ದಾವಣಗೆರೆ, ಜೂ.17- ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2011ರ ಜನಗಣತಿಯಲ್ಲಿ ಒಂದು ಸಾವಿರ ಗಂಡು ಮಕ್ಕಳಿಗೆ 948 ಹೆಣ್ಣು ಮಕ್ಕಳ ಅನುಪಾತ ದಾಖಲಾಗಿದೆ. 2021 ರ ಜನಗಣತಿಗೆ ಸಿದ್ಧತೆಗಳೂ ಆಗುತ್ತಿವೆ. ಈ ಹಿಂದಿನ ಅಂಕಿ – ಅಂಶಗಳ ನಿಖರತೆಯ ಬಗ್ಗೆ ಸಂಶಯವಿದ್ದು, ಜಿಲ್ಲೆಯಲ್ಲಿ ಎಲ್ಲಾ ಗರ್ಭಿಣಿಯರ ನೋಂದಣಿ ಕಡ್ಡಾಯವಾಗಿ ಆಗಬೇಕು. ಜಿಲ್ಲೆಯ ಶಿಶು ಜನನ ಮತ್ತು ಮರಣಗಳ ಅಂಕಿ – ಅಂಶಗಳ ದಾಖಲಿಗೆ ವಿಶೇಷ ಆಪ್ ಅಭಿವೃದ್ಧಿಪಡಿಸಿದಲ್ಲಿ, ಜಿಲ್ಲೆಯಲ್ಲಿನ ಶಿಶುಗಳ ಜನನ, ಮರಣ ಮತ್ತು ಲಿಂಗಾನುಪಾತದ ನಿಖರ ಅಂಕಿ – ಅಂಶಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಪಿಸಿ ಅಂಡ್ ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎನ್.ಕೆ. ಕಾಳಪ್ಪನವರ್ ಸಲಹೆ ನೀಡಿದರು.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಇಂದು ಏರ್ಪಡಿಸಲಾಗಿದ್ದ ಜಿಲ್ಲಾ ಪಿಸಿ ಅಂಡ್ ಪಿಎನ್‍ಡಿಟಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಶುಗಳ ಜನನ, ಮರಣದ ಬಗ್ಗೆ ಆರ್‍ಸಿಹೆಚ್ ಪೋರ್ಟಲ್‍ನಲ್ಲಿ ಕೇವಲ ಬಿಪಿಎಲ್ ಕುಟುಂಬಗಳ ಶಿಶು ಜನನದ ಬಗ್ಗೆ ಮಾತ್ರ ದಾಖಲಾಗುತ್ತಿದ್ದು, ಇತರೆ ಕುಟುಂಬದ ಜನನಗಳ ಬಗ್ಗೆ ದಾಖಲಾಗುತ್ತಿಲ್ಲ. ಅಲ್ಲದೇ ಕೆಡಿಪಿ ವರದಿಯಲ್ಲಿ ಶಿಶುಗಳ ಜನನದ ಬಗ್ಗೆ ಆಯಾ ತಾಲ್ಲೂಕುವಾರು ಮಾಹಿತಿ ಸಲ್ಲಿಕೆಯಾಗುತ್ತವೆ. ಆದರೆ, ಇದರಲ್ಲಿ ಶಿಶುವಿನ ಲಿಂಗತ್ವದ ಬಗ್ಗೆ ಮಾಹಿತಿ ದಾಖಲಾಗುವುದಿಲ್ಲ. ಹೀಗಾಗಿ ಜನಗಣತಿಗೆ ಸಲ್ಲಿಕೆಯಾಗುವ ವರದಿಯಲ್ಲಿ ನ್ಯೂನತೆ ಇರುವ ಸಾಧ್ಯತೆಗಳಿದ್ದು, ಜಿಲ್ಲೆಯಲ್ಲಿ ಶಿಶುಗಳ ಜನನ ಮತ್ತು ಮರಣ, ಲಿಂಗತ್ವದ ಬಗ್ಗೆ ನಿಖರ ಅಂಕಿ-ಅಂಶ ಸಂಗ್ರಹಣೆಗೆ ಸೂಕ್ತ ವ್ಯವಸ್ಥೆ ಇದ್ದಂತೆ ಕಂಡುಬರುತ್ತಿಲ್ಲ ಎಂದು ಅವರು ಹೇಳಿದರು.
ಜಿಲ್ಲೆಯ ಹಲವಾರು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಆಗುವ ಶಿಶು ಜನನ ಅಥವಾ ಮರಣದ ಬಗ್ಗೆ ದಾಖಲು ಸರಿಯಾಗಿ ಆಗುತ್ತಿಲ್ಲ. ಗರ್ಭಿಣಿಯರ ನೋಂದಣಿ ವಿಷಯ ದಲ್ಲಿ ಬಿಪಿಎಲ್ ಕುಟುಂಬಗಳ ನೋಂದಣಿ ಮಾತ್ರ ಆಗುತ್ತಿದ್ದು, ಎಪಿಎಲ್ ಕುಟುಂಬಗಳ ನೋಂದಣಿ ಆಗುತ್ತಿಲ್ಲ. ಪ್ರತಿಯೊಬ್ಬ ತಾಯಂದಿ ರಿಗೂ ತಾಯಿ ಕಾರ್ಡ್ ನೀಡಲಾಗುತ್ತಿಲ್ಲ. ಹೀಗಾಗಿ ಶಿಶು ಜನನ, ಮರಣದ ಅಂಕಿ-ಅಂಶದಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಗರ್ಭಿಣಿಯರ ನೊಂದಣಿ ಸಂಖ್ಯೆ, ಶಿಶು ಜನನ, ಗರ್ಭಪಾತದ ಅಂಕಿ-ಅಂಶಗಳು ಒಂದಕ್ಕೊಂದು ತಾಳೆಯಾಗದಿರುವುದರಿಂದ ಲಿಂಗಾನುಪಾತದಲ್ಲಿ ಅಸಮತೋಲನ ಕಂಡುಬರುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2001 ರ ಜನಗಣತಿಯಲ್ಲಿ 1000 ಗಂಡು ಮಕ್ಕಳಿಗೆ 946 ಹೆಣ್ಣು, 2011 ರ ಜನಗಣತಿಯಲ್ಲಿ 948 ಹೆಣ್ಣು ಮಕ್ಕಳ ಅನುಪಾತ ದಾಖಲಾಗಿದೆ. ಅಂದರೆ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆ ಇದೆ ಎಂಬುದು ದಾಖಲಾಗಿದೆ.
– ಡಾ. ಎನ್.ಕೆ. ಕಾಳಪ್ಪನವರ್, ಅಧ್ಯಕ್ಷರು, ಪಿಸಿ ಅಂಡ್ ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ
ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಒ ಡಾ. ನಾಗರಾಜ್ ಅವರು, ಸರ್ಕಾರಿ ಅಥವಾ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ದಾಖಲಾಗುವ ಎಪಿಎಲ್ ಕುಟುಂಬಸ್ಥರಿಗೆ ತಾಯಿ ಕಾರ್ಡ್ ನೀಡುವುದು ಕಡ್ಡಾಯವಿಲ್ಲ, ಕಾರ್ಡ್ ಪಡೆಯಲೇಬೇಕು ಎಂದು ಒತ್ತಾಯಿಸುವಂತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಮಿತಿಯ ಸಕ್ಷಮ ಪ್ರಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಆಪ್ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಸಮಿತಿಯಿಂದ ಸ್ಥಳ ಪರಿಶೀಲನೆಗೆ ನಿರ್ಧಾರ : ಜಿಲ್ಲೆಯಲ್ಲಿ ಕೆಲವು ನರ್ಸಿಂಗ್ ಹೋಂ ಮಾಲೀಕರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಉಪಕರಣಗಳನ್ನು ಅಳವಡಿಸಲು ಹಾಗೂ ಉಪಯೋಗಿಸಲು ನಿಯಮಾನುಸಾರ ನೋಂದಣಿ ಮಾಡದೆ, ನಿಯಮಾನುಸಾರ ಮಾರಾಟ ಅಥವಾ ಸ್ಥಳಾಂತರದ ಮಾಹಿತಿ ನೀಡದೆ, ಯಂತ್ರ ಬಳಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿಯ ಸದಸ್ಯರೂ ಆದ ಸಾಮಾಜಿಕ ಸೇವಾ ಕಾರ್ಯಕರ್ತ ಎಂ.ಜಿ. ಶ್ರೀಕಾಂತ್, ಸಮಿತಿಯ ಮತ್ತೋರ್ವ ಸದಸ್ಯರೂ ಆದ ವಕೀಲ ರವಿಕುಮಾರ್ ಅವರುಗಳು ಮಾತನಾಡಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರಗಳ ಅಳವಡಿಕೆಗಾಗಿ ಅನುಮತಿ ಪಡೆಯಲು ಅಥವಾ ಸ್ಥಳಾಂತರಿಸಲು ಅಥವಾ ಮಾರಾಟ ಮಾಡಲು ಅರ್ಜಿ ಸಲ್ಲಿಸುವ ನರ್ಸಿಂಗ್ ಹೋಂಗಳು ಪಿಸಿ ಅಂಡ್ ಪಿಎನ್‍ಡಿಟಿ ಸಲಹಾ ಸಮಿತಿಯಿಂದ ನಿಯಮಾನುಸಾರ ಅನುಮತಿ ಪಡೆಯುವುದಕ್ಕೂ ಮೊದಲೇ ಬಳಕೆ ಮಾಡುತ್ತಿರುವ ಸಾಧ್ಯತೆಗಳಿವೆ. ಅನುಮತಿಗೂ ಮುನ್ನ ಅಂತಹ ಯಂತ್ರಗಳ ಬಳಕೆಯಾಗಿಲ್ಲ ಎನ್ನುವ ಬಗ್ಗೆ ಸಂಬಂಧಪಟ್ಟ ಕಂಪನಿಯಿಂದಲೇ ಅಧಿಕೃತ ದೃಢೀಕರಣ ಪಡೆದ ಬಳಿಕವೇ, ಅನುಮತಿ ನೀಡಬೇಕು. ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ಅಂತಹ ಯಂತ್ರಗಳನ್ನು ಸಕ್ಷಮ ಪ್ರಾಧಿಕಾರದಿಂದ ಜಪ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಎಂ.ರೇಣುಕಾರಾಧ್ಯ, ಸಮಿತಿಯ ಸದಸ್ಯರಾದ ಡಾ. ಸುಮಿತ್ರ ಉಪಸ್ಥಿತರಿದ್ದರು.