ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ ಒತ್ತಾಯ
ಹರಪನಹಳ್ಳಿ, ಜೂ.16- ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್‍ಗೆ ನಿಜವಾದ ಕಾಳಜಿ ಇದ್ದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿರುವ ರಾಜ್ಯಗ ಳಲ್ಲಿ ಮೊದಲು ಇಂಧನದ ಮೇಲಿನ ತೆರಿಗೆ ಇಳಿಸಲಿ ಎಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಎಸ್.ವಿ. ರಾಮಚಂದ್ರಪ್ಪ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಇಂಧನ ಬೆಲೆ ಹೆಚ್ಚಳದಲ್ಲಿ ಕೇಂದ್ರದ ಶುಲ್ಕ 23 ರೂಪಾಯಿ. ಅದರಲ್ಲಿ 13 ರೂ. ಮಾತ್ರ ಕೇಂದ್ರಕ್ಕೆ ಹೋಗುತ್ತದೆ. ಉಳಿದ 9.70 ರೂ. ರಾಜ್ಯಕ್ಕೆ ವರ್ಗಾವಣೆ ಆಗುತ್ತದೆ. ರಾಜ್ಯ ವ್ಯಾಟ್ ಮೂಲಕ ಶೇ.20 ರಿಂದ 26 ರಷ್ಟು ತೆರಿಗೆಯನ್ನು ಹಾಕುತ್ತಿದೆ. ಕಾಂಗ್ರೆಸ್ಸಿಗರಿಗೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರದಲ್ಲಿ ಕಳಕಳಿ ಇದ್ದಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಅಧಿಕಾರ ದಲ್ಲಿರುವ ರಾಜಸ್ಥಾನ, ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ, ಛತ್ತೀಸ್ ಘಡ, ಜಾರ್ಖಂಡ್, ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯದ ವ್ಯಾಟ್ ತೆರಿಗೆಯನ್ನು ಇಳಿಸಲಿ. ಆಗ ಇತರರನ್ನು ಪ್ರಶ್ನಿಸಲು ನೈತಿಕ ಅಧಿಕಾರ ಇರುತ್ತದೆ ಎಂದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.46 ರಷ್ಟು ಕಚ್ಚಾ ತೈಲದ ಬೆಲೆ ಏರಿಕೆಯಾದ ಹಿನ್ನೆಲೆ ಭಾರತದಲ್ಲೂ ಇಂಧನ ಬೆಲೆ ಹೆಚ್ಚಾಗಿದೆ. ಶೇ. 85ರಷ್ಟು ವಿದೇಶದಿಂದ ಆಮದು ಮಾಡಿಕೊಂಡು ತೈಲ ಬಳಸಬೇಕಿದೆ. ಇಂಧನ ವಿಚಾರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೇ ಸ್ವಾವಲಂಬನೆ ಕಡೆಗೆ ಹೆಜ್ಜೆ ಹಾಕಿದ್ದರೆ ಪರ್ಯಾಯವನ್ನು ಕಂಡುಕೊಳ್ಳಬಹುದಿತ್ತು. ಈಗ ಇಥೆನಾಲ್ ಬಳಕೆ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿಜಿಯವರು ಗಮನ ಕೊಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಬದಲಿಗೆ ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನ ಬಳಿಕೆ ಹೆಚ್ಚಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ವ್ಯವಸ್ಥಿತ ಯೋಜನೆ ರೂಪಿಸುತ್ತಿದೆ ಎಂದ ಅವರು, ಬಿಜೆಪಿ ಸರ್ಕಾರದ ಆಯುಷ್ಮಾನ್ ಯೋಜನೆ, ಗರೀಬಿ ಕಲ್ಯಾಣ, ಕಿಸಾನ್ ಸಮ್ಮಾನ್, ಕನಿಷ್ಟ ಬೆಂಬಲ ಬೆಲೆ, ಉಚಿತ ಶೌಚಾಲಯ ಕಟ್ಟಿ ಕೊಡುವ ಯೋಜನೆಗಳು ಜನರಿಗೆ ನೆರವಾಗುವ ಕೆಲಸ ಮಾಡುತ್ತಿವೆ ಎಂದರು.