ಬಿಜೆಪಿಯವರು ಸ್ವಂತ ಹಣದಲ್ಲಿ ಲಸಿಕೆ ತಂದು ಫೋಟೋ ಹಾಕಿಕೊಳ್ಳಲಿ: ಎಸ್ಸೆಸ್

ದಾವಣಗೆರೆ, ಜೂ.16- ಬಿಜೆಪಿಯರು ಸರ್ಕಾರ ಕೊಡುವ ವಾಕ್ಸಿನ್‍ಗೆ ಫೋಟೋ ಹಾಕಿಕೊಳ್ಳುವುದನ್ನು ಬಿಟ್ಟು, ಸ್ವಂತ ಹಣದಲ್ಲಿ ಲಸಿಕೆ ತಂದು ಫೋಟೋ ಹಾಕಿಕೊಳ್ಳಲಿ ಎಂದು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಚಾಟಿ ಬೀಸಿದ್ದಾರೆ.

ನಗರದ ಎಂ.ಸಿ.ಸಿ.  `ಬಿ’ ಬ್ಲಾಕ್ ನ ಐಎಂಎ ಹಾಲ್ ನಲ್ಲಿ ಇಂದು ಏರ್ಪಾಡಾಗಿದ್ದ ನಗರ ಪಾಲಿಕೆಯ 38ನೇ ವಾರ್ಡಿನ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಬಡವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ಇದ್ದರೆ ಬಿಜೆಪಿಯವರು ಸ್ವಂತ ಹಣದಲ್ಲಿ ಲಸಿಕೆ ತಂದು ಜನತೆಗೆ ಹಾಕಿಸಲಿ. ನಾನು ಅವರಿಗೇಕೆ ಸಲಹೆ ಕೊಡೋಣ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮರು ಪ್ರಶ್ನೆ ಎಸೆದರು.

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಾಯಿಸಲು ನಡೆಯುತ್ತಿರುವ ಬೆಳವಣಿಗೆಯನ್ನು ಪ್ರಸ್ತಾಪಿಸಿದಾಗ, ಎಲ್ಲರೂ ಸೇರಿಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡಿಕೊಳ್ಳಲಿ. ಅದಕ್ಕೆ ನಾವೇನು ಹೇಳೋಣ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ನಾವು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರಿಗೆ ಲಸಿಕೆ ಹಾಕಿಸುತ್ತಿಲ್ಲ. ಕೊರೊನಾದಿಂದ ಸಾವಿನ ಪ್ರಮಾಣ ತಡೆಯಬೇಕೆಂಬ ಸದುದ್ದೇಶದಿಂದ ಮಾತ್ರ ಲಸಿಕೆ ಕೊಡಿಸುತ್ತಿದ್ದೇವೆಯೇ ಹೊರತು, ಇದರ ಹಿಂದೆ ಚುನಾವಣೆ ಗೆಲ್ಲುವ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಹಿತ, ಮಿತ ಆಹಾರ ಸೇವಿಸಿದರೆ ಆರೋಗ್ಯಯುತವಾಗಿ ಬದುಕಬಹುದು. ಇದೇ ತಮ್ಮ ಆರೋಗ್ಯದ ಗುಟ್ಟು ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಕಾರ್ಯಕ್ರಮದ ವೇಳೆ ನಗರ ಪಾಲಿಕೆಯ 38ನೇ ವಾರ್ಡಿನ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರ ನೇತೃತ್ವದಲ್ಲಿ ಎಸ್ಸೆಸ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಕೊಡಮಾಡಲ್ಪಟ್ಟ ದಿನಸಿ ಕಿಟ್ ಗಳನ್ನು ಪತ್ರಕರ್ತರಿಗೆ ವಿತರಿಸಲಾಯಿತು. 

ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಸದಸ್ಯರುಗಳಾದ ಚಮನ್ ಸಾಬ್, ಅಬ್ದುಲ್ ಲತೀಫ್, ವಿನಾಯಕ‌ ಪೈಲ್ವಾನ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಖಂಡರುಗಳಾದ ಗಣೇಶ್ ಹುಲ್ಲಮನಿ, ಅಯೂಬ್ ಪೈಲ್ವಾನ್, ಶ್ರೀಕಾಂತ್ ಬಗರೆ, ವರದಿಗಾರರ ಕೂಟದ ಅಧ್ಯಕ್ಷ ಜಿಎಂಆರ್ ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!