ಸಮಾಜವನ್ನು ಸಾಂಸ್ಕೃತಿಕವಾಗಿ ಬಲಗೊಳಿಸುವುದೇ ನಮ್ಮ ಗುರಿ

ರಾಜನಹಳ್ಳಿ ಮಠದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ವಾಲ್ಮೀಕಿ ಪ್ರಸನ್ನಾನಂದ ಶ್ರೀ 

ಮಲೇಬೆನ್ನೂರು, ಮಾ.22- ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಬುಡಕಟ್ಟು ಸಮುದಾಯಗಳ ಸಂಶೋಧನಾ ಕೇಂದ್ರ, ಗ್ರಂಥಾಲಯ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಂಬಂಧಪಟ್ಟ ರಾಷ್ಟ್ರೀಯ ಮ್ಯೂಸಿಯಂ ಸ್ಥಾಪನೆಗೆ ಒತ್ತು ನೀಡಲಾಗುವುದೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ರಾಜನಹಳ್ಳಿಯ ಮಠದಲ್ಲಿ ಹಮ್ಮಿಕೊಂಡಿದ್ದ 3ನೇ ವರ್ಷದ ವಾಲ್ಮೀಕಿ ಜಾತ್ರೆಯ ಅಂಗವಾಗಿ ಹೊರತಂದಿರುವ `ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ-3 ರ ಸಂಪಾದಕ ಮಂಡಳಿಯವರಿಗೆ ಸನ್ಮಾನ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿ ಮಾತನಾಡಿದರು.

ವಾಲ್ಮೀಕಿ ಗುರುಪೀಠ ಹಾಗೂ ಸಮಾಜವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ವಾಲ್ಮೀಕಿ ಪ್ರಕಾಶನ, ಲಾಂಛನ, ಧ್ವಜ ಮತ್ತು ವೀರಗೀತೆ ರಚನೆಗೆ ಚಾಲನೆ ನೀಡಲಾಗಿದ್ದು, 2022 ರ ಫೆಬ್ರವರಿ 8 ಮತ್ತು 9 ರಂದು ಜರುಗುವ 4ನೇ ವರ್ಷದ ವಾಲ್ಮೀಕಿ ಜಾತ್ರೆ ವೇಳೆಗೆ ಸಿದ್ದಗೊಂಡಿರುತ್ತವೆ. ಸಂಶೋಧನಾ ಕೇಂದ್ರ, ಮ್ಯೂಸಿಯಂ ನಿರ್ಮಾಣಕ್ಕೆ ಹಿರಿಯ ಸಂಶೋಧಕರ ಅಭಿಪ್ರಾಯ ಸಂಗ್ರಹಿಸಿ, ಶೀಘ್ರ ಚಾಲನೆ ನೀಡಲಾಗುವುದು. ಇವುಗಳ ನಿರ್ಮಾಣಕ್ಕೆ ಸರ್ಕಾರ ಸ್ಪಂದಿಸಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಅಲ್ಲದೆ, ಗುರುಪೀಠಕ್ಕೆ ಸಾಂಸ್ಕೃತಿಕ ರಾಯಭಾರಿಯನ್ನು ನೇಮಕ ಮಾಡಿಕೊಳ್ಳುವ ಹಾಗೂ ವಾಲ್ಮೀಕಿ ಪ್ರಕಾಶನಕ್ಕೆ ಬೇಕಾದ ಸಂಪನ್ಮೂಲ ವಿಚಾರವಾಗಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿರುವ ಸಮಾಜದ ಅಧ್ಯಾಪಕರ, ಬರಹಗಾರರ ಜೊತೆ ಚರ್ಚಿಸಲಾಗುವುದೆಂದರು.

ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ಕಾರ ಬದ್ಧತೆ ಪ್ರದರ್ಶಿಸ ಬೇಕು. ಮೀಸಲಾತಿ ಎನ್ನುವುದು ಆರ್ಥಿಕ ಮಾನದಂಡವಲ್ಲ. ಅದೊಂದು ಸಾಮಾಜಿಕ ನ್ಯಾಯ ಎಂಬುದನ್ನು ಅರ್ಥಮಾಡಿಕೊಳ್ಳ ಬೇಕು. ನಮ್ಮ ಹೋರಾಟ ಯಾವ ಪ್ರಾಯೋಜಕತ್ವದಿಂದ ಕೂಡಿಲ್ಲ. ನ್ಯಾಯ ಸಮೇತವಾಗಿ ಮತ್ತು ಸಾಮಾಜಿಕವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಹಗರಿಬೊಮ್ಮನಹಳ್ಳಿಯ ಪ್ರಾಚಾರ್ಯ ಡಾ. ಎಂ.ಕೆ. ದುರುಗಪ್ಪ ಮಾತನಾಡಿ,`ವಾಲ್ಮೀಕಿ ಜಾತ್ರೆ’ ಜನಮುಖಿಯಾಗಿದೆ. ಸಾಂಸ್ಕೃತಿಕ ಗಟ್ಟಿತನದಿಂದ ಮಠವನ್ನು ಬೆಳೆಸಬೇಕು. ಚರಿತ್ರೆಯನ್ನು ಉಳಿಸುವ ನಿಟ್ಟಿನಲ್ಲಿ ಸ್ಮರಣ ಸಂಪುಟ ಸಿದ್ದಗೊಳ್ಳಬೇಕು. ಪ್ರಭುತ್ವಕ್ಕಿಂತ ಹೆಚ್ಚು ಒತ್ತನ್ನು ವಾಲ್ಮೀಕಿ ಜಾತ್ರೆಯಲ್ಲಿ ಸಾಂಸ್ಕೃತಿಕ, ಸಾಹಿತ್ಯ, ಕಲೆಗೆ ಕೊಡಬೇಕು. ಚರಿತ್ರೆ ಬಗ್ಗೆ ಬರೆಯುವವರು ಬರಹದ ಮೇಲೆ ಹಿಡಿತ ಮತ್ತು ಪರಾಮರ್ಶೆ ಹೊಂದಿರಬೇಕೆಂದರು.

ಕುವೆಂಪು ವಿ.ವಿ.ಯ ಅಧ್ಯಾಪಕ ಡಾ. ಪ್ರಶಾಂತ ನಾಯಕ ಮಾತನಾಡಿ, ವಾಲ್ಮೀಕಿ ಜಾತ್ರೆ, ರಾಜಕೀಯ ಜಾತ್ರೆ ಆಗದೆ ಸಾಂಸ್ಕೃತಿಕ ಜಾತ್ರೆ ಆಗಬೇಕು. ಮಠದ ಪ್ರಕಾಶನದ ಕಿರು ಪುಸ್ತಕಗಳನ್ನು ಹೊರತರಬೇಕು. ಪ್ರಭುತ್ವಕ್ಕಿಂತ ಸಾಂಸ್ಕೃತಿಕ ವ್ಯವಸ್ಥೆಗೆ ಹೆಚ್ಚು ಶಕ್ತಿ ಇದೆ. ಸಮಾಜದ ಬಗ್ಗೆ ಎಲ್ಲಾ ಜನರಲ್ಲಿ ಗೌರವ ಹೆಚ್ಚಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಸ್ವಾಮೀಜಿ ಅವರಿಗೆ ಮನವಿ ಮಾಡಿದರು.

ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಮೂಲ ವಾಲ್ಮೀಕಿ ರಾಮಾಯಣವನ್ನು ಬಹಳಷ್ಟು ಜನ ಓದಿಲ್ಲ. ವಾಲ್ಮೀಕಿ ದರೋಡೆಕೋರ ಅಲ್ಲ ಎಂಬುದನ್ನು ವಾಲ್ಮೀಕಿ ಬಗ್ಗೆ ಮಾತನಾಡುವವರು ಓದಿ ತಿಳಿದುಕೊಳ್ಳಬೇಕೆಂದರು.

`ವಾಲ್ಮೀಕಿ ವಿಜಯ’ ಸ್ಮರಣ ಸಂಪುಟ-3 ರ ಪ್ರಧಾನ ಸಂಪಾದಕ ಡಾ. ಎ.ಬಿ. ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೊ. ಬರಗೂರು ರಾಮಚಂದ್ರಪ್ಪ ಅವರು ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯಗಳ ರಾಷ್ಟ್ರೀಯ ಮ್ಯೂಸಿಯಂ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಸರ್ಕಾರ ಅವರ ಮನವಿಯನ್ನು ಪುರಸ್ಕರಿಸಿ, ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಅದನ್ನು ರಾಜನಹಳ್ಳಿ ಮಠದಲ್ಲಿ ನಿರ್ಮಿಸಬೇಕೆಂಬುದು ಬರಗೂರು ಅವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಶ್ರೀಗಳು ನಿರ್ಧಾರ ಕೈಗೊಳ್ಳಲಿ ಎಂದರು.

ಮಠವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಬೇಕು. ಅಲಕ್ಷಿತ ಸಮುದಾಯಗಳನ್ನು ಒಳಗೊಂಡ ಪ್ರಕಾಶನ ರಚನೆಗೆ ಚಿಂತನೆ ನಡೆದಿದೆ. ವಾಲ್ಮೀಕಿಯನ್ನು ಯಾರೂ ದರೋಡೆಕೋರ ಎಂದು ಕರೆಯದಂತೆ ರಾಜ್ಯ ಸರ್ಕಾರ ವಿವಿಧ ನ್ಯಾಯಾಲಯಗಳ ಆದೇಶವನ್ನು ಪರಿಶೀಲಿಸಿ, ಆದೇಶವನ್ನು ಹೋರಡಿಸಬೇಕೆಂದು ಡಾ. ಎ.ಬಿ. ರಾಮಚಂದ್ರಪ್ಪ ಆಗ್ರಹಿಸಿದರು.

ಹರ್ತಿಕೋಟೆ ವೀರೇಂದ್ರಸಿಂಹ, ಹೊದಿಗೆರೆ ರಮೇಶ್‌, ಕೆಪಿಟಿಸಿಎಲ್‌ ಎಇಇ ಕೆ.ಎಸ್‌. ಜಯಪ್ಪ, ಹರಿಹರ ತಾ. ಪ್ರಾ. ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್‌. ಚಂದ್ರಪ್ಪ, ಅಧ್ಯಾಪಕರಾದ ಡಾ. ವಿನಯ್‌, ಡಾ. ಎಂ. ಮಂಜಣ್ಣ, ಡಾ. ಎಂ.ಹೆಚ್‌. ಪ್ರಹ್ಲಾದಪ್ಪ, ಡಾ. ಹೆಚ್‌.ಬಿ. ಮಂಜಪ್ಪ, ಡಾ. ಹೆಚ್‌. ತಿಪ್ಪೇಸ್ವಾಮಿ, ಡಾ. ನಂಜುಂಡಸ್ವಾಮಿ ಹರದನಹಳ್ಳಿ, ಡಾ. ಹೆಚ್‌.ಆರ್‌. ತಿಪ್ಪೇಸ್ವಾಮಿ, ನಾಗರಾಜ ನಾಯಕ ಡೊಳ್ಳಿನ, ಟಿ.ಜಿ. ರಾಘವೇಂದ್ರ, ಪ್ರೊ. ರಂಗಪ್ಪ, ಡಾ. ಮೋಹನ್‌ ಚಂದ್ರಗುತ್ತಿ, ಡಾ. ಓ. ದೇವರಾಜ್‌, ಡಾ. ಆಂಜನೇಯ, ಡಾ. ಹರಾಳು ಬುಳ್ಳಪ್ಪ, ಮೈಸೂರು ವಿ.ವಿ ಸಂಶೋಧಕ ಆರ್‌. ಕುಮಾರ್‌, ಅನುಷ, ಪತ್ರಕರ್ತರಾದ ಬಸವರಾಜ್ ದೊಡ್ಮನಿ, ಯಳನಾಡು ಮಂಜು, ಜಿಗಳಿ ಪ್ರಕಾಶ್‌, ಯುವ ಹೋರಾಟಗಾರ ರಾಘು ದೊಡ್ಮನಿ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!