಇದನ್ನು ಫೇಸ್ಬುಕ್, ಯೂಟ್ಯೂಬ್, ಗೂಗಲ್ ಮೀಟ್, ಸ್ಥಳೀಯ ಟಿವಿ ಚಾನಲ್ಗಳಲ್ಲಿ ವೀಕ್ಷಿಸಬಹುದು ಎಂದು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆಯುಷ್ ಇಲಾಖೆ,
ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಅಂಗವಾಗಿ ಜಿಲ್ಲಾ ವರದಿಗಾರರ ಕೂಟದ ಸದಸ್ಯರಿಗೆ ಆಯುಷ್ ಇಮ್ಯುನಿಟಿ ಕಿಟ್ ವಿತರಿಸಲಾಗುವುದು. ಜೂ. 18ರ ಶುಕ್ರವಾರ ಬೆಳಿಗ್ಗೆ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಾಡಿದ 18 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ : 94483 09922, 98862 97116, 98454 51787, 98440 40813 ಸಂಪರ್ಕಿಸಬಹುದು.
ಜೂ.19ರ ಶನಿವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸರಿಗೆ ಆರೋಗ್ಯರಕ್ಷ ಹಬೆ ಯಂತ್ರ ವಿತರಿಸಲಾಗುವುದು. ಅದೇ ದಿನ ಮಧ್ಯಾಹ್ನ 12ರಿಂದ 5 ಗಂಟೆಗೆ ಜಿಲ್ಲೆಯ 8 ವರ್ಷ ಮೇಲ್ಪಟ್ಟವರಿಗೆ ಆನ್ಲೈನ್ ಮೂಲಕ ಯೋಗ ಸ್ಪರ್ಧೆ ಆಯೋಜಿಸಲಾಗಿದೆ. ವಿವರಗಳಿಗಾಗಿ ಮೊ : 94800 51462, 98444 43119, 99163 31671, 90087 35273 ಸಂಪರ್ಕಿಸಬಹುದು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಮ್ಯುನಿಟಿ ಕಿಟ್ ವಿತರಣೆ, ರಕ್ತದಾನ ಶಿಬಿರ, ಹಬೆಯಂತ್ರ ವಿತರಣೆ, ಆನ್ಲೈನ್ ಯೋಗ ಸ್ಪರ್ಧೆ, ಕೊರೊನಾ ಸೋಂಕಿತರಿಗೆ ಆರೋಗ್ಯ ಯೋಗ
ಕೊರೊನಾ : ವಾರದಲ್ಲಿ ಒಳ್ಳೆಯ ವಾತಾವರಣದ ನಿರೀಕ್ಷೆ
ಕೊರೊನಾ ನಿಯಂತ್ರಣಕ್ಕೆ ವಿಧಿಸಲಾಗಿರುವ ನಿರ್ಬಂಧಗಳನ್ನು ಉಲ್ಲಂಘನೆ ಮಾಡದೇ, ಅವುಗಳನ್ನು ಪಾಲಿಸಿದರೆ ಸಂಕಷ್ಟದಿಂದ ಹೊರಬರಲು ಸಾಧ್ಯ ಎಂದಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಇನ್ನೊಂದು ವಾರದಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ಮೂಡಲಿದೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.
ಕೊರೊನಾ ಸಾವುಗಳು ಸಂಭವಿಸಿದ ಮನೆಗಳ ಸುತ್ತಲು ಹೆಚ್ಚಿನ ಟೆಸ್ಟ್ ಮಾಡುವ ಮೂಲಕ ಸೋಂಕಿತರನ್ನು ಪತ್ತೆ ಮಾಡಲಾಗುತ್ತಿದೆ. ಪ್ರತಿ ದಿನ 4 ಸಾವಿರದಷ್ಟು ಮಾದರಿಗಳನ್ನು ಪಡೆಯಲಾಗುತ್ತಿದೆ. ಇದು ಸೋಂಕು ನಿಯಂತ್ರಣಕ್ಕೆ ನೆರವಾಗುತ್ತಿದೆ ಎಂದವರು ಹೇಳಿದರು.
ಜೂ. 20ರ ಭಾನುವಾರ ಬೆಳಿಗ್ಗೆ 6 ಗಂಟೆಗೆ ನಗರದ ಜೆ.ಹೆಚ್. ಪಟೇಲ್ ವಸತಿ ನಿಲಯ, ತಾಜ್ ಪ್ಯಾಲೇಸ್ ಹಾಗೂ ತರಳಬಾಳು ವಸತಿ ನಿಲಯಗಳಲ್ಲಿರುವ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರಿಗೆ ಆರೋಗ್ಯ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜೂ. 21ರ ಸೋಮವಾರ ಬೆಳಿಗ್ಗೆ 6ರಿಂದ 8ರವರೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ನಡೆಸಲಾಗುವುದು. ಜನರು ತಮಗೆ ಬರುವ ಯಾವುದೇ ಯೋಗಾಸನಗಳನ್ನು 1 ನಿಮಿಷದ ವಿಡಿಯೋ ಮಾಡಿ ಕಳಿಸಿದರೆ, ಆಯ್ದ ನೂರು ವಿಡಿಯೋಗಳನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುವುದು. ಆಯ್ದ 10 ವಿಡಿಯೋಗಳಿಗೆ ಸೂಕ್ತ ಬಹುಮಾನ ಇರಲಿದೆ. ವಿಡಿಯೋಗಳನ್ನು ಮೊ : 94800 51462, 98444 43119, 99163 31671, 90087 35273 ಇವುಗಳ ವಾಟ್ಸಾಪ್ಗೆ ಕಳಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಕೂಟದ ಸದಸ್ಯರಿಗೆ ಆಯುಷ್ ಇಮ್ಯುನಿಟಿ ಕಿಟ್ ವಿತರಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ್ ರಾಯ್ಕರ್ ಉಪಸ್ಥಿತರಿದ್ದರು.